ಮತ್ತು ಹೆಚ್ಚು ವ್ಯಾಪಕ ಅಧ್ಯಯನದ ಮೂಲಕ ಪುನಾರಚಿಸುವ ಆಲೋಚನೆಗಳು ಇಲ್ಲಿನ ಲೇಖನದಲ್ಲಿವೆ. ಜೋಶಿಯವರು ಈ ಲೇಖನದಲ್ಲಿ ಯಾರನ್ನೂ ಮೆಚ್ಚಿಸುವ ಅಥವಾ ತೆಗಳುವ ಕೆಲಸ ಮಾಡುವುದಿಲ್ಲ. ಆರಂಭದಲ್ಲಿ ಸೂಚಿಸಿದಂತೆ ಪರಂಪರೆ- ಪ್ರಯೋಗಗಳ ನಿರಂತರ ಪ್ರಕ್ರಿಯೆಯಲ್ಲಿ ಇವರು ಆಸಕ್ತರಾಗಿರುವುದರಿಂದ, ಯಕ್ಷಗಾನ ಮತ್ತು ತುಳು ಇವು ಒಂದು ರಂಗಭೂಮಿಯ ಆಕೃತಿಯಲ್ಲಿ ಮೈದಾಳುವಾಗ ಕಾಣಿಸುವ ವೈರುಧ್ಯಗಳನ್ನು ಗ್ರಹಿಸುವ ಮತ್ತು ನಿವಾರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ತುಳು ಯಕ್ಷಗಾನ ನಿನ್ನೆ ಇಂದು ಇರುವ ರೀತಿಯಲ್ಲಿ 'ನಾಳೆ' ಇರಬಾರದು ಎನ್ನುವುದು ಈ ಲೇಖನಕ್ಕೆ ಅನ್ವಯಿಕ ಆಯಾಮವನ್ನು ತಂದಿದೆ. ಅಂತಹ ಮೂರು ದಾರಿಗಳನ್ನು (ಪುಟ 68, 69) ತೆರೆದು ತೋರಿಸಿ ಅವುಗಳಲ್ಲಿ ತಮ್ಮ ಆಯ್ಕೆಗಳನ್ನು ಸಕಾರಣವಾಗಿ ಮುಂದಿಟ್ಟಿದ್ದಾರೆ. ಯಕ್ಷಗಾನದ ಬೇರೆ ಬೇರೆ ಅವಯವಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿ ಯಾವ ಯಾವ ಪ್ರಮಾಣದಲ್ಲಿ ಅಳವಡಿಬಹುದು ಎನ್ನುವುದನ್ನು ನಿದರ್ಶನಗಳೊಂದಿಗೆ ಚರ್ಚಿಸಿರುವುದರಿಂದ ಈ ಲೇಖನವು ಸಾಮಾನ್ಯಕರಣಗೊಂಡ ಯಾವುದೇ ಸೂತ್ರಗಳನ್ನು ಹೇಳದೆ, ಬದಲಾವಣೆಯು ಬಯಸುವ ಸಮಸ್ಯೆಗಳೊಡನೆ ಮುಖಾಮುಖಿಯಾಗಿ ಸಂವಾದ ನಡೆಸುತ್ತದೆ.
ಯಕ್ಷಗಾನದ 'ಪಠ್ಯ'ವೊಂದನ್ನು ಪಠ್ಯ, ಸಂದರ್ಭ, ಸನ್ನಿವೇಶ ಮತ್ತು ಪ್ರದರ್ಶನಗಳ ಸಂಬಂಧ ದೃಷ್ಟಿಯಿಂದ ಸಮಗ್ರವಾಗಿ ಅಧ್ಯಯನ ಮಾಡಿದ 'ಶರಸೇತು ಬಂಧನ' ಲೇಖನವು ಯಕ್ಷಗಾನದ ವಿಮರ್ಶೆಯಲ್ಲೇ ಒಂದು ಮಹತ್ವದ ಬೆಳವಣಿಗೆ, ಈ ಸಂಕಲನದಲ್ಲಿಯೇ, ತನ್ನ ವಸ್ತು ಮತ್ತು ನಿರ್ವಹಣೆಯಿಂದ ಇದು ಪ್ರತ್ಯೇಕವಾಗಿದ್ದು ಗಮನಾರ್ಹವಾಗಿದೆ.
ಯಾವುದೇ ಜಾನಪದ ಪ್ರಕಾರದಲ್ಲಿ ಪಠ್ಯ ಮತ್ತು ಅದರ ಬಳಕೆಯ ಸಂದರ್ಭವನ್ನು ಹೊಂದಿಕೊಂಡು ಅರ್ಥಗಳು ಬದಲಾಗುತ್ತವೆ. ಇಲ್ಲಿ ಅರ್ಥಗಳು ನಿರ್ದಿಷ್ಟ ಸಂದರ್ಭಗಳ ಮೂಲಕ ನಮಗೆ ಸಂವಹನವಾಗುತ್ತದೆ. 'ಅರ್ಥ'ವೆಂದರೆ ಅನ್ವೇಷಿಸುವ ಒಂದು ವಸ್ತುವಲ್ಲ; ಅದೊಂದು ಪ್ರಕ್ರಿಯೆ. ಅದು, ಒಂದು ಸನ್ನಿವೇಶ ಮತ್ತು ಅದರಿಂದ ಅನುಭವವನ್ನು ಪಡೆಯುವ ವ್ಯಕ್ತಿಗಳ ನಡುವಿನ ಒಂದು ಪರಿವರ್ತನಶೀಲ ಸಂಬಂಧ. ಪಠ್ಯದಲ್ಲಿ ಸಂಭವಿಸುವ ಬದಲಾವಣೆಗಳು, ಅರ್ಥದ ಬದಲಾವಣೆಗಳೊಂದಿಗೆ ಸಂಬಂಧ ಪಟ್ಟಿರುತ್ತವೆ. ಕೆಲವೊಮ್ಮೆ ಪಠ್ಯದಲ್ಲಿಲ್ಲದ ಅರ್ಥಗಳು ಪ್ರದರ್ಶನದಲ್ಲಿ ಆಂಗಿಕ ಅಭಿನಯ ಮತ್ತು ಮಾತಿನ ಏರಿಳಿತಗಳ ಮೂಲಕ ಪ್ರಕಟವಾಗಬಹುದು. ಈ ದೃಷ್ಟಿಯಿಂದ 'ಶರಸೇತು ಬಂಧನ' ಪ್ರಸಂಗವನ್ನು ಕುರಿತ ವಿಶ್ಲೇಷಣೆ ತಾಳಮದ್ದಲೆಯ ರಚನೆಯನ್ನು ಕುರಿತು ಮಾಡಿದ ಬಹಳ ಮುಖ್ಯವಾದ ಒಂದು ಸಂಶೋಧನೆ. ಮುಂದಿನ ದಿನಗಳಲ್ಲಿ ತಾಳಮದ್ದಳೆಗಳನ್ನು ಈ ದೃಷ್ಟಿಯಿಂದ ಅರ್ಥಮಾಡಿಕೊಂಡರೆ ಮತ್ತು ಅಧ್ಯಯನ ಮಾಡಿದರೆ ಈ ವಿಶಿಷ್ಟ ರಂಗಭೂಮಿಯು ಸಾಧ್ಯತೆಗಳನ್ನು ಹಿಗ್ಗಿಸಬಹುದು.
ಮುಳಿಯ ತಿಮ್ಮಪ್ಪಯ್ಯನವರ ಅಪ್ರಕಟಿತ ಯಕ್ಷಗಾನ ಪ್ರಸಂಗ 'ಸೂರ್ಯಕಾಂತಿ