ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಲುಪಿ ಅವರ ಸಂವೇದನೆಯನ್ನು ಶುದ್ಧ ಹಾಗೂ ತೀಕ್ಷ್ಯಗೊಳಿಸಿದಾಗ ಯಕ್ಷಗಾನಕ್ಕೆ ನಿಜವಾದ ಲಾಭವಾಗಿ ಅವು ಸಾರ್ಥಕವಾಗುತ್ತವೆ. ನಮ್ಮ ಯಕ್ಷಗಾನಾಸಕ್ತರು ಈ ಬೌದ್ಧಿಕ ಮಟ್ಟಕ್ಕೆ ಏರಲಿ ಎಂದು ಆಶಿಸುತ್ತೇನೆ. ಜೋಶಿಯವರ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಒಪ್ಪಿದುದು ಅವರಿಗಿಂತ ನಾನು ಹೆಚ್ಚು ತಿಳಿದವನು ಹಾಗೂ ಸಮರ್ಥನು ಎಂಬ ಅಹಂಕಾರದ ನಂಬಿಕೆಯಿಂದಲ್ಲ; ಅಥವಾ ಒಬ್ಬ ಆತ್ಮೀಯ ಮಿತ್ರನನ್ನು ಹೊಗಳುವುದಕ್ಕೆ ಅವಕಾಶ ಸಿಕ್ಕಿತು ಎಂಬ ಕಾರಣಕ್ಕೂ ಅಲ್ಲ. ಅವರ ಯಕ್ಷಗಾನದ ಕುರಿತಾದ ಅಧ್ಯಯನ ಮತ್ತು ಕಾಳಜಿಯನ್ನು ಮನಸಾರೆ ಮೆಚ್ಚಿ ಅವರನ್ನು ಪ್ರೋತ್ಸಾಹಿಸಬೇಕಾದುದು ಮಿತ್ರಧರ್ಮವೆಂದು ಬಗೆದಿದ್ದೇನೆ. ಅದಕ್ಕೊಂದು ಅವಕಾಶ ಹೀಗೆ ಸಿಕ್ಕಿದೆ. ಮಾತ್ರವಲ್ಲ, ಅವರ ಪುಸ್ತಕಕ್ಕೆ ಮುನ್ನುಡಿ ಬರೆಯುವುದು ಹೆಮ್ಮೆಯ ವಿಷಯ. ಇಂದಿಗೂ ಆಕರ ಗ್ರಂಥವಾಗಿರುವ ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಯಕ್ಷಗಾನವನ್ನು ಪರಿಚಯಿಸುವ ವಿವರಣಾತ್ಮಕ (descriptive) ಪುಸ್ತಕ. ಅನಂತರ ಯಕ್ಷಗಾನದ ಸಮಗ್ರ ದರ್ಶನದ ಕೃತಿ ವ್ಯಕ್ತಿಯೋರ್ವನಿಂದ ಬಂದಿಲ್ಲ ಎನ್ನುವುದು ತಪ್ಪು ಅಭಿಪ್ರಾಯವಲ್ಲ. ಸಾಹಿತ್ಯ ಪ್ರಪಂಚದಲ್ಲಿ 'ಸಾಹಿತ್ಯ ಶಾಸ್ತ್ರ', 'ಕಾವ್ಯ ಮೀಮಾಂಸೆ'ಯಂತಹ ಗ್ರಂಥಗಳಿರುವಂತೆ 'ಯಕ್ಷಗಾನ ಮೀಮಾಂಸೆ' ಹುಟ್ಟುವ ಕಾಲ ಹತ್ತಿರದಲ್ಲಿದೆ. ಯಾಕೆಂದರೆ ಕಳೆದ ಮೂರು ನಾಲ್ಕು ದಶಕಗಳಲ್ಲಿ ಅಷ್ಟು ವಿಪುಲ ಚರ್ಚೆಯ ಕೃಷಿ ನಡೆದಿದೆ. ಹೆಚ್ಚಿನ ಯಕ್ಷಗಾನ ಗೋಷ್ಠಿಗಳಲ್ಲಿ, ಚರ್ಚಾವೇದಿಕೆಗಳಲ್ಲಿ ಭಾಗವಹಿಸಿ ಅನುಭವ ಸಂಪತ್ತನ್ನು ಗಳಿಸಿಕೊಂಡಿರುವ, ಸ್ವತಂತ್ರ ಶೈಲಿಯ ಉತ್ತಮ ಬರಹಗಾರರೂ ಆಗಿರುವ ಪ್ರಭಾಕರ ಜೋಶಿಯವರು ಯಕ್ಷಗಾನ ಮೀಮಾಂಸಾ ಗ್ರಂಥವೊಂದನ್ನು ಬರೆಯುವಂತಾಗಲಿ ಎನ್ನುವುದು ಈ ಸಂದರ್ಭದಲ್ಲಿ ಶುಭ ಹಾರೈಕೆ. ಜಾಗರದ ಜೋಶಿ / 82 CJ