ಸಮರ್ಥ ಸಂಘಟಕ
ವಿದ್ಯಾರ್ಥಿ ದೆಸೆಯಲ್ಲಿಯೇ ಜೋಶಿ ಸಂಘಟನಾ ಚತುರರು. ದೊಡ್ಡ ಸೆಟ್ಟಿನ ತಾಳಮದ್ದಳೆ ಸಂಘಟಕರಾಗಿ ಹಲವಾರು ಸಂಘ-ಸಂಸ್ಥೆಗಳಿಗೆ ಅವರು ಮಾರ್ಗದರ್ಶಕ.ಮೂವತ್ತು ವರ್ಷ ಶೇಣಿಯವರ ಸಹವರ್ತಿಯಾಗಿದ್ದ ಅವರು ಹಳೆಯ ಮತ್ತು ಹೊಸ ತಲೆಮಾರಿನ ನಡುವೆ ಕೊಂಡಿಯಂತಿದ್ದವರು. ನಾಡಿನ ಸಾಹಿತ್ಯ - ಸಾಂಸ್ಕೃತಿಕ ಸಂಘಟನೆಯಲ್ಲಿ ಅವರದು ಪ್ರಮುಖ ಪಾತ್ರ.
ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಕನ್ನಡ ಸಂಘ ಮಂಗಳೂರು, ಜಿಲ್ಲಾ ಪದವಿ ಪೂರ್ವ ಅಧ್ಯಾಪಕರ ಸಂಘ, ಬಲಿಪ ಅಮೃತ ಭವನ ಸಮಿತಿ, ಹವ್ಯಾಸಿ ಪಟ್ಲ ಫೌಂಡೇಶನ್ ಮೊದಲಾದ ಸಂಘಟನೆಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯರು. ಮುನ್ನುಡಿ, ಗ್ರಂಥ ಸಮೀಕ್ಷೆ, ಆಹ್ವಾನ ಪತ್ರಿಕೆ-ಮಾನಪತ್ರ ರಚನೆ, ಅಭಿನಂದನಾ ಭಾಷಣ, ಕಾರ್ಯಕ್ರಮ ನಿರೂಪಣೆ, ವಿಷಯ ಕೇಂದ್ರಿತ ಉಪನ್ಯಾಸ, ಎಚಾರಸಂಕಿರಣಗಳಿಗೆ ಹೊಸ ಮಾದರಿ ಹಾಕಿಕೊಟ್ಟವರು.ಯಕ್ಷಗಾನದ ಪ್ರಥಮ ಜಾಲತಾಣ www.yakshagana.com ಇದರ ಸ್ಥಾಪಕರು ಮತ್ತು ಸಂಪಾದಕರೂ ಅವರೇ. ನೂರಕ್ಕೂ ಮಿಕ್ಕಿ ಧ್ವನಿಸುರುಳಿ ಮತ್ತು ಸಿಡಿಗಳಲ್ಲಿ ಅರ್ಥ ಹೇಳಿದ್ದಾರೆ. ಉಡುಪಿಯ ಆರ್.ಆರ್.ಸಿ., ಯಕ್ಷಗಾನ ಕೇಂದ್ರ ಮಂಗಳೂರು
ವಿಶ್ವವಿದ್ಯಾನಿಲಯ, ಯಕ್ಷಗಾನ ಕಲಾರಂಗ ಉಡುಪಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇತ್ಯಾದಿಗಳಿಗೆ ಸಲಹೆಗಾರರಾಗಿಯೂ ಅವರ ಸಹಕಾರ ಸ್ಮರಣೀಯ.
ತೃಪ್ತ ಸಂಸಾರ
ಜೋಶಿಯವರದು ಚಿಕ್ಕದಾದರೂ ಚೊಕ್ಕ ಸಂಸಾರ. ಅವರ ಪತ್ನಿ ಪ್ರೊ. ಸುಚೇತಾ ಜೋಶಿ ಎಡಪದವು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ ನಿವೃತ್ತರಾದವರು. ಚಿತ್ಪಾವನಿ ಭಾಷೆ ಶಬ್ದಕೋಶ ತಯಾರಿಯಲ್ಲಿ ನಿರತರಾಗಿರುವ ಅವರು ಮಹಿಳಾ ಕೂಟದ ಅರ್ಥದಾರಿಯೂ ಹೌದು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಶ್ವೇತಾ ಸೂರ್ಯನಾರಾಯಣ ಮತ್ತು ಸ್ವಾತಿ ಕಾರ್ತಿಕ್ ಭಟ್;
ಉದ್ಯೋಗಸ್ಥರು. ಇಬ್ಬರೂ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ.
*