ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
402
ಕನಸು

“ಇಲ್ಲ. ಅಚ್ಚು ಹಾಕೋಣ, ಸಂಪಾದಕರಾದ ತಪ್ಪಿಗಾದರೂ ಒಬ್ಬೊಬ್ಬರದು ಒಂದೊಂದು ಇದ್ದರೆ ವಾಸಿ-ಅಂದರು.”

ಬಾಣ ನಾಟಿತು. ಲಕ್ಷ್ಮೀಕಾಂತ ಕೆರಳಿ ನುಡಿದ:

“ಕವಿತೇನ ಸೇರಿಸ್ಕೊಂಡಿರೋದು ನನ್ನ ಮೇಲಿನ ದಾಕ್ಷಿಣ್ಯದಿಂದ ಅನ್ನಿ, ಆ ಕವಿತೆಗೆ ಸ್ವಂತದ ಯೋಗ್ಯತೆ ಏನೂ ಇಲ್ಲ ಹಾಗಾದರೆ.”

“ಅದೆಲ್ಲ ನನಗೆ ಗೊತ್ತಿಲ್ಲ. ಆ ವಿಚಾರ ನೀವು ಅಧ್ಯಾಪಕರನ್ನೆ ಕೇಳಬಾರೆ?”

“ಕೇಳದೆ ಬಿಡ್ತೀನೀಂತ ಅಂಡ್ಕೊಂಡಿರೊ?”

....ಶ್ರೀಕಂಠಯ್ಯನವರಿಗೆ ರೇಗಿತು. ಅವರು ಲಕ್ಷ್ಮೀಕಾಂತನನ್ನು ಉದ್ದೇಶಿಸಿ ಅಂದರು:

“ಏನಪ್ಪ ಸಮಾಚಾರ? ಏನು ವಿಶೇಷ? ವಿದ್ಯಾರ್ಥಿಯಾಗಿರೋದು ನೀನೋ ನಾನೋ?”

ಅಷ್ಟಕ್ಕೆಲ್ಲ ಅಂಜುವವನಾಗಿರಲಿಲ್ಲ ಕವಿ ಲಕ್ಷ್ಮೀಕಾಂತ.

“ನೀವು ಹೀಗೆಲ್ಲ ಫೇವರಿಟ್ ತೋರಿಸೋದು ತಪ್ಪು, ಸಾರ್.”

“ಫೇವರಿಟ್ ಅಲ್ಲ ಕಣಯ್ಯ, ಫೇವರ್ ಅನ್ನು, ಅಥವಾ ಫೇವರಿಟಿಸಂ ಅನ್ನು, ಪಕ್ಷಪಾತ ಅಂತ ಸ್ವಚ್ಛವಾಗಿ ಹೇಳಿದರೆ ಮತ್ತಷ್ಟು ವಾಸಿ.”

“ಥ್ಯಾಂಕ್ಸ್ ಸಾರ್, ತಪ್ಪಾಗಿದ್ದರೆ ತಿದ್ದಿಕೊಳ್ಳೋಣ. ಅದಕ್ಕೇನು? ಆದರೆ ನೀವು ಈ ರೀತಿ ಮಾಡೋದು ಮಾತ್ರ ಸರಿಯಲ್ಲ.”

“ಏನಯ್ಯ ಅದು, ಸರಿ-ತಪ್ಪು?”

“ಇದು ಸರ್ವಾಧಿಕಾರ ಸಾರ್.”

ಆತ್ಮೀಯತೆಗೆ ಅವಕಾಶವಿಲ್ಲವೆಂದು ಅಧ್ಯಾಪಕರು ಬೇಗನೆ ಬಹು ವಚನಕ್ಕೆ ತಿರುಗಿದರು:

“ನಿಮ್ಮ ಕವಿತೆಗಳನ್ನೆಲ್ಲ ಅಚ್ಚು ಹಾಕಿಸ್ಟೇಕಾಗಿತ್ತೂಂತ ತಾನೆ ನೀವು ಹೇಳೋದು?"

ಲಜ್ಜೆಗೊಳ್ಳುವ ಅಭ್ಯಾಸವೆಲ್ಲ ಲಕ್ಷ್ಮೀ ಕಾಂತನಿಗಿರಲಿಲ್ಲ.

“ಹೌದು.”

“ಒಂದು ಬಿಟ್ಟು ಉಳಿದದ್ದೆಲ್ಲ ಹಾಗೇ ಇವೆ. ನೋಡೀಪ್ಪ. ಅವನ್ನೆಲ್ಲ ವಿಶ್ವ ವಿದ್ಯಾನಿಲಯದ ಪ್ರಬುದ್ಧ ಕರ್ಣಾಟಕ ಪತ್ರಿಕೆಗೆ ಕಳಿಸೋದೇ ಯೋಗ್ಯ.”

“ಅದಕ್ಕೆ ನಿಮ್ಮ ರೆಕಮೆಂಡ್ ಬೇಕಾಗಿಲ್ಲ ಸಾರ್.”

“ರೆಕಮೆಂಡ್ ಅಲ್ಲ, ರೆಕಮೆಂಡೇಷನ್, ಶಿಫಾರಸು ಅಂತ.”

ಲಕ್ಷ್ಮೀಕಾಂತ ಸ್ವರವೇರಿಸಿ ನುಡಿದ:

“ನನ್ನ ಸಂಪಾದಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ.”

ಅದರಿಂದ ನಮ್ಮ ಸಂಪಾದಕ ಮಂಡಲಕ್ಕೆ ತುಂಬಾ ನಷ್ಟವಾಗೋದೇನೊ ನಿಜ.