ಈ ಪುಟವನ್ನು ಪ್ರಕಟಿಸಲಾಗಿದೆ
ಕಾವ್ಯಗಳು, ಸಾಹಿತ್ಯ, ಅನುಭವ, ಕಲ್ಪನೆ ಮೊದಲಾದ ಅನೇಕಾನೇಕ ರೂಪದ ಸಾಮಗ್ರಿಯನ್ನು ಅರ್ಥದಲ್ಲಿ ತಂದು ಹೊಂದಿಸಿ ಅವೆಲ್ಲವನ್ನೂ ಪ್ರಸಂಗದ ಹಂದರದಲ್ಲಿ ಸಕಾರಣವಾಗಿ ಹೊಂದಿಸುವುದು ಅರ್ಥಗಾರಿಕೆಯ ರಚನಾ ರಹಸ್ಯ.” (ಪುಟ 109) ಎಂಬಂತಹ ಸೂತ್ರ ರೂಪದ ಮಾತುಗಳನ್ನು ಇಲ್ಲಿ ಹೇಳಿದ್ದಾರೆ.
'ಭೀಷ್ಮವಿಜಯ' ಪ್ರಸಂಗದಲ್ಲಿನ ಪದಗಳಿಗೆ ಅರ್ಥ ಹೇಳುವ ವಿಧಾನ ಹಾಗೂ ಅಲ್ಲಿನ ಪದಗಳನ್ನು ಅರ್ಥೈಸುವ ವಿಧಾನದ ಕುರಿತಾದ ಜೋಶಿಯವರ ಪುಟ್ಟ ಟಿಪ್ಪಣಿಯು ಅಪಾರವಾದ ಒಳನೋಟಗಳನ್ನು ಉಳ್ಳದ್ದಾಗಿದೆ. “ವಾದದ ನಿರೀಕ್ಷೆಯೆಂಬುದು ಕೃತಕ ಮತ್ತು ಕಾಲಿಕ, ನೈಜವಲ್ಲ, ನ್ಯಾಯವಾದುದಲ್ಲ” ಎಂಬ ಅವರ ತೀರ್ಮಾನವು ಮನೋಜ್ಞವಾದುದು. ಹಾಗೆಯೇ 'ಅರ್ಥದಲ್ಲಿ ಪುನರಾವರ್ತನೆ'ಯ ಕುರಿತು ಬರೆಯುತ್ತ, “ಪುನರಾವರ್ತನೆಯ ಸಂದರ್ಭದಲ್ಲಿ ಕಲಾವಿದರು ಎಚ್ಚರವಹಿಸಿ ವಸ್ತು ನಿರ್ವಹಣೆ ಮಾಡಬೇಕು. ಅನಿವಾರ್ಯದಲ್ಲದಿರುವಲ್ಲಿ ಪೂರ್ವ ಕತೆಯನ್ನು ಲಂಬಿಸಬಾರದು. ಸಂಕ್ಷೇಪಗೊಳಿಸಬೇಕು. ಅಲ್ಲದೆ ಅದನ್ನು ಹೇಳುವಲ್ಲಿ ಹೇಳುವ ವಿಧಾನ, ವಿವೇಚನೆಯ ಕೋನ ಮತ್ತು ದಾರಿಗಳಲ್ಲಿ ವೈವಿಧ್ಯವನ್ನು ತರಬೇಕು” ಎಂದು ಮಾತುಗಳು ಅರ್ಥಗಾರಿಕೆಗೆ ಹೊಸ ಹಾದಿಯನ್ನು ತೋರಿಸಬಲ್ಲಷ್ಟು ಸಶಕ್ತವಾಗಿದೆ.
ತಮಿಳುನಾಡಿನ 'ತೆರುಕೂತ್ತು' ಲೇಖನವೊಂದು ಈ ಪುಸ್ತಕದಲ್ಲಿದ್ದು ಅದು ದಕ್ಷಿಣ ಭಾರತದ ರಂಗಭೂಮಿಯ ಕುರಿತಾದ ತಿಳುವಳಿಕೆಯನ್ನು ವಿಸ್ತರಿಸುತ್ತದೆ. ಅಮೃತ ಸೋಮೇಶ್ವರರ 'ಯಕ್ಷಗಾನ ಕೃತಿ ಸಂಪುಟ' ಮತ್ತು 'ಯಕ್ಷಾಂದೋಳ'ದ ಬಗ್ಗೆ ಬರೆದಿರುವ ಎರಡು ಲೇಖನಗಳು ಆ ಕೃತಿಗಳ ಮಹತ್ವವನ್ನು ಸಾಧಾರವಾಗಿ ಮುಂದಿಡುತ್ತವೆ. “ಸಮನ್ವಯ ದೃಷ್ಟಿ, ಗಂಭೀರವಾದ ದೃಷ್ಟಿಕೋನ, ಪರಂಪರೆಯ ಪರಿಜ್ಞಾನ, ಹೊಸ ಆಶಯದ ಕನಸು, ಅಸಾಧಾರಣ ಭಾಷಾ ಸೌಂದರ್ಯಗಳಿಂದ ಅಮೃತರು ಆಧುನಿಕ ಯುಗದ ಅತ್ಯಂತ ಮಹತ್ವದ ಯಕ್ಷಗಾನ ಕವಿ.” (ಪುಟ 144) ಎಂಬ ನಿರ್ಣಯಗಳು ಅವರ ಆಳವಾದ ಅಧ್ಯಯನ, ಪರಂಪರೆಯ ಬಗ್ಗೆ ತಿಳುವಳಿಕೆ ಮತ್ತು ಆಧುನಿಕತೆಯ ಬಗೆಗೆ ತೆರೆದ ಮನಸ್ಸಿನಿಂದ ಪ್ರತೀತಗೊಂಡಿದೆ.
ಪುಸ್ತಕದ ಕೊನೆಯಲ್ಲಿ ಇಲ್ಲಿನ ಲೇಖನಗಳನ್ನು ಬರೆದಿರುವ ಸಂದರ್ಭದ ಬಗ್ಗೆ ಲೇಖಕರು ಒಂದು ಸೂಚಿಯನ್ನು ಕೊಟ್ಟಿದ್ದಾರೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಇಲ್ಲಿನ ಲೇಖನಗಳು ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವ ಭೌಗೋಳಿಕ ಆವರಣದೊಳಗಡೆಗೆ ಸಿದ್ಧಗೊಂಡ ಅಥವಾ ಮಂಡಿಸಲಾದ ಒಂದು ಚಿತ್ರ ದೊರೆಯುತ್ತದೆ. ಅಂದರೆ ಯಾರಿಗೆ ಯಕ್ಷಗಾನ 'ಗೊತ್ತಿದೆಯೋ' ಅವರಿಗೆ ಯಕ್ಷಗಾನದ ಬಗ್ಗೆ ತಿಳಿಸಿ ಹೇಳುವ ಪ್ರಯತ್ನವಿದು. ಹೀಗಾಗಿ ಇಲ್ಲಿನ ಬರಹಗಳಿಗೆ 'ಸಂಕ್ಷಿಪ್ತತೆ' ಒದಗಿ ಬಂದ ಗುಣವಾಗಿದೆ. ಎಷ್ಟೋ ಪರಿಭಾಷೆಗಳನ್ನು ವಿವರಿಸಬೇಕಾದ ಅರ್ಥವಂತೂ ದಕ್ಕಿರುತ್ತದೆ. ಹೀಗೆ ಸರಾಗವಾಗಿ ಮುಂದೆ ಹೋಗುತ್ತಾ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಲೇಖಕರು ನೀಡಿದರಾಯಿತು. ಈ ಬಗೆಯ ಸಂಕ್ಷಿಪ್ತತೆಯು ಡಾ.ಜೋಶಿಯವರ ಬರಹಗಳ
ಜಾಗರದ ಜೋಶಿ / 95