ಕ್ಲಾಸ್‌ಮೇಟು- ಆ ಹುಡುಗ ಚಂದು ಬಂದಾನ"
"ಚಂದೂನs ? ಅವನಿಗೆ ಒಳಗ ಬಂದು ನನ್ನ ಭೆಟ್ಯಾಗಂತ ಹೇಳು. ನಾನs ಕೇಳತೀನಿ ಎಂದ ಲಗ್ನಾ ಮಾಡಿಕೋತಾನಂತ. ನೀ ಬೀನಾನ್ನ ಅವನ ಜೋಡಿ ಸಿನೇಮಾಕ್ಕ- ತಿರಗ್ಯಾಡ್ಲಿಕ್ಕೆ ಕಳಿಸಿ ಥಣ್ಣಗ ಕೂಡತೀ. ನಾಳೆ ಅವಾ ಎಲ್ಲೆರs ಓಡಿ ಹೋದರ ಏನ ಮಾಡತಿ? ಗಂಡಸರನ್ನ ನಂಬಬಾರದs ಖೋಡೀ. ಬೀನಾಗ ಏನೂ ತಿಳಿಯೂದಿಲ್ಲ. ಕರೀ ಇಬ್ರನ್ನೂ ಇಲ್ಲೆ...?"
"ಅವ್ವಾ, ಪ್ಲೀಜ್ , ಸ್ವಲ್ಪ ಸುಮ್ನಿರು. ನಾ ಎಲ್ಲಾ ಹೇಳತೀನಿ. "
ಮಾಲತಿಗೆ ಜೀವದ ಸುತ್ತು ಬಂದಿತ್ತು . ಚಂದುವಿಗೆಲ್ಲಿ ಕೇಳಿಸುವುದೋ ಎಂಬ ಭಯ ಅವಳಿಗೆ.
ಬೀನಾ ಬೆಳೆದ ಹುಡುಗಿ , ಚಂದುವನ್ನು ತಾನು ಪ್ರೀತಿಸುವುದಾಗಿಯೂ ಬಿ.ಎ. ಆದ ನಂತರ ತಾವಿಬ್ಬರೂ ಮದುವೆಯಾಗಲು ನಿರ್ಧರಿಸಿರುವುದಾಗಿಯೂ ಹೇಳಿದ್ದಾಳೆ . ಬೇಡವೆಂದರೆ ಅವಳು ಕೇಳಲಿಕ್ಕೂ ಇಲ್ಲ . ಸುಮ್ಮನೆ ಇಲ್ಲದ ಹಗರಣ ಮಾಡುವುದರಲ್ಲಿ ಏನರ್ಥವಿತ್ತು ? ಅವಳು ಚಂದುವಿನೊಂದಿಗೆ ಹೊರಗೆ ಹೋದಾಗಲೆಲ್ಲಾ ತಿರುಗಿ ಬರುವವರೆಗೂ ತನ್ನ ಹೃದಯ ಧಡಧಡಿಸುತ್ತಿರುತ್ತದೆ. ತಾನು ನಿಷ್ಕಾಳಜಿಯಿಂದಿರುವೆನೆಂದು ಅವ್ವನ ಆಕ್ಷೇಪಣೆ.ಯಾರಿಗೆ ಏನೆಂದು ತಿಳಿಸಿ ಹೇಳುವುದು?
-ಚಂದು ಹೋದೊಡನೆ ಬಿರುಗಾಳಯಂತೆ ಒಳನುಗ್ಗಿದಳು ಬೀನಾ. "ಓಹ್ ಮಮ್ಮೀ , ಇದು ಮನೀನೇ ಅಲ್ಲ. This is hell...hell, ಅಜ್ಜಿಗೆ ಸುಮ್ನ ಒತ್ತಟ್ಟಿಗೆ ಕೂಡಲಿಕ್ಕಾಗೂದಿಲ್ಲೇನು? ಯಾಕ ಹಿಂಗ ತ್ರಾಸ ಕೊಡ್ತಾಳ ಎಲ್ಲಾರಿಗೂ? ಆಕೀಗೆ ಖರೇನs ತಲೀ ಪೂರಾ ಕೆಟ್ಟು ಹೋಗೇದ. ನಾ ಎಂದಿನಿಂದ ನೋಡಲಿಕ್ಹತ್ತೀನಿ. ನನ್ನ ಮ್ಯಾಲಂತೂ ಭಾಳ ಕಣ್ಣು ಈ ಮುದುಕಿಗೆ. ನಾನು ಚಂದು ಇಬ್ಬರೇ ಇದ್ದಾಗೆಲ್ಲಾ ಆಕಿ ಖೋಲೀ ಸುತ್ತಮುತ್ತ ಸುಳದಾಡತಿರತಾಳ . ಕಿಡಕಿಯೊಳಗಿನಿಂದ, ಬಾಗಿಲ ಸಂದಿಯೊಳಗಿನಿಂದ ಹಣಿಕಿ ಹಾಕತಾಳ. ಚಂದೂಗ ಇವತ್ತ ಅದರ ಸಂಶಯ ಬಂತು, and he got so wild- ಇನ್ನೊಮ್ಮೆ ಮನೀಗೆ ಬರೂದಿಲ್ಲಂತ ಹೇಳೇ ಹೋಗ್ಯಾನ ಆತ. ಮಮ್ಮೀ, ನಾ ಏನ್ಮಾಡ್ಲಿ ಹೇಳು? ಈ ಹುಚ್ಚಿನ್ನ ಮನ್ಯಾಗ ನೀ ಇಟಗೊಂಡಿರೋ ತನಕಾ ನಮಗ್ಯಾರಿಗೂ ಶಾಂತಿ ಇಲ್ಲ.ಆಕಿನ್ನ ಹಾಸ್ಪಿಟಲಿಗೆ ಅಥವಾ ಮುದುಕರ ಸಲುವಾಗಿ ಬ್ಯಾರೆ ಆಶ್ರಮ ಇರತಾವಲ್ಲ ಅಲ್ಲೆ ಕಳಿಸಲಿಕ್ಕೆ ನೀ ಅಂತೂ ಒಪ್ಪೂದಿಲ್ಲ. ನಾನs ಈ ಮನೀಬಿಟ್ತು ಹೋಗಿಬಿಡ್ತೀನಿ.this is too much....."
"ಸಹನ ಮಾಡಿಕೋಬೇಕು ಬೀನಾ. ಅವ್ವಗ ನಮ್ಮನ್ನ ಬಿಟ್ಟರ ಯಾರಿದ್ದಾರ.