ನಡೆದದ್ದೇ ದಾರಿ
-ಮತ್ತು ಈ ಎಲ್ಲ ಕತೆಗಳ ನಡುನಡುವೆ ಅಲ್ಲಲ್ಲಿ ಹರಕು ಸೀರೆಗೆ ಹಚ್ಚಿ
ಹೊಲಿದ ತೇಪೆಯಂತೆ ಬರುವ ಆ ಶೆಟ್ಟರ ಸದಾಶಿವರಾಯನ ಸುದ್ದಿ .... ಕೇಳಿ ಕೇಳಿ
ಮಾಲತಿಗೆ ಸಾಕಾಗಿದೆ. ಹಾಗೆಂದು ಹೇಳಿದರೆ,'ನನ್ನ ಕಂಡರೆ ನಿಮಗ್ಯಾರಿಗೂ ಲಕ್ಷ್ಯ
ಇಲ್ಲಾ, ನಾ ಸಾಯೋ ಹಾದೀ ಕಾಯ್ತೀರಿ ನೀವೇಲ್ಲಾ' ಎಂದ ಒದರಾಡಲು ಸುರು
ಮಾಡುತ್ತಾಳೆ ಮುದುಕಿ. ಯಾಕೆ ಹೀಗಾದಳು ತನ್ನ ಅವ್ವ?
ಯಾಕೆ? ಯೋಚಿಸಿ ಯೋಚಿಸಿ ಮಾಲತಿಗೆ ಸುಸ್ತಾಗಿದೆ.'ಅರವತ್ತು ದಾಟಿದ
ಮ್ಯಾಲ ಹೀಂಗ ಅಭ್ರಮಶುಭ್ರಮ ಆಗತದ ಕೆಲವರಿಗೆ.ಗಂಡ ಸತ್ತ ಮ್ಯಾಲ ಸ್ವಲ್ಪ
ಜಾಸ್ತಿ ಆಗೇದ ನಿಮ್ಮ ಅವ್ವಗ. ನೀ ಯಾಕ ವಿಚಾರ ಮಾಡತೀ ಬಿಡು'ಎಂದು
ಸಮಾಧಾನ ಮಾಡಿದ್ದ ಮಾಲತಿಯ ಗಂಡ.'ಇದು ಹೀಂಗ ಹೆಚ್ಚಾಗಿಕೋತ ಹೋದರ
ಏನು ಮಾಡೊದು?'ಎಂದು ಅವಳಂದಾಗ.'ಹೆಚ್ಚಾದರೇನು, ಅಂಥವರಿಗೆಲ್ಲಾ
ಸ್ಪೇಶಲ್ ದವಾಖಾನೀನೇ ಅವ ಅಲ್ಲ'ಎಂದು ಹಗುರವಾಗಿ ನಕ್ಕು ಬಿಟ್ಟಿದ್ದ ಆತ.
ನೆನಪಾದರೆ ಇನ್ನೂ ಮೈನಡುಕ ಬರುತ್ತದೆ ಮಾಲತಿಗೆ. ಮಗಳು ತಾನು
ಜೀವಿಸಿರುವಾಗ ಮುದುಕಿ ತಾಯಿಯನ್ನು ಹುಚ್ಚರಾಸ್ಪತ್ರೆಗೆ ಹಾಕುವುದೆ? ತನ್ನ
ಅವ್ವನಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆಯೆ? ಏನೋ ! ಎಲ್ಲರೂ ಹಾಗೆ
ಹೇಳುತ್ತಾರೆ. ತನಗೇಕೋ ಅದನ್ನೊಪ್ಪಲು ವಿಪರೀತ ಸಂಕಟ. ಆದರೆ ಅವ್ವನ
ನಡವಳಿಕೆಯಂತೂ ಈಗೀಗ ವಿಚಿತ್ರವಾಗುತ್ತಿದೆ...ಅಪ್ಪ ಸತ್ತಾಗ ಅವ್ವ ಬಳೆ
ತೆಗೆದಿರಲಿಲ್ಲ, ಕುಂಕುಮ ಅಳಿಸಿರಲಿಲ್ಲ. ಯಾರು ಹೇಳಿದರೂ ಅವಳ ಹಟವೇ ಹಟ.
'ನಾ ನನ್ನ ಜೀವನಾ ಎಲ್ಲ ಸಾಲೀ ಹುಡುಗರಿಗೆ ಪಾಠಾ ಕಲಸೂದರಾಗ ಕಳದೀನಿ.
ನನಗೇನು ನೀವು ಕಲಿಸಬೇಕಾಗಿಲ್ಲರ್ಯೋ.ನನ್ನ ಗಂಡ ಸತ್ತೇ ಇಲ್ಲ ಆನಸತದ ನನಗ.
ನಾ ಹ್ಯಾಂಗ ನನ್ನ ಕುಂಕುಮಾ ಅಳಸಲಿ? 'ಎಂದೆಲ್ಲ ಬಡಬಡಿಸಿದ್ದಳು. ಅವಳೊಂದಿಗೆ
ವಾದಿಸಿ ಫಲವಿಲ್ಲೆಂದು ತಿಳಿದಾಗ ಎಲ್ಲರೂ ಸುಮ್ಮನಾಗಿದ್ದರು.
ಆದರೆ ಅದೇ ಅವ್ವ ಇತ್ತೀಚೆ ಯಾರೂ ಹೇಳದೆಯೇ ಕುಂಕುಮಾ ಹಚ್ಚುವುದು,
ತಲೆ ಬಾಚುವುದು ಎಲ್ಲ ಬಿಟ್ಟಿದ್ದಾಳೆ.ಅವಳ ಒದರಾಟ - ಬಡಬಡಿಸುವುದು ದಿನಾ ದಿನಾ
ಹೆಚ್ಚಾಗುತ್ತಿದೆ. ಈ ಮಧ್ಯೆ 'ಏನೋ ಬಂತು, ಯರೋ ಬಂಧಾಂಗಾತು' ಎಂದು
ಬೇರೆ ಧಾಂಧಲೆ ಹಾಕತೊಡಗಿದ್ದಾಳೆ. ತನ್ನ ನೆರಳಿಗೆ ತಾನೇ ಹೆದರಿ ಕಂಗಾಲಾಗುತ್ತಾಳೆ.
ಇತ್ತೀಚೆ, ತೀರ ಇತ್ತೀಚೆ ಅದದ್ದು ಅವಳಲ್ಲಿ ಈ ಪರಿಯ ಬದಲಾವಣೆ.
ಒಮ್ಮೊಮ್ಮೆಯಂತೂ ಗಟ್ತಿಯಾಗಿ ಧ್ವನಿ ತೆಗೆದು ಅತ್ತು ರಂಭಾಟ ಮಾಡಿ ಮಕ್ಕಳಿಗೆ
ತುಂಬ ಬೇಸರವುಂಟು ಮಾಡುತ್ತಾಳೆ.
-ಅಂದು ಹೀಗೇ ಆಯಿತಲ್ಲ! ರಾಜನ ಹುಟ್ಟಿದ ದಿನವೆಂದು ಅವನ