ಜೋಶಿಯವರ ಅಕ್ಷರಯಾನ
ಕೃಷ್ಣಪ್ರಕಾಶ ಉಳಿತ್ತಾಯ
ನಾಡು ಕಂಡ 'ವಿದ್ವಾಂಸ-ಡಾ. ಎಂ. ಪ್ರಭಾಕರ ಜೋಶಿ' ಅವರ ಕೆಲವು ಕೃತಿಗಳ ಪರಿಚಯಾತ್ಮಕ ಸೊಲ್ಲು ಇಲ್ಲಿದೆ.
ಯಕ್ಷಗಾನ ಸ್ಥಿತಿಗತಿ
ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಚಿಂತನಾ ಕ್ರಮಕ್ಕೆ ಹೊಸತೊಂದು ಆಯಾಮ ಕೊಟ್ಟವರು ಡಾ.ಪ್ರಭಾಕರ ಜೋಶಿಯವರು. ಇವರು ಯಕ್ಷಗಾನ ಕ್ಷೇತ್ರದ ಒಂದು ಗಟ್ಟಿ ಧ್ವನಿ. ಅವರ ಈಚೆಗಿನ ಕೃತಿ 'ಯಕ್ಷಗಾನ ಸ್ಥಿತಿಗತಿ'ಯ ಇಪ್ಪತ್ತೆರಡು ಬರಹ ಇದನ್ನು ಶ್ರುತಪಡಿಸುತ್ತದೆ. ವೇಷ ಕಟ್ಟುವುದರಿಂದ ಹಿಡಿದು ಚುಟ್ಟಿ ಇಡುವವರೆಗೆ; ಚಕ್ರತಾಳ ಹಿಡಿಯುವುದರಿಂದ ತೊಡಗಿ ಗಾನದ ವರೆಗಿನ ಮಾಹಿತಿ ತನ್ನೊಳಗು ಮಾಡಿಕೊಂಡು, ಯಕ್ಷಗಾನದ ಸರ್ವಂಕಷ ಅರಿವಿನೊಡನೆ ಅರಳಿನಿಂತ ಜೋಶಿಯವರು ಯಕ್ಷಗಾನ ಕ್ಷೇತ್ರದ ಬಹುದೊಡ್ಡ ಸೊತ್ತು. ಈ ಕೃತಿ ನಮ್ಮ ಆಲೋಚನೆಯನ್ನು ಹೆಚ್ಚು ಮಾಡುವಲ್ಲಿ ಸಂಶಯವಿಲ್ಲ. ಜೋಶಿಯವರು ವಿವಿಧ ಕಡೆಗಳಲ್ಲಿ ಮಾಡಿದ ಉಪನ್ಯಾಸ, ಲೇಖನಗಳ ಸಂಕಲನವೇ 'ಯಕ್ಷಗಾನ ಸ್ಥಿತಿ ಗತಿ' ಕೃತಿ. ಈ ಬರಹ ಗುಚ್ಚದ ಸ್ಕೂಲ ಅವಲೋಕನ.
'ರಂಗ ಭಾಷೆ' ಅದರ ಪ್ರಾಮುಖ್ಯತೆ. ಅದರ ಅರಿವು ಮತ್ತು ಅದು ಒಂದು ಕಲೆಯ ಅರ್ಥೈಸುವಿಕೆಯಲ್ಲಿ ಮಾಡುವ ಉಪಕಾರ ಇವುಗಳನ್ನೆಲ್ಲಾ ವ್ಯಾಖ್ಯಾನಿಸುತ್ತಾ ಗಂಭೀರವಾಗಿ ಯಕ್ಷಗಾನದ ರಂಗ ಭಾಷೆಯನ್ನು ಕುರಿತು ಪ್ರಥಮ ಅಧ್ಯಾಯದಲ್ಲಿ ಹೇಳುತ್ತಾರೆ. “ರಂಗದ ಒಂದು ಸರಳ ಪೀಠ(ರಥ)ವೇ ರಥ, ಪರ್ವತ, ದೇವಾಲಯ, ಆಕಾಶ ಎಲ್ಲವೂ ಆಗಬಹುದು. ಕಲೆಯ ಸಿರಿತನ ಹೊರತು ಬಡತನವಲ್ಲ. ಅದರ ಬದಲು ವಾಸ್ತವದ ಸೀನು ಸೀನರಿಗಳನ್ನು ತಂದರೆ ಅದು ವಿಕೃತಿ ಕಲಾಸ್ವಭಾವ ವಿರೋಧಿಯಾಗುತ್ತದೆ”.
ಜಾಗರದ ಜೋಶಿ / 59