ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾರುಮಾಲೆ, 1990,

ನ್ಯೂಸ್ಟಾರ್ ಪಬ್ಲಿಕೇಶನ್ಸ್, ಬೆಂಗಳೂರು



ಪರಿಚಿತ ಅಂಶಗಳ ಅಪರಿಚಿತ ಮುಖಗಳು

ಡಾ. ಬಿ.ಎ. ವಿವೇಕ ರೈ

ಮಿತ್ರ ಎಂ. ಪ್ರಭಾಕರ ಜೋಶಿ ಅವರು ಕನ್ನಡದ ಇಂದಿನ ಯಕ್ಷಗಾನ ವಿಮರ್ಶಕರಲ್ಲಿ ಅಗ್ರಗಣ್ಯರು. ತಮ್ಮ 'ಜಾಗರ' ಮತ್ತು 'ಕೇದಗೆ' ಎಂಬ ಎರಡು ಗ್ರಂಥಗಳ ಮೂಲಕ ಕರಾವಳಿಯ ಯಕ್ಷಗಾನದ ಕುರಿತು ಮಹತ್ವದ ಅನೇಕ ಹೊಸ ಮಾತುಗಳನ್ನು ಹೇಳಿದ್ದಾರೆ. ಯಕ್ಷಗಾನ ತಾಳಮದ್ದಳೆಯ ಶ್ರೇಷ್ಠ ಹಾಗೂ ಪ್ರಸಿದ್ಧ ಅರ್ಥದಾರಿಯಾಗಿರುವ ಜೋಶಿಯವರು ಯಕ್ಷಗಾನದ ಗಂಭೀರ ವಿಮರ್ಶಕರೂ ಆಗಿರುವುದು ಅಪೂರ್ವ ಸಂಗತಿ.
ಯಕ್ಷಗಾನದಂತಹ ಜನಪ್ರಿಯ ರಂಗಭೂಮಿಯ ಕಲಾವಿದ ರೊಬ್ಬರು ತಮ್ಮ ಕಲೆಯ ಬಗ್ಗೆ ಸಹಜವಾಗಿಯೇ ಅತಿ ಮಮತೆಯನ್ನೂ, ಉತ್ಸಾಹವನ್ನೂ, ಅಭಿಮಾನವನ್ನೂ ಹೊಂದಿರುತ್ತಾರೆ. ಆ ಕಲೆಯ ಹೊರಗೆ ನಿಂತುಕೊಂಡು ಸಾಧ್ಯತೆ ಹಾಗೂ ಮಿತಿಗಳನ್ನು ಗುರುತಿಸುವುದು, ಅದರ ಬದಲಾವಣೆಗಳ ಒಳಿತು ಕೆಡುಕುಗಳನ್ನು ಮೌಲ್ಯಮಾಪನ ಮಾಡುವುದು ಸಾಮಾನ್ಯವಾಗಿ ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಜೋಶಿಯವರು ಕಲಾವಿದ ಮತ್ತು ವಿಮರ್ಶಕ ಎರಡೂ ಆಗಿರುವುದರಿಂದ ಅವರ ಅರ್ಥಗಾರಿಕೆಗೆ ವಿಮರ್ಶನದ ಮೂಲಕ ಹೊಸತನ ಪ್ರಾಪ್ತವಾಗಿ, ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಸಾಧ್ಯತೆಗಳನ್ನು ಶೋಧಿಸುತ್ತಾ ಹೋಗುತ್ತದೆ.

ಜಾಗರದ ಜೋಶಿ / 73