ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೩೮ ನಡೆದದ್ದೇ ದಾರಿ
ನೆಟ್ಟಗಿಲ್ಲವೇ? ಊರಿಗೆ ಹೋಗಿದ್ದಾನೆಯೇ? ಈ ಕೆಲಸ ಬಿಟ್ಟುಬಿಟ್ಟನೇ?
ಛೇ, ಈ ಯಾವುದನ್ನು ಒಪ್ಪಲು ಆಗುವುದಿಲ್ಲ. ಅವನು ಇಲ್ಲೆಲ್ಲಾದರೂ ಇರಲೇಬೇಕು. ಅವಳು ಟ್ರೇನು ಇಳಿದು ಪ್ಯ್ಲಾಟ್ಫಾರ್ಮ ಮೇಲೆಲ್ಲ ಆಡ್ಡಾಡಿದಳು. ಊಟದ ಮನೆಯ ಒಳಗೆ ಹೊಕ್ಕು ನೋಡಿದಳು. ಪ್ಲ್ಯಾಟಫಾರ್ಮುಗಳಾಚೆ ದೂರದಗುಂಟ ಕಣ್ಣು ಹರಿಸಿದಳು. ಅವನು ಎಲ್ಲೂ ಇಲ್ಲ. ಎದುರಿಗೊಬ್ಬ ಸಣ್ಣ ಹುಡುಗ-ನೀರು ಹೊರುವ ಹುಡುಗ. ಹಲವಾರು ಸಲ ಮಿಠಾಯಿವಾಲಾನೊಂದಿಗೆ ಕಂಡ ನೆನಪು-ಬರುತ್ತಿದ್ದಾನೆ. "ಏ ಹುಡುಗಾ, ಸ್ವಲ್ಪ ಬಾಪ್ಪಾ." ಏನೆಂದು ವಿಚಾರಿಸುವುದು ಇವನನ್ನು? ಮಿಠಾಯಿವಾಲಾ ಎಲ್ಲಿ ಎಂದೆ? ನಿಮಗೇಕೆ ಬೇಕೆಂದು ಅವನು ಕೇಳಿದರೆ? "ಇಲ್ಲಿ ಒಬ್ಬಾತ ಗಾಡಿಯಲ್ಲಿ ಮಿಠಾಯಿ ಇಟ್ಕೊಂಡು ಮಾರುತ್ತಿದ್ದನಲ್ಲ...." "ಓ, ಶಶಿದಾದಾನೇ?" -ಆ ಹುದುಗ ಹಲ್ಕಿರಿದು ಹೇಳಿದ."ಅವನು ಹೋಗಿ ಬಿಟ್ಟನಲ್ಲ ಬಾಯೀಸಾಬ್ ?" "ಅಂದರ ?" -ಎದೆಯಲ್ಲೇನೋ ನೋವು. "ಹಳ್ಳಿಯೊಳಗ ಅವನ ಅಪ್ಪಾ ಸತ್ತುಹೋದ್ರು. ಮನೆ ನೋಡ್ಕೊಳ್ಲಿಕ್ಕೆ ಅಂತ ಶಶಿದಾದಾ ಹೋಗಿಬಿಟ್ಟ. ನಿಮಗ ಮಿಠಾಯಿ ಬೇಕೇನ್ರಿ ಬಾಯೀ? ಬೇರೆ ಛಲೋ ತಂದ್ಕೊಡ್ತೀನಿ." "ಬ್ಯಾಡಪ್ಪ ಬ್ಯಾಡ. ನಿನ್ನ ಶಶಿದಾದಾ ತಿರುಗಿ ಬರೋದಿಲ್ಲೇನು ಹಂಗಾರ?" "ಇನ್ನ್ಯಾಕ ಬರ್ತಾನ್ರಿ ಬಾಯೀ?" -ಮಿಠಾಯಿವಾಲಾ ಇನ್ನು ಬರುವುದಿಲ್ಲ. ತಾನೀಗ ಹುಬ್ಬಳ್ಳಿಗೆ ಹೋದರೂ ತಿರುಗಿ ಬರುವಾಗ ಅವನು ಬರುವುದಿಲ್ಲ. ಮುಂದೆ ಎಂದಾದರೂ ತಾನು ಮತ್ತೆ ಈ ದಾರಿಯಿಂದ ಬಂದರೆ ಅವನು ಬರುವುದಿಲ್ಲ. ಅವನಿನ್ನು ಎಂದೂ ಬರುವುದಿಲ್ಲ. ಇನ್ನೆಂದೂ ಅವನ ಕಣ್ಣುಗಳಲ್ಲಿಯ ತನಗೆ ಪ್ರಿಯವಾದ ಆ ಬೆಳಕನ್ನು ತಾನು ನೋಡುವಂತಿಲ್ಲ .... ಆ ಬೆಳಕು-ಹಿಂದೆ, ಬಹಳ ಹಿಂದೆ, ತಾನು ಕಾಲೇಜಿನಲ್ಲಿದ್ದಾಗ ತನಗೆ ಶೆಲಿ ಕಲಿಸುತ್ತಿದ್ದ ಪ್ರೊಫೆಸರನ ಕಣ್ಣಲ್ಲಿ ಇದ್ದಂತಹದೇ ಬೆಳಕು....ಶೆಲಿ ಕಲಿಸಿದವನು ತನ್ನ ಪಾಲಿಗೆ ಸತ್ತು ಹಾಳಾಗಿ ಹೋದ ನಂತರದ ವರ್ಷಗಳ ತುಂಬ ಕವಿದಿದ್ದ ಕತ್ತಲನ್ನು ಹರಿಸಿದ್ದ ಬೆಳಕು- ಈ ಮಿಠಾಯಿವಾಲಾನ ಕಣ್ಣಲ್ಲಿ. ಜಗತ್ತು ತನಗೆ ಬಹಳ ಅನ್ಯಾಯ ಮಾಡಿತ್ತು. ತನ್ನ ಬೆಳಕನ್ನು ಕಸಿದುಕೊಂಡಿತ್ತು.
/ '