ಚಂದ್ರ-ಇನ್ನು ನೀರನ್ನುಪಯೋಗಿಸಬೇಕಾದ ಕ್ರಮವನ್ನೂ ದಯೆಯಿಟ್ಟು ತಿಳಿಸುವಿರಾ?
ಗುರು-ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕಾದಪಕ್ಷದಲ್ಲಿ ನಿರ್ಮಲವಾಯುವು ಹೇಗೆ ಆವಶ್ಯಕವೋ ಪಾನಮಾಡುವುದಕ್ಕೆ ನಿರ್ಮಲವಾದ ನೀರೂ ಹಾಗೆಯೇ ಆವಶ್ಯಕವು. ಆದುದರಿಂದ ನದಿಗಳಲ್ಲಿಯಾಗಲಿ, ಕೆರೆಗಳಲ್ಲಿಯಾಗಲಿ ಕೊಳೆಯಿಂದ ಕೂಡಿರುವ ನೀರನ್ನು ಯಾವಾಗಲೂ ಕುಡಿಯದೆ ಚೆನ್ನಾಗಿ ಶೋಧಿಸಲ್ಪಟ್ಟ ತಿಳಿನೀರನ್ನೇ ಪಾನಮಾಡಬೇಕು. ನಾವು ಕುಡಿಯುವನೀರನ್ನು ತೆಗೆದುಕೊಂಡು ಬರುವಂತಹ ಜಲಾಶಯಗಳಲ್ಲಿ ಸ್ನಾನಮಾಡುವುದು ಮುಸುರೆಯ ಪಾತ್ರೆಗಳನ್ನು ತೊಳೆಯುವುದು ಬಟ್ಟೆಗಳನ್ನೊಗೆಯುವುದು, ಇವೇ ಮೊದಲಾದ ಕೆಲಸಗಳನ್ನು ಮಾಡಬಾರದು. ಹೀಗೆ ಮಾಡುವುದರಿಂದ ನೀರು ಕೆಟ್ಟುಹೋಗಿ ಅದನ್ನು ಕುಡಿಯುವವರಿಗೆ ರೋಗಾದಿಗಳು ಉಂಟಾಗುವುವು.
ಚಂದ್ರ-ನಾವು ತೆಗೆದುಕೊಳ್ಳಬೇಕಾದ ಆಹಾರವೆಂತಹುದೋ, ಆವಾವಕಾಲದಲ್ಲಿ ಭೋಜನವನ್ನು ಮಾಡಬೇಕೋ ಅದನ್ನೂ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು.
ಗುರು-ಆರೋಗ್ಯಕರವೂ, ಪುಷ್ಟಿಕರವೂ ಆದ ಪದಾರ್ಥವನ್ನು ಮಾತ್ರವೇ ಭುಂಜಿಸುತ್ತೆ, ದೇಹಕ್ಕೆ ಆಲಸ್ಯವನ್ನುಂಟುಮಾಡುವಂತಹ ಅಜೀರ್ಣಕರಗಳಾದ ಪದಾರ್ಥಗಳನ್ನಾವಾಗಲೂ ತಿನ್ನದಿರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸೊಪ್ಪಿನ ತರಕಾರಿಗಳನ್ನು ತಿನ್ನಕೂಡದು. ಒಳ್ಳೆಯಪದಾರ್ಥವೆಂದೆಣಿಸಿ ನಾವು ಮಿತಿಮಿಾರಿ ತಿಂದುಬಿಟ್ಟರೆ ಅಜೀರ್ಣಾದಿ ವ್ಯಾಧಿಗಳು ಸಂಪ್ರಾಪ್ತವಾಗುವುವು. ಎಳೆಮಕ್ಕಳು ದಿನಕ್ಕೆ ಮೂರುನಾಲ್ಕು ಬಾರಿ ಊಟಮಾಡಬೇಕು. ದೊಡ್ಡವರು ಪ್ರತಿದಿನವೂ ಎರಡುಬಾರಿ ಕ್ರಮಕಾಲದಲ್ಲಿ ಊಟಮಾಡುತ್ತೆ ಯಾವಾಗಲೂ ಒಂದೇಪದಾರ್ಥವನ್ನೇ ತಿನ್ನುತ್ತಿರದೆ ಬೇರೆಬೇರೆ ಬಗೆಯ ಕಾಯಿಪಲ್ಲೆಯಗಳನ್ನೂ ರಸವರ್ಗಗಳನ್ನೂ ತಿನ್ನಬೇಕು. ವ್ರತನಿಯಮಗಳೆಂಬ ವ್ಯಾಜದಿಂದ ಕ್ರಮತಪ್ಪಿ ಊಟಮಾಡುವುದೂ, ಒಂದುಹೊತ್ತು ಮಾತ್ರ ಭುಜಿಸುವುದೂ, ಉಪವಾಸಗಳನ್ನು ಮಾಡುವುದೂ,