ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಾಕರಣವನ್ನು ಈ ಲೇಖನಗಳು ಸೂತ್ರ-ಟಿಪ್ಪಣಿಗಳ ರೂಪದಲ್ಲಿ ಪರಿಣಾಮಕಾರಿಯಗಿ ತಿಳಿಸುತ್ತವೆ. ಯಕ್ಷಗಾನದ ಶಾಸ್ತ್ರೀಯ ಪರಂಪರೆ ಮತ್ತು ಆಧುನಿಕ ಅನ್ವಯಿಕ ಪ್ರಯೋಗ - ಈ ಅಂಶಗಳನ್ನು ತನ್ನದೇ ಆಗಿರುವ ವಿಶಿಷ್ಟ ವಿವೇಕವನ್ನು ಬಳಸಿ ಡಾ. ಎಂ. ಪ್ರಭಾಕರ ಜೋಶಿಯವರು ವಿಶ್ಲೇಷಿಸಿ ತಮ್ಮ ಅಭಿಪ್ರಾಯಗಳನ್ನು ಕರಾರುವಕ್ಕಾಗಿ ಮಂಡಿಸಿದ್ದಾರೆ.

  ಈ ಸಂಪುಟದಲ್ಲಿ ಯಕ್ಷಗಾನದ ರಂಗಕಲಾ ಭಾಷೆ ಮತ್ತು ಕಲಾವಚನ ಸ್ವರೂಪವನ್ನು ವಿವೇಚಿಸುವ ಲೇಖನಗಳಿವೆ. ಯಕ್ಷಗಾನ ರಂಗಭೂಮಿಯ ಭವಿಷ್ಯ ಮತ್ತು ಮುನ್ನೋಟದ ಚಿಂತನೆಗಳಿರುವ ಬರಹಗಳಿವೆ. ಯಕ್ಷಗಾನದ ವಸ್ತು, ಆಯ್ಕೆ, ಮಂಡನೆ ಮತ್ತು ಆರ್ಥೈಸುವಿಕೆಗೆ ಸಂಬಂಧಪಟ್ಟ ವಿಶ್ಲೇಷಣಾತ್ಮಕ ಲೇಖನಗಳಿವೆ. ಅರ್ಥಗಾರಿಕೆಯ ಬಗೆಗೆ ಹೊಸ ಬಗೆಯ ಗ್ರಹಿಕೆಗಳನ್ನು ಮಂಡಿಸುವ ಬರಹಗಳಿವೆ. ವಿಚಲನೆಯ ದೌರ್ಭಾಗ್ಯದಂತಿರುವ ಹರಕೆ ಬಯಲಾಟಗಳ ಕುರಿತಂತೆ ಎಚ್ಚರದ ಮತ್ತು ಎಚ್ಚರಿಕೆಯ ಸೂಚನೆಗಳಿರುವ ಲೇಖನಗಳಿವೆ. ಯಕ್ಷಗಾನದ ನಿರ್ದಿಷ್ಟ ವಿಷಯ ಅಥವಾ ಪರಿಕಲ್ಪನೆಗೆ ಸಂಬಂಧಪಟ್ಟಂತೆ ಪ್ರಚಲಿತವಿರುವ ರಂಗ ತಿಳುವಳಿಕೆಯನ್ನು ಡಾ.ಜೋಶಿಯವರು ಲೇಖನಗಳಲ್ಲಿ ವಿಸ್ತರಿಸಿದ್ದಾರೆ ಎಂಬುದು ಮುಖ್ಯ ಮಾತು.
 ಯಕ್ಷಗಾನ ರಂಗದ ಜತೆಗೆ ಅವರು ಇಟ್ಟುಕೊಂಡಿರುವ ನಿರಂತರ ನಿಕಟ ಸಂಪರ್ಕ, ರಂಗಾನುಭವದ ಮೂಲಕ ಸ್ಪುಟಗೊಂಡ ಕಲಾಧೋರಣೆ, ರಹಸ್ಯ ಕಾರ್ಯಸೂಚಿ ಇಲ್ಲದ ತೆರೆದ ಮನಸ್ಸಿನ ಚಿಂತನೆ, ಹದವರಿತ ಮಾತಿನ ಹರಿತ ಶೈಲಿ - ಈ ಅಂಶಗಳು ಇಲ್ಲಿಯ ಲೇಖನಗಳಿಗೆ ಸೈದ್ಧಾಂತಿಕ ಚೌಕಟ್ಟು ಮತ್ತು ಅಭಿವ್ಯಕ್ತಿಯ ಸೊಗಸನ್ನು ಒದಗಿಸಿವೆ ಹಾಗೂ ಯಕ್ಷಗಾನದ ಕುರಿತಂತೆ ನಾವು ಹೊಂದಬೇಕಾದ ಅರಿವಿನ ವೇಗವನ್ನು ಇಲ್ಲಿನ ಬರಹಗಳ ಶೈಲಿಯಿಂದಲೇ ಗುರುತಿಸಬಹುದು. ಚಿಂತನಗಳಂತಿರುವ ಹಲವು ಲೇಖನಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಡಾ.ಜೋಶಿಯವರು ಚೆಲ್ಲಿ ಬಿಡುವ ಆಲೋಚನೆಗಳನ್ನು ಪೋಣಿಸಿ ನೋಡಿದರೆ ಅವರ ಆಲೋಚನೆಯ ಸಮಗ್ರ ನೆಲೆಯನ್ನು ಗುರುತಿಸಲು ಸಾಧ್ಯ.
  ಯಕ್ಷಗಾನದ ರಂಗಭಾಷೆ, ಯಕ್ಷಗಾನದ ರಚನಾ ಸ್ವರೂಪ, ಯಕ್ಷಗಾನದಲ್ಲಿ ಚಿತ್ರಾಭಿನಯ, ವಸ್ತುಮಂಡನೆ, ಯಕ್ಷಗಾನದ ಪ್ರಾಯೋಗಿಕ ನೆಲೆಗಳು - ಈ ಅಂಶಗಳನ್ನು ವಿವೇಚಿಸುವ ಲೇಖನಗಳು ಸಾಕಷ್ಟು ವಿಸ್ತಾರವಾಗಿವೆ. ಇನ್ನು ಕೆಲವು ಬರಹಗಳು ಪುಟ್ಟ ಪ್ರತಿಕ್ರಿಯೆಯ ರೂಪದಲ್ಲಿದೆ. ಪುಟ್ಟ ಬರಹಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ವಿಷಯಕ್ಕೆ ಉನ್ನತಿಕೆಯನ್ನು ಡಾ.ಜೋಶಿಯವರು ತಂದುಕೊಟ್ಟಿದ್ದಾರೆ. ಬೇರೆ ಬೇರೆ ವಿನ್ಯಾಸಗಳಲ್ಲಿ ಅತ್ಯುತ್ತಮವಾಗಿ, ಸಾಂದ್ರವಾಗಿ ಮತ್ತು ಸಮಗ್ರವಾಗಿ ಯಕ್ಷಗಾನಕ್ಕೆ ಪ್ರತಿಕ್ರಿಯಿಸುವ ಚಡಪಡಿಸುವ ಸೃಜನಶೀಲ ಮನಸೊಂದನ್ನು ಡಾ.ಜೋಶಿಯವರಲ್ಲಿ ನಾವು ಗುರುತಿಸಬಹುದು.
  “ಯಕ್ಷಗಾನವೆಂಬ ಶೈಲಿಬದ್ಧ, ಶೈಲೀಕೃತ, ಅವಾಸ್ತವ ಪ್ರಧಾನ, ರಮ್ಯಕಲೆ ವಿಧಾನವು

ಜಾಗರದ ಜೋಶಿ / 98