ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಡಗುತಿಟ್ಟಿನ ಬಯಲಾಟಕ್ಕೂ ರೂಪದಲ್ಲಿ ಹೋಲಿಕೆಯಿದೆ. ಇವೆರಡು ನಿಜವಾದರೆ ಕಾರ್ಕಳದ ಗೊಂಬೆಗಳಿಗೂ ಆ ಕಾಲದ ಬಯಲಾಟಕ್ಕೂ ಸಾರೂಪ್ಯ ಇರಲೇ ಬೇಕು.ಅದು ಸತ್ಯವಾದರೆ ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಒಂದು ಭಾಗದಲ್ಲಿ ಇದ್ದ ಪ್ರಾಚೀನ ಯಕ್ಷಗಾನದ ವೇಷಚಿತ್ರವು ಆ ಗೊಂಬೆಗಳಲ್ಲಿ ಇದೆ ಎಂದರ್ಥ. ಕುಂಬಳೆ ಸೀಮೆಗೆ ಕನ್ನಡಿಗರ ದಂಡು ಯಕ್ಷಗಾನವನ್ನು ಒಯ್ದುದು ನಿಜವಾದರೆ ಅದು ಕಾರ್ಕಳವನ್ನು ಹಾದೇ ಹೋಗಿರಬೇಕು, ಕರಾವಳಿಗೂ ಘಟ್ಟದ ಮೇಲುಭಾಗಕ್ಕೂ ಇದ್ದ ಒಂದು ಪ್ರಾಚೀನ ಸಂಪರ್ಕ ದಾರಿ ಆಗುಂಬೆ - ಕಾರ್ಕಳ
'ಕಲೆ ಮತ್ತು ವ್ಯವಸಾಯ' ಪ್ರಬಂಧದಲ್ಲಿ ರಂಗಭೂಮಿಯ ಹಾಗೂ ಗೊಂಬೆಯಾಟದ ಉಳಿವಿಗೆ ಉಪಯುಕ್ತ ಸಲಹೆಗಳನ್ನಿಟ್ಟಿದ್ದಾರೆ. ಜೋಶಿ ಆಂದಂತೆ ವಾಣಿಜ್ಯೀಕರಣದಿಂದ ತೆಂಕುತಿಟ್ಟು ಪರಿವರ್ತನೆಗೆ ಒಳಪಟ್ಟುದು ನಿಜ. ಆದರೆ ಬಡಗು ಕೂಡಾ ಅದೇ ರೀತಿಯ ಇನ್ನೊಂದು ವ್ಯಾಪಾರಿ ಪಿಡುಗಿಗೆ ಒಳಗಾಗಿದೆ. ಇಲ್ಲಿ ಕಾಲ್ಪನಿಕ ಸತ್ವಹೀನ ಕಥಾನಕಗಳನ್ನು ಪ್ರಸಂಗವಾಗಿಸಿ ಬಯಲಾಟದ ರೂಪವಿಶೇಷವನ್ನು ಅಪಮೌಲ್ಯ ಗೊಳಿಸಿರುವುದು ಅಷ್ಟೇ ಸತ್ಯ. ಬಡಗಿನ ಹಳೆಯ ಭಾಗವತರು, ಮದ್ದಳೆಗಾರರು ಇಂದು ನೇರ ರಂಗಸ್ಥಳಕ್ಕೆ ಹೋಗಿ 'ಕಸುಬು' ಮಾಡಲಾರದ ಸ್ಥಿತಿಯನ್ನು ತಮ್ಮ ಕಣ್ಣೆದುರೇ ಕಂಡು ಅಸಹಾಯಕರಾಗಿದ್ದಾರೆ. ಒಂದು ರಂಗಭೂಮಿಯಿಂದ ಇನ್ನೊಂದು ಕವಲು ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ನಮ್ಮ ಕಣ್ಣೆದುರೇ ಎದ್ದು ಬಂದ ತುಳು ಯಕ್ಷಗಾನವೇ ನಿದರ್ಶನವಾಗುತ್ತದೆ.
'ಪ್ರಸಂಗ ರಚನೆ : ರಂಗದೃಷ್ಟಿ' : ಜೋಶಿ ಅವರ ವಿವರವಾದ ಪೃಥಕ್ಕರಣ, ಸೂಕ್ಷ್ಮ ವಿವೇಚನೆಗೆ ಕನ್ನಡಿಯಾಗಿದೆ. ಈ ಪ್ರಬಂಧದಲ್ಲಿ ಅಂತೆಯೇ 'ತಾಳಮದ್ದಳೆಯ ಮಾತುಗಾರಿಕೆ' ಹಾಗೂ 'ಅರ್ಥಗಾರಿಕೆ : ಸೃಜನಶೀಲದೃಷ್ಟಿ' ಇವುಗಳಲ್ಲೂ ಪ್ರಸಂಗ ಕೃತಿ ಹಾಗೂ ಅರ್ಥದಾರಿಯ ಸಂಬಂಧಗಳನ್ನು ಸೂಕ್ಷ್ಮವಾಗಿ ಸೀಳಿ ನೋಡಲಾಗಿದೆ.ಇವುಗಳನ್ನೆಲ್ಲ ಹಾದು ಹೋಗುವಾಗ ಸಹಮತದ ನಡುವೆ ಪ್ರಶ್ನೆಯೊಂದು ಎದ್ದು ನಿಲ್ಲುತ್ತದೆ. ಅದು ಪ್ರಸಂಗದ ಆಶಯವನ್ನು ತಿದ್ದಲು ಅರ್ಥದಾರಿಗೆ ಎಷ್ಟರ ಮಟ್ಟಿನ ಸ್ವಾತಂತ್ರ್ಯ ಇದೆ ಎಂಬುದು “... ಸೃಜನಶೀಲ ಅರ್ಥದಾರಿ ಪ್ರಸಂಗದ ಆಶಯವನ್ನು, ಹಂದರವನ್ನು ಮೀರಿ ನಡೆಯುತ್ತಾನೆ.” (ಪುಟ 64) ಇಲ್ಲಿ ಮೀರುವುದರ ಅಗತ್ಯದ ಜೊತೆಗೆ ಮೀರುವಿಕೆಯ ಮಿತಿಗಳನ್ನೂ ಸ್ಪಷ್ಟಪಡಿಸಿದ್ದರೆ ಒಳ್ಳೆಯದಿತ್ತು. ಇಲ್ಲವಾದರೆ ಪ್ರಸಂಗವೆಂಬುದು ಅರ್ಥದಾರಿಗಳು ತಮಗೆ ಬೇಕಾದಂತೆ ಎತ್ತಬಹುದಾದ ಕೈಗೂಸಾಗುವ ಭಯವಿದೆ. ಪ್ರಸಂಗದ ಆಶಯವನ್ನು ಹೆಚ್ಚು ವ್ಯಾಪಕತೆಗೆ ವಿಕಾಸಗೊಳಿಸುವುದಾದರೆ ಅಥವಾ ಆಧುನಿಕ ಪರಿಭಾಷೆಯಲ್ಲಿ ಹೆಚ್ಚು ಪ್ರಗತಿಪರವಾಗಿ ಮೆರೆಯಿಸುವುದಾದರೆ ಜೋಶಿ ಅವರ ಅಭಿಪ್ರಾಯ ಸ್ವೀಕರಾರ್ಹ, ಪ್ರಸಂಗದ ಆಶಯದಿಂದ ಪ್ರತ್ಯೇಕವಾದ ಮತ್ತು ಹೊಂದಿಕೆ ಇಲ್ಲದ ಆಶಯವನ್ನು ಬಿಂಬಿಸಹೊರಟರೆ 'ಅರ್ಥ' ವಿರೋಧಾಭಾಸದ ನಿದರ್ಶನವಾಗುತ್ತದೆ. ಇಂಥಲ್ಲಿ ಪ್ರತ್ಯೇಕ ಪ್ರಸಂಗ ರಚಿಸಿ ಪ್ರದರ್ಶಿಸುವುದೇ ಸೂಕ್ತ.

ಜಾಗರದ ಜೋಶಿ / 71