ಪುಟ:ತೊಳೆದ ಮುತ್ತು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಲಿಪ್ತವಾದ ಪ್ರೇಮಸಂಯೋಗ

೨೯

ಶಿಷ್ಯರು ಪುಸ್ತಕಗಳನ್ನು ತೆಗೆದುಕೊಂಡು ಪಾರ ಹೇಳಿಸಿಕೊಳ್ಳಲಿಕ್ಕೆ ಸಿದ್ಧರಾಗಿ ಕುಳಿತರು. ಆದರೂ ಪ್ರದ್ಯುಮ್ನನು ಬರಲಿಲ್ಲ. ಪಂಡಿತರು ಚಿಂತಾಕುಲರಾಗಿ "ಮಹಿದಾಸ, ಪ್ರದ್ಯುಮ್ನನು ತನ್ನ ಸ್ನೇಹಿತನಾದ ವಿಜಯೀಂದ್ರನ ಮನೆಗೆ ಹೋಗಿರಬಹುದು, ನೋಡಿಕೊಂಡು ಬಾ" ಎಂದು ಓರ್ವ ಶಿಷ್ಯನಿಗೆ ಆಜ್ಞಾಪಿಸಿದರು. ಪ್ರದ್ಯುಮ್ನನು ವಿಜಯೀಂದ್ರನ ಮನೆಯಲ್ಲಿ ಭೋಜನ ತೀರಿಸಿಕೊಂಡು ಅವನೊಡನೆ ಎಲ್ಲಿಯೋ ಹೊರಗೆ ಹೋದನೆಂಬ ವರ್ತಮಾನವನ್ನು ಮಹಿದಾಸನು ತಂದನು. ಏನೋ ವ್ಯತ್ಯಾಸವಿರಬಹುದೆಂದು ನೆನಿಸಿ ಪಂಡಿತರು ವಿಷಣ್ಣಕಾಗಿ ಹಾಗೂ ಹೀಗೂ ಪಾಠಪ್ರವಚನ ಭೋಜನಾದಿಗಳನ್ನು ತೀರಿಸಿಕೊಂಡವರೇ ವಿಜಯೀಂದ್ರನ ಮನೆಗೆ ಹೋದರು. ತೇಜಸ್ವಿಗಳಾದ ಆ ಮಹಾಮಹೋಪಾಧ್ಯಾಯರು ಹೀಗೆ ತನ್ನ ಮನೆಗೆ ನಡೆದು ಬಂದಿರುವದನ್ನು ಕಂಡು ವಿಜಯೀಂದ್ರನು ಚಕಿತನಾಗಿ "ಮಹಾ ಸ್ವಾಮಿಯವರು ಹೀಗೆ ನನ್ನಂಥ ಅಲ್ಪನ ಮನೆಗೆ ದಯಮಾಡಿದ ಕಾರಣವೇನು ?" ಎಂದು ವಿಜಯೀಂದ್ರನು ವಿನಯದಿಂದ ನಮಸ್ಕರಿಸಿ ಬೆಸಗೊಂಡನು.

"ವಿಜಯೀಂದ್ರ, ನಮ್ಮ ಪ್ರದ್ಯುಮ್ನ ಸಮಾಚಾರವೇನು ? ಇಂದು ನಿಮ್ಮಲ್ಲಿ ಯಾಕೆ ಭೋಜನ ಮಾಡಿದನು ? ಈಗೆಲ್ಲಿರುವನು ?" ಮುಂತಾದ ಅನೇಕ ಪ್ರಶ್ನಗಳನ್ನು ಪಂಡಿತರು ಕೇಳಿದರು.

"ಮಹಾತ್ಮರ ಮುಂದೆ ಸುಳ್ಳಾಡುವದು ಸರಿಯಲ್ಲ. ನರಸಮ್ಮನವರು ಪ್ರದ್ಯುಮ್ನನಿಗೆ ನಿತ್ಯದಲ್ಲಿಯ ಕಿಟಿಕಿಟ ಮಾಡುತ್ತಿರುವರು. ಪ್ರದ್ಯುಮ್ನನೆಂದೇ ಅದನ್ನೆಲ್ಲ ಸಹಿಸುತ್ತೆ ಬಂದನು. ಈವತ್ತಿನ ದಿವಸವಂತ ಅವರು ಪ್ರದ್ಯುಮ್ಮನಿಗೆ ಮಾಡಿದ ಅನುರ್ಯಾದೆಯನ್ನು ನೋಡಿ ನನಗೆ ಕೂಡ ಅತಿಶಯವಾದ ಖೇದವಾಯಿತು."

"ಏನಾಯಿತು ವಿಜಯೀಂದ್ರ ? ಎಂದು ವಿದ್ಯಾಧೀಶರು ವ್ಯಾಕುಲರಾಗಿ ಕೇಳಿದರು.

"ಉತ್ತಮ ತರಗತಿಯಲ್ಲಿ ಬೀ. ಏ. ಪರೀಕ್ಷೆ ಕೊಟ್ಟವನೂ ಶ್ರೀಮಂತರೂ, ಪ್ರತಿಷ್ಠಿತರ ಆದವರ ಮಗನೂ ಆದ ಪ್ರದ್ಯುಮ್ನನಿಗೆ ನಿಷ್ಕಾರಣವಾಗಿ ಮಾಡಿದ ಅಪಮಾನದ ಶಹನವಾದೀತೇ?"