ಪ್ರಾತಃಕಾಲಗಳಲ್ಲಿ ತಣ್ಣೀರಿನ ಸ್ನಾನವನ್ನು ಮಾಡಬೇಕು; ಬಲಹೀನರೂ ವ್ಯಾಧಿಗ್ರಸ್ತರೂ ಉಗುರುಬಿಸಿಯಾದ ನೀರಿನಲ್ಲಿ ಸ್ನಾನಮಾಡಬೇಕು; ಬಲುಬಿಸಿಯಾದ ನೀರಿನಲ್ಲಿ ಸ್ನಾನಮಾಡುವುದು ಮೈಗೆ ಒಳ್ಳೆಯದಲ್ಲ; ಆದುದರಿಂದ ಮಕ್ಕಳು ನಿದ್ರೆಹೋಗುವರೆಂದು ಭ್ರಮಿಸಿ ಬಲುಬಿಸಿಯಾದ ನೀರನ್ನೆರೆಯುವ ದುರಾಚಾರವನ್ನು ತಿಳಿವುಳ್ಳವರೆಲ್ಲರೂ ಬಿಡಬೇಕು.
ಚಂದ್ರ - ಇನ್ನು ನಿದ್ರೆಯ ವಿಚಾರವೊಂದುಳಿಯಿತು. ಅದನ್ನೂ ಅಪ್ಪಣೆಕೊಡಿಸುವಿರಾ?
ಗುರು- ಪ್ರತಿದಿನವೂ ರಾತ್ರಿ ಹತ್ತು ಗಂಟೆಗೆ ಮಲಗಿ ಪ್ರಾತಃಕಾಲದಲ್ಲಿ ಸೂರ್ಯೋದಯವಾಗುವುದಕ್ಕೆ ಮೊದಲೆ ಏಳಬೇಕು. ಸಾಧಾರಣವಾಗಿ ದಿನವೊಂದಕ್ಕೆ ಎರಡುಜಾವ ನಿದ್ರಿಸಬೇಕು. ಹಗಲುಹೊತ್ತಿನಲ್ಲಿ ನಿದ್ರಿಸುವುದು ಒಳ್ಳೆಯ ಪದ್ಧತಿಯಲ್ಲ. ಸಣ್ಣ ಮಕ್ಕಳಿಗೆ ಹೆಚ್ಚಾದನಿದ್ರೆಯು ಆವಶ್ಯಕವಾದುದರಿಂದ ಅವರನ್ನು ಹಗಲಲ್ಲಿ ನಿದ್ರಿಸುವಂತೆ ಮಾಡಬೇಕು. ನಿದ್ರಾಭಂಗದಿಂದ ಆಲಸ್ಯವುಂಟಾಗುವುದಾದುದರಿಂದ ಜಾಗರಣೆ ಮಾಡಲಾಗದು.
ಚಂದ್ರ - ಈಗ ತಿಳಿಸಿದುವುಗಳಲ್ಲದೆ ದೇಹಾರೋಗ್ಯದ ವಿಷಯವಾಗಿ ಹೇಳಬೇಕಾದುದು ಮತ್ತೇನಾದರೂ ಇರುವುದೇ ?
ಗುರು -ಮುಖ್ಯವಾದುದು ಇನ್ನೊಂದಿರುವುದು. ಪ್ರತಿದಿನವೂ ಸ್ವಲ್ಪ ಕಾಲ ದೇಹಪರಿಶ್ರಮವನ್ನು ಮಾಡುವುದು ಅತ್ಯಾವಶ್ಯಕವು. ಆವಕಾರ್ಯವನ್ನೂ ಮಾಡದೆ ಸುಮ್ಮನೆ ಕುಳಿತಿದ್ದ ಪಕ್ಷದಲ್ಲಿ, ದೇಹವು ಬಲಹೀನವಾಗಿ ವ್ಯಾಧಿಗಳುಂಟಾಗುವುವು. ಈ ಕಾರಣದಿಂದಲೇ, ಕಷ್ಟ ಪಡದೆ ತಿಂದು ತಿಂದು ಕುಳಿತುಕೊಳ್ಳುವ ಧನಿಕರ ಸ್ತ್ರೀಯರಿಗಿಂತ ಕಷ್ಟ ಪಟ್ಟು ಕೆಲಸಮಾಡುವ ಬಡವರ ಸ್ತ್ರೀಯರು ಬಲಶಾಲಿನಿಯರಾಗಿರುವರು. ಆದುದರಿಂದ ದಾಸದಾಸೀ ಜನರಿರುವ ಧನಿಕರಾದವರೂಕೂಡ ಮನೆಗಳಲ್ಲಿ ಕೆಲಸಕಾರ್ಯಗಳನ್ನು ಮಾಡಿಕೊಂಡು ಚಿರಕಾಲಾಯುರಾರೋಗ್ಯಗಳನ್ನು ಅನುಭವಿಸಬೇಕು.