ಮಿತ್ರನು ಓಡಿಬಂದು ಹರಿಶ್ಚಂದ್ರನ ಕೈಯನ್ನು ಹಿಡಿದು ನಿಲ್ಲಿಸಿ ಹೀಗೆಂದನು.
ವಿಶ್ವಾ- ಎಲೈ, ರಾಜೋತ್ತಮನೇ! ಇದುವರೆಗೂ ನೀನು ಭೂತದಯಾಪರನೆಂದೂ, ಪುಣ್ಯಚರಿತ್ರನೆಂದೂ ಪ್ರಸಿದ್ದಿಯನ್ನು ಹೊಂದಿ, ಕಟ್ಟಕಡೆಗೆ ಇಂತಹ ಕ್ರೂರ ಕೃತ್ಯವನ್ನು ಮಾಡುವುದಕ್ಕೆ ಸನ್ನದ್ಧನಾಗಿ ಸ್ತ್ರೀಹತ್ಯೆಯನ್ನು ಮಾಡುವುದು ನಿನ್ನಂತಹ ಧರ್ಮಶೀಲನಿಗೆ ಉಚಿತವಲ್ಲ. ಉತ್ತಮಳಾದ ಕುಲಾಂಗನೆಯನ್ನು ಕೊಂದು ಮುಂದೆ ಆವ ಸುಖವನ್ನು ಹೊಂದೀಯೆ? ಈಗಲಾದರೂ ನನ್ನ ಮಾತನ್ನು ಕೇಳಿ ನೀನೊಂದು ಸುಳ್ಳನ್ನು ಹೇಳು. ತತ್‌ಕ್ಷಣವೇ ನಾನು ನಿನ್ನ ಮಗನನ್ನು ಜೀವಿಸುವಂತೆ ಮಾಡಿ, ನಿನ್ನ ಪತ್ನಿಯನ್ನು ಕ್ಷಮಿಸುವಂತೆ ಅರಸನನ್ನು ಪ್ರಾರ್ಥಿಸಿ, ನಿನ್ನನ್ನು ಪತ್ನಿ ಸಮೇತನನ್ನಾಗಿ ನಿನ್ನ ರಾಜ್ಯಕ್ಕೆ ಮತ್ತೆ ಕಳುಹಿಸುವೆನು. ಇನ್ನು ಮರುಮಾತಾಡದೆ ನಾನು ಹೇಳಿದಂತೆ ಮಾಡು.
ಹರಿ-ಎಲೈ, ಮುನಿವರ್ಯನೆ! ನನ್ನನ್ನು ಅಧರ್ಮಕ್ಕೆ ಸೆಳೆಯಬೇಕೆಂದು ಪ್ರಯತ್ನಿಸುವುದು ನಿನ್ನಂತಹ ಸಮಸ್ತ ಧರ್ಮವೇನಿಗೆ ನ್ಯಾಯವೇ? ಧರ್ಮಮಾರ್ಗವನ್ನು ತ್ಯಜಿಸುವುದರಿಂದ ಲಭಿಸಬಹುದಾಗಿದ್ದರೆ ಆ ಸ್ವರ್ಗ ಲೋಕವೂ ನನಗೆ ಬೇಡ. ಮನಸ್ಥೈರ್ಯವಿಲ್ಲದೆ ವಿಪತ್ತು ಸಂಭವಿಸಿದ ಕಾಲದಲ್ಲಿ ಹರಿಶ್ಚಂದ್ರನು ಧರ್ಮಚ್ಯುತನಾದನೆಂದು ನಿಂದೆಯನ್ನು ಹೊಂದಿ ಅತಿತುಚ್ಛವಾದ ಸುಖವನ್ನು ಹೊಂದುವುದಕ್ಕಿಂತ ಸಾಯುವುದೇ ಲೇಸು. ತಾವು ನನ್ನಲ್ಲಿ ಅನುಗ್ರಹವಿಟ್ಟು ಇನ್ನು ಮುಂದೆ ಇಂತಹ ಮಾತುಗಳನ್ನು ಅಪ್ಪಣೆಕೊಡಿಸಲಾಗದು. ಈಗ ನನ್ನ ಕೈಯಲ್ಲಿರುವ ಖಡ್ಗವನ್ನು ತಡೆಯದೆ ತಾವು ಸ್ವಲ್ಪ ಕಾಲ ಹೊರಕ್ಕೆ ದಯಮಾಡಿಸಿರಿ. ಸ್ತ್ರೀವಧೆಯು ನಡೆಯುತ್ತಿರುವಾಗ ಇದಿರಾಗಿನಿಂತು ನೋಡುವುದು ಸರ್ವಸಂಗಪರಿತ್ಯಾಗವನ್ನು ಮಾಡಿ ತಪಸ್ವಿಗಳಾಗಿರುವ ತಮ್ಮಂತಹರಿಗೆ ಸಲ್ಲದು.
ಎಂದು ನಿಶ್ಚಂಕೆಯಾಗಿ ನುಡಿವ ಹರಿಶ್ಚಂದ್ರನ ಸತ್ಯತೆಯನ್ನೂ ಧರ್ಮ ಚಿಂತೆಯನ್ನೂ ಕಂಡು ವಿಶ್ವಾಮಿತ್ರನು ಆಶ್ಚರ್ಯಪಟ್ಟು, ಇನ್ನು ಆತನಿಂದ ಅಸತ್ಯವನ್ನಾಡಿಸುವೆನೆಂಬ ದುರ್ಭಾವನೆಯನ್ನು ಬಿಟ್ಟು, ಇಂತಹ ಆಪತ್ಸಮಯದಲ್ಲಿ ಉಪೇಕ್ಷಿಸುವುದು ಕ್ರೂರಕಿರಾತಕೃತ್ಯವಾಗುವುದಲ್ಲದೆ ಮಾನುಷ ಕೃತ್ಯವಲ್ಲವೆಂದು ನಿಶ್ಚಯಿಸಿ, ಹರಿಶ್ಚಂದ್ರನ ಕೈಯನ್ನು ಹಿಡಿದುಕೊಂಡು,