ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹದಿನೈದನೆಯ ಪ್ರಕರಣ.



ರಾಜಭಟರು ಚಂದ್ರಮತಿಯನ್ನು ಕರೆದುಕೊಂಡು ಹೋಗಿ ವೀರಬಾಹುವಿಗೊಪ್ಪಿಸಿ, ರಾಜಾಜ್ಞೆಯನ್ನು ತಿಳಿಸಲು, ಆತನವಳನ್ನು ತನ್ನ ಸೇವಕರೊಡನೆ ಹರಿಶ್ಚಂದ್ರನ ಬಳಿಗೆ ಕಳುಹಿಸಿ ಶಿರಚ್ಛೇದನವನ್ನು ಮಾಡಿಸುವಂತೆ ಆಜ್ಞಾಪಿಸಿದನು. ಆ ಪಟ್ಟಣದಲ್ಲಿಯೇ ರಹಸ್ಯವಾಗಿದ್ದು ಅಲ್ಲಿ ನಡೆಯುತ್ತಿದ್ದ ವಿಷಯಗಳನ್ನೆಲ್ಲ ನೋಡುತ್ತಿದ್ದ ವಿಶ್ವಾಮಿತ್ರನು, ಮುಂದೇನು ನಡೆಯುವುದೋ ನೋಡಬೇಕೆಂದು ಚಂದ್ರಮತಿಯ ಹಿಂದೆಯೇ ಸ್ಮಶಾನವಾಟಿಗೆ ಹೊರಟನು. ವೀರಬಾಹುವಿನ ಸೇವಕರು ಚಂದ್ರಮತಿಯನ್ನು ಕರೆದುಕೊಂಡು ಹೋಗಿ ತಮ್ಮ ಸ್ವಾಮಿಯ ಆಜ್ಞೆಯನ್ನು ಹರಿಶ್ಚಂದ್ರನಿಗೆ ತಿಳಿಸಿ ತಾವು ದೂರವಾಗಿ ನಿಂತುಕೊಂಡರು. ಆ ಮಾತುಗಳನ್ನು ಕೇಳಿದೆ ತತ್ ಕ್ಷಣವೇ ಹರಿಶ್ಚಂದ್ರನು ಧೈರ್ಯಹೀನನಾಗಿ ಸ್ವಲ್ಪಕಾಲ ಮುಂದುಗಾಣದವನಾಗಿದ್ದು ಏನುಮಾಡುವುದಕ್ಕೂ ತೋರದೆ ಕಣ್ಣೀರು ಸುರಿಸುತ್ತೆ ತಲೆಬಾಗಿ ನಿಂತಿದ್ದನು. ಆ ಸಮಯದಲ್ಲಿ ಚಂದ್ರಮತಿಯು ಗಂಡನಿಗೆ ಧೈರ್ಯವನ್ನು ಹೇಳಿ, ಸ್ವಾಮಿಕಾರ್ಯವನ್ನು ನಿರ್ವಹಿಸುವುದು ಅವಶ್ಯ ಕರ್ತವ್ಯವೆಂದೂ, ಮನುಷ್ಯರೂ ದೇವತೆಗಳೂ ಮೆಚ್ಚುವಂತೆ ಸ್ವಕೃತ್ಯವನ್ನು ಕ್ರಮವಾಗಿ ನೆರವೇರಿಸಬೇಕೆಂದೂ, ತನ್ನಮೇಲಣ ಪ್ರೇಮಾನುಬಂಧವನ್ನು ಮರೆತು ಧರ್ಮದಲ್ಲಿಯೇ ಬುದ್ದಿಯನ್ನು ನಿಲ್ಲಿಸಬೇಕೆಂದೂ, ಹಲವುಬಗೆಯಾಗಿ ಬೋಧಿಸಿ, ಆತನನ್ನೊಪ್ಪಿಸಿ, ತನ್ನ ಪ್ರಾಣಕಾಂತನು ಯಾವಾಗಲೂ ಸತ್ಯಚ್ಯುತನಾಗದೆ ಇಹಲೋಕದಲ್ಲಿ ನಿತ್ಯಸುಖವನ್ನು ಹೊಂದುವಂತೆ ಅನುಗ್ರಹಿಸಬೇಕೆಂದು ಜಗದೀಶ್ವರನನ್ನು ಪ್ರಾರ್ಥಿಸಿ, ತನ್ನ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಿ, ನಿಶ್ಚಲಳಾಗಿ ಕತ್ತಿಯಪೆಟ್ಟಿಗೆ ಹೆದರದೆ ತಲೆಬಾಗಿಸಿ, ವಧ್ಯಶಿಲೆಯಲ್ಲಿ ಕುಳಿತುಕೊಂಡಳು. ಹರಿಶ್ಚಂದ್ರನೂ ಒಳಗಣಿಂದ ಉಕ್ಕಿ ಬರುತ್ತಿದ್ದ ದುಃಖವನ್ನು ಅಡಗಿಸಿಕೊಂಡು, ಸ್ವಾಮಿಕಾರ್ಯವನ್ನು ಮಾಡದಿರಲಾಗದೆಂದು ನಿರ್ಧರಿಸಿ ಖಡ್ಗವನ್ನು ಹಿರಿದು ಆಕೆಯ ತಲೆಯನ್ನು ಕಡಿಯುವುದಕ್ಕೆ ಗುರಿನೋಡುತ್ತೆ ಕೈಯನ್ನು ಮೇಲಕ್ಕೆತ್ತಿದನು.

ಆಗ ನೋಡುವುದಕ್ಕೆ ಬಂದಿದ್ದ ಜನಸಂದಣಿಯೊಳಗಣಿಂದ ವಿಶ್ವಾ