ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀಡಬಲ್ಲ ಯಕ್ಷಗಾನ (ರಂಗ ಅವಧೂತ ಬಿ.ವಿ.ಕಾರಂತರ ನುಡಿ) ಸಿನಿಮಾ ಮೊದಲಾದ ಕಲೆಗಳಿಂದ ವಸ್ತುತಂತ್ರ ಪಡೆಯುವ ಸ್ಥಿತಿಗೆ ಬಂದಿದೆ. ನಮ್ಮ ಶ್ರೀಮಂತಿಕೆ ನಮಗೆ ಗೊತ್ತಿಲ್ಲವಾಗಿದೆ.

ವ್ಯಾವಸಾಯಿಕ ಅಸ್ಥಿರತೆ

  ಯಕ್ಷಗಾನ ವೃತ್ತಿ ಇಂದು ಆಕರ್ಷಕವೇನಲ್ಲ. ಹಿಂದಿನ ಕಷ್ಟಗಳಿಗೆ ಹೋಲಿಸಿದಾಗ ಸೌಲಭ್ಯ ಹೆಚ್ಚಿದ್ದರೂ ಮನೆಮನೆಗೆ ಬಂದ ಸೌಕರ್ಯ, ಆರ್ಥಿಕ ವಿಸ್ತಾರಗಳೆಡೆಯಲ್ಲಿ ಊರೂರು ತಿರುಗಿ, ಅಸೌಕರ್ಯ, ರಾತ್ರಿ ಇಡೀ ನಿದ್ದೆಗೆಡುವ ಕಠಿಣವಾದ ಉದ್ಯೋಗದತ್ತ ಬರುವವರು ಕಡಿಮೆಯಾಗುವುದು ಸಹಜ. ಇಷ್ಟು ಜನ ವ್ಯವಸಾಯಿಕಲಾವಿದರಿರುವುದೇ ಆಶ್ಚರ್ಯ. ಕಲೆಯ ಹುಚ್ಚು ಒಂದು ಆಕರ್ಷಣೆ, ಕಲಾವಿದತ್ವ ಇನ್ನೊಂದು. ಇಂದಿನ ಸನ್ನಿವೇಶದಲ್ಲಿ ಯಕ್ಷಗಾನ ಕಲಾವಿದ ಪಡೆಯುವ ದೊಡ್ಡ ಸಂಬಳ ಕೂಡಾ ತೃಪ್ತಿಕರ ಜೀವನದಲ್ಲ. ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಓದಿಸುವ ಕನಸು ಕಲಾವಿದನಿಗೂ ಸಹಜ ತಾನೇ? ಇದಕ್ಕೆಲ್ಲ ಈ ಗಳಿಕೆ ಪರ್ಯಾಪ್ತವಲ್ಲ. ಯಕ್ಷಗಾನದ ಶೈಲಿ ಸ್ವರೂಪಗಳಸಮಗ್ರ ಹಿಡಿತವಿರುವ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ.
     ಮೇಳದ ಸಂಚಾಲಕ, ಯಜಮಾನನಿಗೂ ಸಮಸ್ಯೆಗಳಿವೆ, ವೆಚ್ಚಗಳು ಏರುತ್ತಿವೆ.“ವೀಳ್ಯ' ಏರಿಕೆಗೆ ವಿರೋಧ ಬರುತ್ತಿದೆ. ಹರಕೆ ಆಟಗಳ ಗೌಜಿ ಗದ್ದಲಗಳಿಗೆ ತುಂಬಾ ವೆಚ್ಚ ಮಾಡುವ ಹರಕೆದಾರರು ವೀಳ್ಯದ ಮೊತ್ತದ ಏರಿಕೆಗೆ ಅಸಮಾಧಾನ ಪಡುತ್ತಾರೆ. 'ಕಲಾವಿದರು ಶಿಸ್ತಿಗೊಳಪಟ್ಟು ಇರುವುದಿಲ್ಲ' ಎಂದು ಮೇಳದ ಯಜಮಾನರು ಹೇಳುತ್ತಾರೆ.ಹುಟ್ಟಿನಲ್ಲಿ ವ್ಯವಸಾಯಿಕ ಯಕ್ಷಗಾನದ ಭವಿಷ್ಯ ಭದ್ರವಾಗಿಲ್ಲ. ಇನ್ನು ಮುಂದೆ ಹೆಚ್ಚುಹೆಚ್ಚು ಕಲಾವಿದರು ಅರೆ ಹವ್ಯಾಸಿ 'ಫ್ರೀಲ್ಯಾನ್ಸ್' ವ್ಯವಸಾಯಿಗಳಾಗುವ ಲಕ್ಷಣಗಳು ಕಾಣಿಸುತ್ತಿವೆ, ಮೇಳಗಳ ರೂಪಗಳು ಬದಲಾಗಬಹುದು.
  ಸ್ಥಿರೀಕರಣ
 ಯಾವುದೇ ಕಲೆಯು ತನ್ನ ವಿಕಾಸವನ್ನು ಸಾಧಿಸಬೇಕಾದರೆ ತನ್ನನ್ನು ತಾನು ಕಂಡುಕೊಂಡು ಬಲಪಡಿಸಿಕೊಳ್ಳಬೇಕು. ಸ್ವಾತ್ಮಾನುಸಂಧಾನ ಮೊದಲು ಮತ್ತು ಆ ಬಳಿಕ ವಿಕಾಸ, ಯಕ್ಷಗಾನದ ತಿಟ್ಟುಗಳು ಮೊದಲು ತಮ್ಮ ಪ್ರತ್ಯೇಕ ರೂಪಗಳನ್ನುಮರುಶೋಧನೆ ಮಾಡಿ, ಗುರುತಿಸಿ ಸ್ಥಿರೀಕರಿಸಬೇಕು. ದೊಡ್ಡಾಟ, ಗಟ್ಟದ ಕೋರೆಗಳು ಹಾಗೆಯೇ, ಕಲೆ ಒಳಗಿಂದ ಬೆಳೆಯಬೇಕು, ಸಂಕರ ಮತ್ತು ತೇಪೆಗಳಿಂದಲ್ಲ. ತನ್ನ ನೆಲೆಗಳ ಸ್ಪಷ್ಟ ಅರಿವಿದ್ದಾಗ, ಶೈಲಿಯ ಹಿಡಿತ ಸ್ಪಷ್ಟವಿದ್ದಾಗ ಅನ್ಯ ಪ್ರಭಾವಗಳು ಶೈಲಿಗೆ ಏರಕವಾಗಿ ಸೇರಿ, ಹೊಂದಿ, ಶೈಲಿ ವಿಸ್ತರಣಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ದಿ.ಕೆರೆಮನೆ ಶಂಭುಹೆಗಡೆ, ಕೆ. ಗೋವಿಂದ ಭಟ್ಟರ ನೃತ್ಯಶೈಲಿಗಳು ದೃಷ್ಟಾಂತಗಳು.
   ಎಲ್ಲ ತಿಟ್ಟುಗಳಿಗೆ ಸಂಬಂಧಪಟ್ಟವರು ಮೊದಲು ತಮ್ಮ ತಿಟ್ಟುಗಳ ವೇಷಭೂಷಣ,

ಜಾಗರದ ಜೋಶಿ / 111