ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲ್ಯಾಣ'ವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ ತಿಮ್ಮಪ್ಪಯ್ಯನವರ ಯಕ್ಷಗಾನ ಸಂಶೋಧನೆಯ ಸ್ವರೂಪವನ್ನು 'ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ' ಲೇಖನದಲ್ಲಿ ವಿವರಿಸಲಾಗಿದೆ.

'ಅರ್ಥಗಾರಿಕೆ - ಪರಂಪರೆ, ಪ್ರಯೋಗ' ಈ ಲೇಖನವು ಈಗಾಗಲೇ ನಾನು ಉಲ್ಲೇಖಿಸಿದ 'ಶರಸೇತು ಬಂಧನ' ಲೇಖನದ, ತಾತ್ವಿಕ ತಳಹದಿಯಾಗಿರುವ ಒಂದು ಆಶಯ ಪ್ರಬಂಧ, ಪಠ್ಯ, ಸಂದರ್ಭ, ಪ್ರದರ್ಶನ ಮತ್ತು ಪ್ರೇಕ್ಷಕವರ್ಗ ಈ ಸಂಬಂಧಗಳ ದೃಷ್ಟಿಯಿಂದ, ಯಕ್ಷಗಾನ ಪ್ರಸಂಗಗಳ ಪುರಾಣದ ಘಟನೆಗಳಿಗೆ ಹೊಸ ಅರ್ಥಗಳು ಪ್ರಾಪ್ತವಾಗುವ ಬಗೆಗಳನ್ನು ವಿವೇಚಿಸಲಾಗಿದೆ.

ಯಕ್ಷಗಾನ ರಂಗಭೂಮಿಯ ಬೆಳವಣಿಗೆಗಳನ್ನು ಚರ್ಚಿಸುವವರೆಲ್ಲ ಸಾಮಾನ್ಯವಾಗಿ ವೃತ್ತಿಮೇಳಗಳನ್ನು ಮಾತ್ರ ಗಮನಿಸುತ್ತಾರೆ. ಆದರೆ ಕರಾವಳಿಯಲ್ಲಿ ಹವ್ಯಾಸಿ ಮೇಳಗಳು ಕೂಡಾ ಯಕ್ಷಗಾನದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿವೆ. ಹವ್ಯಾಸಿಗಳ ಭಿನ್ನ ಬಗೆಗಳನ್ನು ನಿದರ್ಶನಗಳೊಂದಿಗೆ ಹೇಳುವುದರ ಜತೆಗೆಯೇ ಅವರ ಸಮಸ್ಯೆಗಳನ್ನು ವಿವರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ. ಇವು ಆರ್ಥಿಕ, ಸಂಘಟನಾತ್ಮಕ ಮತ್ತು ಕಲಾ ಸಂಬಂಧಿ ಸಮಸ್ಯೆಗಳು, ಈ ಸಮಸ್ಯೆಗಳ ನಿವಾರಣೆಗೆ ಏನು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದೆಂಬ ಕೆಲವು ನಿರ್ದಿಷ್ಟ ಮೌಖಿಕ ಸೂಚನೆಗಳು ಪ್ರಾಯೋಗಿಕ ಮಹತ್ವವುಳ್ಳವುಗಳಾಗಿವೆ.

'ಸೃಜನಶೀಲತೆಯ ಸಂದರ್ಭ' ಲೇಖನವು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಕೆಲವು ಅಭಿಪ್ರಾಯವನ್ನು ಕೊಡುತ್ತದೆ. ಆದರೆ ಇಂತಹ ಅಭಿಪ್ರಾಯಗಳು ಒಂದು ತಾತ್ವಿಕ ಸ್ವರೂಪವನ್ನು ಇಲ್ಲಿ ಪಡೆದಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು, ಅನುಕರಣ ತತ್ವದ ಮಿತಿಗಳನ್ನು ಚರ್ಚಿಸಿ ಯಕ್ಷಗಾನವನ್ನು ಅಧ್ಯಯನ ಮಾಡಬಹುದು. ಏಕೆಂದರೆ ಅನುಕರಣ, ಅನುಸರಣ, ಸೃಜನಶೀಲತೆ ಇವು ರೂಢಿಯಲ್ಲಿ ಬಳಕೆಯಾಗುತ್ತಿರುವುದು ತೀರ ಸರಳ ಅರ್ಥಗಳಲ್ಲಿ ಮಾತ್ರ.

ಯಕ್ಷಗಾನ ಸಂಬಂಧಿಯಾದ ಕೆಲವು ಸಂಶೋಧನ ಟಿಪ್ಪಣಿಗಳು ಮತ್ತು ಮಾಹಿತಿಗಳು ಉಪಯುಕ್ತವಾಗಿವೆ. ಅನೇಕ ಹೊಸ ಮಾಹಿತಿಗಳ ಸಂಗ್ರಹ ಇಲ್ಲಿ ದೊರೆಯುತ್ತವೆ. ಯಕ್ಷಗಾನವನ್ನು ಕುರಿತು 'ವಿಷಯ ಮಾಹಿತಿ ಕೋಶ'ವನ್ನು ಸಿದ್ಧಪಡಿಸುವ ಅವಶ್ಯಕತೆ ಇದೆ. ಈ ಕೆಲಸವನ್ನು ಜೋಶಿಯವರು ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ. ನಮ್ಮ ಅನೇಕ ಸಂಶೋಧನೆಗಳು ಸಮರ್ಪಕವಾದ ಮಾಹಿತಿಗಳ ಕೊರತೆಯಿಂದ ತಪ್ಪು ದಾರಿಗಳಲ್ಲಿ ಚಲಿಸುತ್ತವೆ. ಈ ಕಾರಣಕ್ಕಾಗಿಯೂ ಇಂತಹ ಕೋಶ ತೀರಾ ಅಗತ್ಯವಾಗಿದೆ.

ಪ್ರಭಾಕರ ಜೋಶಿಯವರ 'ಮಾರುಮಾಲೆ'ಗೆ ಮುನ್ನುಡಿಯ ರೂಪದಲ್ಲಿ ಈ ಕೆಲವು ಅಭಿಪ್ರಾಯಗಳನ್ನು ಹೇಳುವುದು ನನಗೆ ಸಂತೋಷದ ಸಂಗತಿ, ಜೋಶಿಯವರ ಗ್ರಂಥಕ್ಕೆ ಮುನ್ನುಡಿಯನ್ನು ಬರೆದಿರುವುದಕ್ಕೆ ನನ್ನ ಬಗೆಗಿನ ಅವರ ಪ್ರೀತಿ ವಿಶ್ವಾಸಗಳೇ

ಜಾಗರದ ಜೋಶಿ / 77