ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೯೪
ನಡೆದದ್ದೇ ದಾರಿ

ಅಂತಾರ ಅದಕ್ಕ." ದೊಡ್ಡ ವಿಮರ್ಶಕನ ಧಾಟಿಯಲ್ಲಿ ಹೇಳಿದ್ದ ಆತ.
ಗಂಡನನ್ನು ಬಯಸಿಯ ವಿರೋಧಿಸಲಾಗದ ವಿಧೇಯ ಧರ್ಮಪತ್ನಿ
ಸರೋಜ ಅವನು ಹೊರಗೆ ಹೋದೊಡನೆ ತನ್ನೆಡೆ ಬಂದು ರಮಿಸುವ ಧ್ವನಿಯಲ್ಲಿ
ಅಂದಿದ್ದಳು, “ಇವರ ಸ್ವಭಾವನೇ ಹಾಂಗ ಸಹನಾ, ನೀಯೇನೂ ಮನಸಿಗೆ
ಹಚಿಗೊಬ್ಯಾಡ. ಆರಾಮ ಇರು, ನವೆಂಬರದಾಗಿನ ಆಲ್ ಇಂಡಿಯಾ ಆರ್ಟ್
ಎಕ್ಸಿಬಿಶನಿಗೆ ಒಂದು ಚಿತ್ರಾ ತಗೀಬೇಕಾಗೇದ ಅಂದೆಲ್ಲಾ, ಅದನ್ನ ಈ ಸೂಟಿಯೊಳಗೆ
ತಗದು ಮುಗಿಸಿಬಿಡು. ನಿನಗ ಈ ಸ್ಪೆಶಲ್ ರೂಮು ಕೊಟ್ಟಿರತೀನಿ, ಮತ್ತೇನು ಬೇಕೋ
ಹೇಳು, ಎಲ್ಲಾ ಅನುಕೂಲ ಮಾಡಿಕೊಡತೀನಿ. ಶಾಂತ ವಾತಾವರಣ ಬೇಕು ಅಂತಿದ್ದಿ;
ಇಲ್ಲಿ ಬೇಕಾದಷ್ಟು ಶಾಂತತಾ ಆದ. ಯಾರೂ ಡಿಸ್ಟರ್ಬ್ ಮಾಡವರಿಲ್ಲ."
“ಥ್ಯಾಂಕ್ಸ್ ಸರೋಜ."
-ಇದಕ್ಕೂ ಹೆಚ್ಚಿಗೆ ಏನು ಹೇಳಬಹುದಾಗಿತ್ತು ತಾನು ? ತನ್ನ ತಲೆ ತುಂಬ,
ಮನ ತುಂಬ ತುಂಬಿದ್ದ ವಿಚಾರ ಒಂದೇ - ಮುಂಬರುವ ಅಂತರ್‌ರಾಜ್ಯ ಮಟ್ಟದ
ಕಲಾ ಪ್ರದರ್ಶನಕ್ಕೆ ತಾನು ಕಳಿಸಬೇಕಾಗಿರುವ ಚಿತ್ರ: ತನ್ನ ಭವಿಷ್ಯವನ್ನೇ
ಬದಲಿಸಬಹುದಾದ ಕೃತಿ; ಮನಸ್ಸು ಕೊಟ್ಟು ಮಾಡಬೇಕಾಗಿರುವ ಕೆಲಸ, ಶಾಂತವಾದ
ಈ ಜಾಗದಲ್ಲಿ ಒಂದು ತಿಂಗಳು ಪ್ರಯತ್ನ ಮಾಡಿದರೆ ಯಶಸ್ವಿಯಾಗಿ
ಮುಗಿಸಬಹುದು. ಆದರೆ ಕಳೆದ ಎಂಟು ದಿನದಿಂದಲೂ ಸತತವಾಗಿ ಹತ್ತಿರುವ
ಮಳೆಯಿಂದಾಗಿ ಪೂರಾ ಬೇಸರವಾಗಿಹೋಗಿದೆ. ಕೆಲಸ ಸುರು ಮಾಡಲಿಕ್ಕೇ
ಮನಸ್ಸಾಗಲೊಲ್ಲದು. ಕಿಡಿಕಿಯ ಚೌಕಟ್ಟಿನಾಚೆ ಜಿಟಿ ಜಿಟಿ ಹನಿಯುವ ಮಳೆಯ ಕಡೆ
ಶೂನ್ಯವಾಗಿ ದೃಷ್ಟಿಸುತ್ತ ಕೂತು ಕೂತು ಸಾಕಾಯಿತು.
“ಏನು ಸಹನಾ ಚಿತ್ರಾ ತಗೀತೀನಿ ಅಂದಾಕಿ ಇನ್ನೂ ಏನೂ ಸುರು ಮಾಡೇ
ಇಲ್ಲಲ್ಲಾ, ಸ್ಫೂರ್ತಿ-ಗೀರ್ತಿ ಬರಬೇಕೇನು ಅದಕ್ಕೂ ? ನಿನಗಿನ್ನ ಸ್ತೂರಿ ಕೊಡವರನ್ನ
ಎಲ್ಲೆ ಹುಡುಕಲೆವಾ ?" - ಕೆಲಸ ಮುಗಿಸಿ ಬಂದ ಸರೋಜ ನಗುತ್ತ ಕೇಳಿದಳು.
ಏನು ಹೇಳಬೇಕು ಅವಳಿಗೆ ?
“ಹೀಂಗಾದರ ಅದು ಮುಗಿಯೋದು ಹ್ಯಾಂಗ ಸಹನಾ ?"
“ನಾನರೆ ಏನು ಮಾಡಲಿ, ಸರೋಜ ? ಈ ಮಳೆಯ ಸಲುವಾಗಿ ನನಗ ಭಾಳ
ಬ್ಯಾಸರ ಬಂದದ, ಒಂದ ಸ್ವಲ್ಪರೆ ಬಿಸಲು ಬಿಂದ್ರ ಕೆಲಸಾ ಸುರೂ ಮಾಡ್ತೀನಿ.
ಮುಗಸದೇನು ತಡಾ ?"
“ಅಲ್ಲs ಹುಚ್ಚಿ, ಮಳೆಗೂ ನಿನ್ನ ಚಿತ್ರಕ್ಕೂ ಏನು ಸಂಬಂಧ ? ಮಳೆ ಹೊರಗ
ಬರತಿರತದ. ನೀ ಒಳಗ ಕೂತು ಚಿತ್ರಾ ತಗೀಲಿಕ್ಕೆ ಏನಡ್ಡಿ ?"