ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆತ್ಮೀಯರಾದ ಯಕ್ಷಗಾನ ಕಲಾವಿದರೆ, ಕಲಾಭಿಮಾನಿಗಳೆ, ಸಂಘಟಕರ,

 ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಈ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಆರಿಸಿ ತೋರಿಸಿದ ಈ ದೊಡ್ಡ ಗೌರವಕ್ಕಾಗಿ, ಪ್ರೀತಿಗಾಗಿ ಪ್ರತಿಷ್ಠಾನದ ಮುಖ್ಯಸ್ಥರಾದ

ಸಾಂಸ್ಕೃತಿಕ ಕಾರ್ಯಸಾಹಸಿ ಶ್ರೀ ಎಸ್.ಎನ್. ಪಂಜಾಜೆ ಮತ್ತು ಬಳಗಕ್ಕೆ ಕೃತಜ್ಞತೆ ಎಂದಷ್ಟೇ ಹೇಳಿದರೆ ಸಾಲದು.

ವಂದೇ ಗುರುಪರಂಪರಾಂ

  ಈ ಸಂದರ್ಭದಲ್ಲಿ ನಾನು ಯಕ್ಷಗಾನ ಕ್ಷೇತ್ರದಲ್ಲಿ ಪ್ರವೇಶಿಸಿ ಮುನ್ನಡೆಯಲು ಕಾರಣರಾದವರನ್ನು ಸಂಕ್ಷೇಪವಾಗಿ ಸ್ಮರಿಸುವುದು ಕರ್ತವ್ಯ. ನನ್ನ ಹಿರಿಯರು, ಯಕ್ಷಗಾನದ ಗುರುಗಳಾಗಿ ನಮ್ಮೂರ ಪರಿಸರದಲ್ಲಿ ಖ್ಯಾತರಾಗಿದ್ದ ನನ್ನ ಅಜ್ಜ ದಿ. ಅನಿರುದ್ಧ ಭಟ್,

ನನ್ನನ್ನು ಬೆಳೆಸಿದ ಮಾಳದ ಶ್ರೀ ಪರಶುರಾಮ ಯಕ್ಷಗಾನ ಮಂಡಳಿ, ಕಾರ್ಕಳದ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿ, ವಿವಿಧ ಯಕ್ಷಗಾನ ಸಂಘಗಳು, ವೇದಿಕೆಗಳು, ಹಿರಿಕಿರಿಯ ಸಹವರ್ತಿಗಳು ಸ್ಮರಣೀಯರು. ಯಕ್ಷಗಾನದ ಮಹಾ ಪ್ರತಿಭೆ ಡಾ. ಶೇಣಿ ಅವರು, ಮಲ್ಪೆ ಸಾಮಗ ಸೋದರರು ಮೊದಲಾದ ಹಿರಿಯರಿಂದ ತೊಡಗಿ ಇಂದಿನ ಸಹಕಲಾವಿದರ ತನಕ ನನ್ನ ಬೆಳವಣಿಗೆಗೆ ಕಾರಣರು, ಡಾ. ಶಿವರಾಮ ಕಾರಂತ, ಕುಕ್ಕಿಲ ಕೃಷ್ಣಭಟ್ಟರಿಂದ ಮೊದಲ್ಗೊಂಡು ಪ್ರೊ. ಅಮೃತ ಸೋಮೇಶ್ವರ, ಡಾ. ಕೆ.ಎಮ್. ರಾಘವ ನಂಬಿಯಾರ್, ದಿ.ಮಹಾಬಲ ಹೆಗಡೆ, ಶಂಭು ಹೆಗಡೆ ತನಕ ಅನೇಕ ಹಿರಿಕಿರಿಯರು ಸಂಶೋಧನೆ, ವಿಮರ್ಶೆಗಳಿಗೆ ಸಹವರ್ತಿಗಳು ಸ್ಪೂರ್ತಿದಾಯಕರು. ಸಂಘಟನೆಗಳು, ವೇದಿಕೆಗಳು, ಸಂಸ್ಥೆಗಳು, ಪ್ರಸಾರ ಮಾಧ್ಯಮಗಳು ನೀಡಿದ ಅವಕಾಶಗಳು, ಎಲ್ಲಾ ಕಲಾವಿದ ಮಿತ್ರರು ನೀಡಿದ ಅವಕಾಶ, ಪ್ರೀತಿ ಸ್ನೇಹಗಳು ಅವಿಸ್ಮರಣೀಯ. ನನ್ನ ಕುಟುಂಬದ ಸಹಾಯ ವಿಶೇಷವಾದದ್ದು. ಇವರೆಲ್ಲ ಒಂದಲ್ಲ ಒಂದು ಬಗೆಯಿಂದ ಗುರುಗಳೇ, ಅವರಿಂದ ನಾನು ಉಪಕೃತ.

  ಹಿಂದಿನ ಸಮ್ಮೇಳನಗಳ ಅಧ್ಯಕ್ಷರಾದ ಹೊಸ್ತೋಟ ಮಂಜುನಾಥ ಭಾಗವತರು, ರಾಮದಾಸ ಸಾಮಗ, ದಿ. ಮುದೇನೂರು ಸಂಗಣ್ಣ, ಡಾ.ರಮಾನಂದ ಬನಾರಿ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.

ನಿರೀಕ್ಷೆ

ಇಂತಹ ಸಮ್ಮೇಳನಗಳ ಅಧ್ಯಕ್ಷ ಭಾಷಣವೆಂಬುದು ಏನನ್ನು ಒಳಗೊಂಡಿರಬೇಕೆಂಬ ಕೆಲವು ನಿರೀಕ್ಷೆಗಳಿರುತ್ತವೆ. ಕಲೆಯ ಭೂತ ವರ್ತಮಾನ ಭವಿಷ್ಯಗಳ ವಿವೇಚನೆ, ಮುಖ್ಯತಃ, ಪ್ರಸ್ತುತ ಸ್ಥಿತಿ – ಗತಿಗಳ ಮತ್ತು ಆಗಬೇಕಾದ ಕೆಲಸಗಳ ಚಿಂತನೆಗಳು ಇವೆಲ್ಲ ಅಪೇಕ್ಷಿತ. ಆದರೆ ಹೀಗೆ ಮಾಡುವಾಗ, ಎಲ್ಲಿ ಇದು ನಾನು ಭಯಪಡುವ

ಜಾಗರದ ಜೋಶಿ