ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹದಿನಾಲ್ಕನೆಯ ಪ್ರಕರಣ.
೭೩


ಪುತ್ರಶೋಕದಿಂದ ಮೂರ್ಛೆಗೊಂಡು ನೆಲದಮೇಲೆ ಬಿದ್ದನು. ಚ೦ದ್ರಮತಿಯು ತನ್ನ ದುಃಖವನ್ನು ಮರೆತು ಗಂಡನನ್ನು ಎಚ್ಚರಗೊಳಿಸಿ ಉಪಚಾರ ಮಾಡಿ, ಧೈರ್ಯವನ್ನು ಹೇಳಿ, ಸ್ವಾಮಿಕಾರ್ಯದಲ್ಲಿ ಹಿಂತೆಗೆಯುವುದು ಉಚಿತವಲ್ಲವೆಂದೂ ಆಪತ್ಕಾಲಗಳಲ್ಲಿ ಧೈರ್ಯವನ್ನು ಬಿಟ್ಟು ಶೋಕಿಸುವುದು ವಿವೇಕಿಗಳ ಧರ್ಮವಲ್ಲವೆಂದೂ, ಬೋಧಿಸಿ, ಹಣವನ್ನು ಸಂವಾದಿಸಿಕೊಂಡು ಬರುವುದಕ್ಕೆ ತಕ್ಕ ಉಪಾಯವನ್ನು ತಿಳಿಸಬೇಕೆಂದೂ ಪತಿಯನ್ನು ಪ್ರಾರ್ಥಿಸಿದಳು. ಪತ್ನಿಯ ಹಿತಬೋಧನೆಯಿಂದ ಹರಿಶ್ಚಂದ್ರನು ದುಃಖವನ್ನು ತ್ಯಜಿಸಿ ಧೈರ್ಯವನ್ನು ಹೊಂದಿ, ಸ್ವಲ್ಪ ಕಾಲದವರೆಗೂ ಆಲೋಚಿಸಿ "ನೀನು ಹೇಗಾದರೂ ಮಾಡಿ ನಿನ್ನ ದಾಸ್ಯಕ್ಕೆ ಅಧಿಪತಿಯಾಗಿರುವ ಆ ಬ್ರಾಹ್ಮಣನಿಗೆ ಕರುಣೆಯುಂಟಾಗುವಂತೆ ಪ್ರಾರ್ಥಿಸಿ ಒಂದು ಹಣವನ್ನು ಆತನಿ೦ದ ತೆಗೆದುಕೊಂಡು ಬಂದು ಈ ಬಾಲಕನ ದಹನಕಾರ್ಯವನ್ನು ಮಾಡು" ಎಂದು ಹೇಳಿ ಹೆಂಡತಿಯನ್ನು ಕಳುಹಿಸಿದನು. ಆಕೆಯೊಬ್ಬಳೇ ಕತ್ತಲೆಯಲ್ಲಿ ಅಳುತ್ತೆ ಪಟ್ಟಣದ ಬೀದಿಗಳನ್ನು ಹಾದು ಬರುತ್ತಿರುವಾಗ ಒಬ್ಬ ಬ್ರಾಹ್ಮಣನು ಇದಿರಾಗಿ ಬಂದು, ಆಕೆಯ ದುಃಖಕ್ಕೆ ಕಾರಣವನ್ನು ವಿಚಾರಿಸಿ ತಿಳಿದುಕೊಂಡು, ಮರುಕಗೊಂಡವನಂತೆ ನಟಿಸಿ ಆಭರಣದ ಒಂದು ಗಂಟನ್ನು ಆಕೆಯ ಕೈಗೆ ಕೊಟ್ಟು, ಚಂದ್ರಮತಿಯು ಬೇಡವೆನ್ನುತಿದರೂ ಕೇಳದೆ ಹೊರಟುಹೋದನು. ಸ್ವಲ್ಪ ಕಾಲದೊಳಗಾಗಿ ಅದೇ ಬ್ರಾಹ್ಮಣನೇ ಮತ್ತೆ ಬಂದು "ರಾಜಕುಮಾರನನ್ನು ಸಂಹರಿಸಿ, ಅವನ ಆಭರಣಗಳನ್ನು ಅಪಹರಿಸಿಕೊಂಡುಬಂದ ಪಾಪಾತ್ಮಳು ಇವಳೇ. ಇದೊ, ಓಡಿ ಹೋಗುತ್ತಿರುವಳು" ಎಂದು ರಾಜಭಟ್ಟರಿಗೆ ತಿಳಿಸಿ ಹೊರಟುಹೋದನು. ಆ ರಾಜಭಟರಾಕೆಯಾಡುವ ಮಾತುಗಳನ್ನು ಆಲಿಸದೆ, ಆಭರಣಸಹಿತಳಾದ ಆ ಚಂದ್ರಮತಿಯನ್ನು ಕರೆದುಕೊಂಡುಹೋಗಿ, ಅರಸನಿದಿರಾಗಿ "ಇವಳೇ ಶಿಶುಹತ್ಯೆ ಮಾಡಿದ ರಾಕ್ಷಸಿ" ಎಂದು ಹೇಳಿ ನಿಲ್ಲಿಸಿದರು. ಮಗನನ್ನು ಕೊಂದಳೆಂಬ ಕೋಪದಿಂದ ಅರಸು ಆವುದನ್ನೂ ವಿಮರ್ಶಿಸದೆ, ರಾಜಸಭೆಯಲ್ಲಿ ಮಾತಾಡಲುಸಿರಿಲ್ಲದೆ ಮೌನವಾಗಿದ್ದ ನಿರಪರಾಧಿನಿಯಾದಾ ಚಂದ್ರಮತಿಗೆ ಶಿರಶ್ಛೇದನವನ್ನು ಮಾಡುವಂತೆ ಆಜ್ಞಾಪಿಸಿ, ರಾಜಭಟರೊಂದಿಗೆ ಅವಳನ್ನು ಕಳುಹಿಸಿಬಿಟ್ಟನು. ಅವರಾಕೆಯನ್ನು ಕರೆದುಕೊಂಡು ಹೋಗಿ ರಾಜಾಜ್ಞೆಯನ್ನು ತಿಳಿಸಿ ತಲೆಗಡಿಯುವುದಕ್ಕೆ ವೀರಬಾಹುವಿಗೊಪ್ಪಿಸಿದರು.