ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೃತ್ಯ, ಗಾನ, ವಿಧಾನ, ರಂಗವಿಧಾನ, ಬಣ್ಣಗಾರಿಕೆಗಳ ಕುರಿತು ಸಮಗ್ರವಾದ ದೃಷ್ಟಿಯಿಂದ,ರಾಜಿ ಇಲ್ಲದ ಮೌಲಿಕ ಕಲಾ ಮೌಲ್ಯ ರಕ್ಷಣೆಯ (ಮೂಲ ಘಟಕ ಸಂರಕ್ಷಣೆ' – ಡಾ.ಪುರುಷೋತ್ತಮ ಬಿಳಿಮಲೆಯವರ ನುಡಿಗಟ್ಟು) ಕೆಲಸಕ್ಕೆ ಗಮನ ಕೊಡಬೇಕಾದುದು ಪ್ರಾಥಮಿಕ, ಇದು ತೆಂಕುತಿಟ್ಟಿಗೆ ಹೆಚ್ಚು ತುರ್ತಿನದು. ಕಾರಣ ಕಳೆದ ಏಳು ದಶಕಗಳಿಂದ ಸತತ ವಿಘಟನೆಗೊಳ್ಳುತ್ತ ಬಂದಿದೆ. ನಿಶ್ಚಿತ ವೇಷಗಳು, ಕಥಾನಡೆಯ, ಕಾಲಪ್ರಭೇದದಂತಹ ಸಾಮಾನ್ಯ ವಿಚಾರಗಳಲ್ಲೂ ಒಮ್ಮತವಿಲ್ಲದಿದ್ದರೆ ನಾವು ನಮ್ಮ ನಾಡಿನ 'ಹೆಮ್ಮೆಯ ಕಲೆ' ಎಂದು ಹೇಳುವುದು ಹುಸಿಪ್ರತಿಷ್ಠೆಯಾಗುತ್ತದೆ. ದೊಡ್ಡಾಟ, ಸಣ್ಣಾಟ, ಗಟ್ಟದ ಕೋರೆ, ಬಯಲಾಟಗಳ ಸ್ವರೂಪ, ಸ್ಥಿರೀಕರಣ ಪರಿಷ್ಕಾರಗಳು ಒಟೊಟ್ಟಿಗೆ ಆಗಬೇಕಾಗಿವೆ. ವೃತ್ತಿಪರತೆ, ಸಾತತ್ಯ ಮತ್ತು ಶಿಕ್ಷಿತರ ಬೆಂಬಲ ಇಲ್ಲದೆ ಈ ಕಲೆಗಳು, ಶ್ರೀಮಂತ ಕಲೆಗಳಾದರೂ ಅಪರಿವಿಷ್ಕಾರದಿಂದ ಅಳಿವಿನತ್ತ ಸಾಗಿವೆ. ಬೇಕು ಮೂಡಲಪಾಯ, ದೊಡ್ಡಾಟಗಳಿಗೊಬ್ಬ ಕಾರಂತ, ಒಬ್ಬ ಕು.ಶಿ., ಒಬ್ಬ ಶಂಭು.

ಪರಿಷ್ಕರಣ-ನಿರ್ದೇಶನ
   ಯಾವುದೇ ಕಲೆಯ ಕಾಲ ಕಾಲಕ್ಕೆ ತಕ್ಕ ಸೂಕ್ತ ಪರಿಷ್ಕಾರಗಳನ್ನು ಸಾಧಿಸಬೇಕಷ್ಟೆ? ಹಾಗೆ ಮಾಡುವಾಗ ಕಲಾ ಸ್ವರೂಪ ಗುಣವೃದ್ಧಿ, ಅಭಿವ್ಯಕ್ತಿ ಸೌಂದರ್ಯದ ವರ್ಧನ, ಸೌಲಭ್ಯದ ಅರ್ಥಪೂರ್ಣ ಅಳವಡಿಕೆ, ಕಥೆ-ಕಥಾನಕಗಳ ಅರ್ಥೈಸುವಿಕೆಯ ಮಂಡನೆ,ಆಶಯ, ಔದಾರ್ಯ, ಅಂಗೋಪಾಂಗಗಳಲ್ಲಿ ನಾಜೂಕು ಮತ್ತು ಬಳಕೆಯಲ್ಲಿ ಹೊಸಯೋಜನೆಗಳಾಗುವ ಅಗತ್ಯವಿದೆ. ಇದಾಗದಿದ್ದರೆ ಈ ತರಹದ ಕಲೆಗಳ ಭವಿಷ್ಯಭದ್ರವಾಗಲಾರವು.
   ಈ ದೃಷ್ಟಿಯಿಂದ ಯಕ್ಷಗಾನ ಪ್ರದರ್ಶನಗಳಿಗೆ ಒಂದುಮಾಧ್ಯಮಬದ್ಧವಾದ ನಿರ್ದೇಶನದ ವ್ಯವಸ್ಥೆ ಅತೀ ಅಗತ್ಯ. 'ಭಾಗವತನೇ ನಿರ್ದೇಶಕ'ನೆಂಬ ಹಳೆಯ ನಂಬುಗೆಯನ್ನು ಮರಳಿ ಚಿಂತಿಸೋಣ. 'ಭಾಗವತ ಭಾಗವತನೇ ಅವನ ಸ್ಥಾನವನ್ನಿಟ್ಟು ಕೊಂಡು ನಿರ್ದೇಶನ ಸಾಧ್ಯ ಮತ್ತು ಅಗತ್ಯ'. (ಪ್ರೊಉದ್ಯಾವರ ಮಾಧವ ಆಚಾರ್ಯ)ಇಡಿಯ ಪ್ರದರ್ಶನವನ್ನು ಯೋಚಿಸಿ ಕಲ್ಪಿಸಿ ಓತಪ್ರೋತವಾಗಿ ರೇಖಿಸಲು ಪ್ರತ್ಯೇಕವಾದನಿರ್ದೇಶನದ ವ್ಯವಸ್ಥೆ ಬೇಕು. ಅದು ನಾಟಕ, ಚಲನಚಿತ್ರ, ನೃತ್ಯನಾಟಕಗಳ ನಿರ್ದೇಶನಗಳಿಗಿಂತ ಭಿನ್ನವು ಆಗಿರುವುದು ಅಪೇಕ್ಷಿತ.
   ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಾಗ ಯಕ್ಷಗಾನಕ್ಕೆ ಆಧುನಿಕ ಸಾಮಗ್ರಿತಂತ್ರಗಳನ್ನು ಹೊಂದಿಸಬೇಕಲ್ಲದೆ ಸಾಮಗ್ರಿಗೆ ಯಕ್ಷಗಾನವನ್ನು ಒಗ್ಗಿಸುವುದಲ್ಲ. ಈಗ ನಮಗೆ ಬೇಕಾದ ಬಗೆಯ, ಬೇಕಾದಷ್ಟು ತೀವ್ರತೆಯ ಬೆಳಕನ್ನು ಮಾಡಬಹುದು. ಅತೀಸೂಕ್ಷ್ಮವಾದ ನಾದ ವ್ಯವಸ್ಥೆ, ಧ್ವನಿವರ್ಧಕ, ಎಲೆಕ್ಟ್ರಾನಿಕ್ ಶ್ರುತಿ ವ್ಯವಸ್ಥೆ ಲಭ್ಯ. ವರ್ಣದ್ರವ್ಯ ಸುಲಭವಾಗಿವೆ. ವೇಷಭೂಷಣ ರಚನೆಯಲ್ಲಿ ಫೈಬರ್, ಥರ್ಮೋಕೋಲ್, ಡ್ಯೂರೊಕೋಲ್

ಜಾಗರದ ಜೋಶಿ