ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ವಿಮರ್ಶೆಯು ರಂಗದ ಅನುಭವಗಳ ಆಧಾರ ಸಾಮಗ್ರಿಗಳ ಬಲದಿಂದ ವ್ಯಾಖ್ಯಾನ ಮತ್ತು ವಿವರಣೆಗಳ ಶಿಸ್ತನ್ನು ರೂಢಿಸಿಕೊಳ್ಳುತ್ತದೆ. ಈ ದೃಷ್ಟಿಯಿಂದ ಜೋಶಿಯವರ ಅರ್ಥಗಾರಿಕೆಯು ಬೆಳವಣಿಗೆಗೂ, ಅವರ ಯಕ್ಷಗಾನ ವಿಮರ್ಶೆಯ ಬೆಳವಣಿಗೆಗೂ ಸಾವಯವ ಸಂಬಂಧವನ್ನು ಗುರುತಿಸಬಹುದು. ಪ್ರಸ್ತುತ ಕೃತಿ 'ಮಾರುಮಾಲೆ'ಯಲ್ಲಿ ಜೋಶಿಯವರು ಚರ್ಚಿಸುವ ಅನೇಕ ಸಂಗತಿಗಳು 'ಜಾಗರ' ಮತ್ತು 'ಕೇದಗೆ' ಗ್ರಂಥಗಳಲ್ಲೂ ವಿಮರ್ಶೆಗೆ ಒಳಗಾಗಿದೆ. ಆದರೆ ಅದು ಆ ಲೇಖನಗಳ ಪುನರಾವರ್ತನೆಯಾಗದೆ, ಸಂಶೋಧನೆಯ ಮುಖ್ಯ ಲಕ್ಷಣವಾದ ಬೆಳವಣಿಗೆ ರೂಪದ್ದಾಗಿದೆ ಎಂಬುದು ಮಹತ್ವದ ಅಂಶ. ಈ ಸಂಕಲನದಲ್ಲಿನ 'ತಾಳಮದ್ದಳೆಯ ಹಿಮ್ಮೇಳ','ತುಳು ಯಕ್ಷಗಾನ : ನಿನ್ನೆ, ಇಂದು, ನಾಳೆ', 'ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ', 'ಪರಂಪರೆ ಮತ್ತು ಪ್ರಯೋಗ', 'ಸೃಜನಶೀಲತೆಯ ಸಂದರ್ಭ' - ಈ ಲೇಖನಗಳನ್ನು ಈ ದೃಷ್ಟಿಯಿಂದ ವಿಶೇಷವಾಗಿ ಗಮನಿಸಬಹುದು.
ಜೋಶಿಯವರ ಯಕ್ಷಗಾನ ವಿಮರ್ಶೆಯ ಲೇಖನಗಳಲ್ಲಿ ಅವರನ್ನು ಬಹಳವಾಗಿ ಕಾಡಿದ ಸಮಸ್ಯೆ ಅಂದರೆ ಪರಂಪರೆ ಮತ್ತು ಪ್ರಯೋಗಗಳ ಸಂಬಂಧದ ಸ್ವರೂಪ ಹೇಗಿರಬೇಕು ಎಂಬುದು. ಅವರ ಹೆಚ್ಚಿನ ಲೇಖನಗಳಲ್ಲಿ ಈ ಪ್ರಶ್ನೆಯು ಬೇರೆ ಬೇರೆ ರೂಪಗಳಲ್ಲಿ ಮತ್ತು ನೆಲೆಗಳಲ್ಲಿ ಕಾಣಿಸಿಕೊಂಡಿದೆ. ಇದನ್ನು ಜೋಶಿಯವರ ವಿಮರ್ಶೆಯ ಬಹಳ ಮುಖ್ಯವಾದ ತಾತ್ವಿಕ ತಳಹದಿ ಎಂದು ಭಾವಿಸುತ್ತೇನೆ. ಯಕ್ಷಗಾನದಂತಹ ರಂಗಭೂಮಿಯು ಕಲೆಯನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಬೇಕು ಮತ್ತು ಅದಕ್ಕಾಗಿ ಈ ಕಲೆಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳವರು ತಮ್ಮ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎನ್ನುವ ಕಾಳಜಿಯು ಒಂದು ಜೀವಂತ ರಂಗಭೂಮಿಯು ಬೆಳವಣಿಗೆಯಲ್ಲಿ ಬಹಳ ಮಹತ್ವದ ಅಂಶ. ಆದ್ದರಿಂದಲೇ ಇಲ್ಲಿನ ವಿಮರ್ಶಾ ಲೇಖನಗಳು ಕೇವಲ ಸೈದ್ಧಾಂತಿಕ ಸ್ವರೂಪದವು ಅಲ್ಲ; ಅವು ನಿರ್ದಿಷ್ಟ ತಾತ್ವಿಕ ತಳಹದಿಯುಳ್ಳ ಪ್ರಾಯೋಗಿಕ ಮೌಲ್ಯ ಹೊಂದಿರುವವು. ಹೀಗೆ ರಂಗದಿಂದ ಆಧಾರ ಸಾಮಗ್ರಿಗಳನ್ನು ಎತ್ತಿಕೊಂಡು ಅವನ್ನು ಪರಿಶೀಲಿಸಿ, ಪರಿಷ್ಕರಿಸಿ ಮತ್ತೆ ರಂಗಕ್ಕೆ ಕೊಟ್ಟು, ಅದನ್ನು ಪೋಷಿಸುವ – ಪರಿಷ್ಕರಿಸುವ ಒಂದು ವರ್ತುಲದ ಮಾದರಿಯಲ್ಲಿ ಇಲ್ಲಿನ ಲೇಖನಗಳ ರಚನೆಯಿದೆ. ಯಕ್ಷಗಾನ ರಂಗಭೂಮಿಯಲ್ಲಿ ಭಾಗವತರು ಸ್ಕೂಲವಾಗಿ ಮಾಡುವ ಕೆಲಸವನ್ನು, ಯಕ್ಷಗಾನ ವಿಮರ್ಶೆಯಲ್ಲಿ ಹೆಚ್ಚು ಸೂಕ್ಷ್ಮವಾಗಿ ಜೋಶಿಯವರು ಮಾಡಿದ್ದಾರೆ. ಹೀಗಾಗಿ ಜೋಶಿಯವರು ಒಬ್ಬ 'ವಿಮರ್ಶಕ-ಭಾಗವತ'.
“ಕರಾವಳಿ ಯಕ್ಷಗಾನ – ನೈಸರ್ಗಿಕ ಹಿನ್ನೆಲೆ' ಲೇಖನವು ರಾಚನಿಕ ಅಧ್ಯಯನದ ಮಾದರಿಯುಳ್ಳದ್ದು. ಆದ್ದರಿಂದ ಆ ಅಧ್ಯಯನ ಕ್ರಮದ ವಿಶಿಷ್ಟ ಒಳನೋಟಗಳೂ ಕೆಲವು ಮಿತಿಗಳೂ ಈ ಲೇಖನಕ್ಕೂ ಇವೆ. ನಿಸರ್ಗ ಮತ್ತು ಸಂಸ್ಕೃತಿ ಇವುಗಳ ಸಂಬಂಧಗಳು ಮನುಷ್ಯನ ಬದುಕಿನ ಬೇರೆ ಬೇರೆ ವಿನ್ಯಾಸಗಳನ್ನು ರೂಪಿಸಿದುದನ್ನು ಜಾನಪದಲ್ಲಿ ರಾಚನಿಕ ವಿಮರ್ಶಕರು ಚರ್ಚಿಸಿದ್ದಾರೆ. ನಿಸರ್ಗವನ್ನು ಮತ್ತು ಸಹಜತೆಯನ್ನು

ಜಾಗರದ ಜೋಶಿ / 74