ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಹುಶ್ರುತ ವಿದ್ವಾಂಸ, ನೋಡ ನೋಡುತ್ತಿದ್ದಂತೆ ಎಪ್ಪತ್ತು ತುಂಬಿ ಮುಂದಡಿಯಿಡುತ್ತಿರುವ ಜೋಶಿಯವರ ಈ ಸುದೀರ್ಘ ಪಯಣ ಆರೇಳು ದಶಕಗಳ ಯಕ್ಷಗಾನ ಇತಿಹಾಸದೊಂದಿಗೆ ಹಾಸು ಹೊಕ್ಕಾಗಿರುವುದನ್ನು ಕಂಡರೆ, ಯಕ್ಷಗಾನ ಅದರಲ್ಲೂ ತಾಳಮದ್ದಳೆ ಲೋಕದ ಅಪೂರ್ವ ಸಂಗತಿಗಳು ನಮ್ಮ ಅರಿವಿಗೆ ಬಾರದಿರದು.

ಬಾಲ್ಯ - ಜೀವನ
ಪ್ರಭಾಕರ ಜೋಶಿಯವರ ತಂದೆ ನಾರಾಯಣ ಜೋಶಿ, ತಾಯಿ ಲಕ್ಷ್ಮೀಬಾಯಿ ಯಾನೆ ಚಂದ್ರಾವತಿ, ಕಾರ್ಕಳ ತಾಲೂಕಿನ ಮಾಳದಲ್ಲಿ ಫೆಬ್ರವರಿ 6, 1946ರಲ್ಲಿ ಅವರ ಜನನ, ನಾಲ್ವರು ಸಹೋದರರಲ್ಲಿ ಮೂರನೆಯವರು. ನಾರಾಯಣ ಜೋಶಿಯವರು ವೇದ ಹಾಗೂ ಸಂಸ್ಕೃತ ಸಾಹಿತ್ಯದ ವಿದ್ವಾಂಸರು. ಲಕ್ಷ್ಮೀಬಾಯಿಯವರ ತಂದೆ ಅನಿರುದ್ಧ ಮರಾಠ ತೆಂಕು ಮತ್ತು ಬಡಗು ಎರಡೂ ಶೈಲಿಗಳನ್ನು ಬಲ್ಲ ಉತ್ತಮ ಮದ್ದಳೆಗಾರರು. ಸಹಜವಾಗಿಯೇ ತಂದೆ-ಅಜ್ಜಂದಿರ ಪ್ರಭಾವದಿಂದ ಪ್ರಭಾಕರ ಜೋಶಿ ಯಕ್ಷಗಾನ ಮತ್ತು ಸಾಹಿತ್ಯದ ಕಡೆಗೆ ಆಕರ್ಷಿತರಾದರು. ಇನ್ನೂ ಹತ್ತರ ಹರೆಯದ ಹುಡುಗನಾಗಿದ್ದಾಗಲೇ ಅವರು ದೊಡ್ಡ ಕೂಟದಲ್ಲಿ ಅರ್ಥ ಹೇಳಿದ್ದರಂತೆ! ಆಗ ಅವರು ಓದುತಿದ್ದುದು ನಾಲ್ಕನೇ ತರಗತಿ, ಮಾಳ, ಉಜಿರೆ, ಕಾರ್ಕಳಗಳಲ್ಲಿ ವಿದ್ಯಾಭ್ಯಾಸದ ವಿವಿಧ ಮಜಲುಗಳನ್ನು ಪೂರೈಸುತ್ತಿದ್ದಂತೆಯೇ ಕಾರ್ಕಳ ಪರಿಸರದಲ್ಲಿ ನಡೆಯುತ್ತಿದ್ದ ಹಲವು ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಾ ಜೋಶಿ ಅರ್ಥದಾರಿಯಾಗಿ ಬೆಳೆದರು; ಜೊತೆಗೆ ಬಯಲಾಟದಲ್ಲೂ ವೇಷ ಮಾಡತೊಡಗಿದರು. ಯಕ್ಷಗಾನದ ಮೇಲಿನ ಆಸಕ್ತಿ ಎಷ್ಟಿತ್ತೆಂದರೆ ಒಂದು ಹಂತದಲ್ಲಿ ಅವರು ಮೇಳ ಸೇರಲೂ ಮುಂದಾಗಿದ್ದರು. ಆಗ ಈ ದಶಾವತಾರ ನಿನಗೆ ಬೇಡ' ಎಂದು ಅವರನ್ನು ತಡೆದವರು ಸುರತ್ಕಲ್ ಮೇಳ ಕಸ್ತೂರಿ ವರದರಾಯ ಪೈಗಳು.
ಪಿ.ಯು.ಸಿ ಮತ್ತು ಪದವಿ ತರಗತಿಗಳಲ್ಲಿ ವಾಣಿಜ್ಯ ಶಾಸ್ತ್ರವನ್ನು ಆರಿಸಿಕೊಂಡಿರುವ ಜೋಶಿ ಕಾರ್ಕಳ ಬೋರ್ಡ್ ಹೈಸ್ಕೂಲಿನಲ್ಲಿ ಆಧ್ಯಾಪಕರಾದರು. ತಮ್ಮ ಬಿ.ಕಾಂ.ವ್ಯಾಸಂಗ ಮುಗಿಸಿದ ತಕ್ಷಣ ಸುರತ್ಕಲ್ ಗೋವಿಂದದಾಸ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ವೃತ್ತಿಯೊಂದಿಗೆ ಆಟ, ತಾಳಮದ್ದಳೆ, ಭಾಷಣ, ಬರವಣಿಗೆ ಹೀಗೆ ನಿರಂತರ ಕ್ರಿಯಾಶೀಲರಾಗಿ ಅವರ ಸಾರ್ವಜನಿಕ ಸಂಪರ್ಕ ಬೆಳೆಯಿತು. ಸುರತ್ಕಲ್ ಬಿಟ್ಟು 1972ರಲ್ಲಿ ಮಂಗಳೂರಿನ ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇರಿದ ಅವರು ಅಲ್ಲೇ ಪ್ರಾಂಶುಪಾಲರಾಗಿ ಭಡ್ತಿ ಪಡೆದು ಸತತ ಮೂವತ್ತೆರಡು ವರ್ಷಗಳ ಸೇವೆಯೊಂದಿಗೆ 2004ರಲ್ಲಿ ನಿವೃತ್ತರಾದರು. ಬಳಿಕ ಹಲವು ಕಡೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಹತ್ತು ವರ್ಷಗಳಿಂದ ಯಕ್ಷಗಾನ ವಲಯದಲ್ಲಿ ಅವರದು ಬೀಸುನಡೆ.


ಜಾಗರದ ಜೋಶಿ / 16