ಪುಟ:ನಡೆದದ್ದೇ ದಾರಿ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹುಡುಗ್ರು ಎಲ್ಲಾರ ಮುಂದ ಅತ್ತೂ ಕರೆದು ರಂಭಾಟ ಮಾಡ್ತಾಳ. ನಾಲ್ಕ ಮಂದೀಯೊಳಗ ನನ್ನ ಮರ್ಯಾದಿ ಹೋಗೋ ಪ್ರಸಂಗ. ಮೊದಲ ಏನರೆ ಮಾಡಿ ಆಕೀನ್ನ ಸಮಾಧಾನ ಮಾಡಬೇಕಾಗಿದೆ. ಯಾಕಂದ್ರೆ ಪಾಪ, ಆಕೀದೇನ ತಪ್ಪಿಲ್ಲ ನೋಡು ಇದರಾಗ. ಅದಕ್ಕ ಆಕೀ ಸಲುವಾಗಿ ಕೆಟ್ಟನಸತದ ನನಗೆ ... ಆದರ i am a brave man . ನಾ ನಿನ್ನ ಕಡೆ ಬರೋದೇನೂ ಬಿಡಾಂಗಿಲ್ಲಾ. ಇಷ್ಟ ಮೊದಲಿನ್ಹಾ೦ಗ ಮ್ಯಾಲಿಂದಮ್ಯಾಲೆ ಬರಲಿಕ್ಕ ಆಗ್ಲಿಕ್ಕಿಲ್ಲ. ಬರದಿದ್ರೇನಾತು, ನೀ ಕೆಟ್ಟನಿಸಿಕೋಬಾರದು. ಯಾಕಂದರ ಆದರಿಂದ ನನ್ನ ಪ್ರೀತಿ ಕಡಿಮಿ ಆಧಾಂಗ ಆಗಲಿಲ್ಲ ನೋಡು. ಹೌದಲ್ಲೋ?' - ಅದು ಆತನ ಪ್ರಶ್ನೆ + ಉತ್ತರ. ಆಕೆಗುಳಿದಿದ್ದು ಬರಿ ಗೋಣು ಹಾಕುವ ಕೆಲಸ.

-' ಶಾಂತಾ ಪಾಪ, ನಾನs ದೇವರಂತ ತಿಳಿದಾಳ. ನಾ ನಿನ್ನ ಬಿಡದಿದ್ದರ ಸತ್ತುಹೋಗತೀನಿ ಅಂತಾಳ.ಸತ್ತರೂ ಸಾಯೋ ಪೈಕೀನೇ ಆಕೀ. ಭಾಳ ಖಟ್ಟಾಜೀವ. ಹೀಂಗ ವ್ಯರ್ಥ ಜೀನ ಹತ್ಯಾ ಮಾಡೋದು ಛಲೋ ಅಲ್ಲಲ್ಲs ಮಿನಿ ? ನಿನಗಂತೂ ಅದು ಸುತರಾಂ ಒಪ್ಪಿಗಿಲ್ಲ ಅಂತ ಗೊತ್ತದ ನನಗ. ಸಣ್ಣ ಸಣ್ಣ ಎರದೂ ಮಕ್ಕಳ್ನ ಬಿಟ್ಟು ಎಲ್ಲೆರ ಬಾವಿ- ಗೀವಿ ಹಾರ್ಯಾಳು ಅಂತ ಅಂಜಿಎ ನನಗ. ಹಾಂಗಾಗಬಾರದಲ್ಲs? ಆದರ ನೀ ಮಾತ್ರ ಕಾಳಜಿ ಮಾಡಬ್ಯಾಡ.ನಾ ಯಾವಾಗ್ಲೂ ನಿನ್ನ ಪ್ರೀತಿ ಮಾಡತಾನs ಇರ್ತ್ತೀನಿ. ಇನ್ನೇನು , ನಿನ್ನ ಕಡೆ ಬರೋದು- ನಿನ್ನ ಕೊಡ ಇರೋದು ವಗೈರೆ ಸ್ವಲ್ಪ ಕಾಳಜೀಯಿಂದ, ಅವರಿವರ ಕಣ್ಣಿಗೆ ಬೀಳಧಾಂಗ ಮಾಡಬೇಕಾಗ್ತದ ಅಷ್ಟs. ನಾ ಎಲ್ಲ ಬರೋಬ್ಬರಿ ಮಾಡ್ತೀನಿ. ನೀ ಚಿಂತಿ ಬಿಡು.'
-ಆಕೆ ಚಿಂತೆ ಬಿಟ್ಟುಬಿಟ್ಟಿದ್ದಳು.
-'ಮನಿ, ಶಾಂತಾ ಸಾಯಬಾರದು ಅಂತ ಒಂದs ನನ್ನ ಇಚ್ಛಾ, ನನಗ ಆಕೀ ಅವಶ್ಯಕತಾ ಎಷ್ಟ ಆದ ಅನ್ನೋದು ಈಗೀಗ ಗೊತ್ತಾಗ್ಲಿಕಃತ್ತೆದ. ಇಷ್ಟ ವರ್ಷ ಎಂದೂ ನಾ ಅದರ ಬಗ್ಗೆ ವಿಚಾರನs ಮಾಡಿದ್ದಿಲ್ಲ ನೋಡು.ನನ್ನ ಮಕ್ಕಳನ ಹಡದಾಕಿ, ಬೆಳಸಿದಾಕಿ, ಆಕೀ ಸತ್ತರ ಮಕ್ಕಾಯ ಗತಿ ಏನು? ಆಕೀ ಮನಸ್ಸಿಗೆ ಸಮಾಧಾನ ಆಗೋಹಾಂಗ ಮಾಡಬೇಕಾದದ್ದು ನನ್ನ ಕರ್ತವ್ಯ.ಅದರ ನೀ ಏನೂ ವಿಚಾರ ಮಾಡಬ್ಯಾಡ ಮಿನಿ, ವಿಚಾರ ಮಾಡೊದರೆ ಏನದ? ನಿನಗ ಹ್ಯಾಂಗೋ ನೌಕರಿ ಆದ. ಏನೂ ಜವಾಬ್ದಾರೀನು ಇಲ್ಲ.ಇಷ್ಟರಮ್ಯಾಲ ಏನರೆ ಆಪತ್ತು ಬಂದರೆ ನಾ ಇದ್ದೀನಲ್ಲ. ನಾ ನಿನಗ ಎಂದೋ ಹೇಳೀನಿ - ಏನಾದ್ರೂ ನಿನ್ನ ಕೈ ಬಿಡೋದಿಲ್ಲಂತ. ಶಾಂತಾ ಅಂತಾಳ - ಇದು ಪಾಪ ಅಂತ, ಇದು ತಪ್ಪು ಅಂತ. ತಪ್ಪು ಮಾಡಿದೀನಿ , ಪಾಪ ಮಾಡೀನಿ. ಅದರ ಹೇಳಿದ ಮಾತು ತಪ್ಪಿಸೋ ಜಾತಿ ಅಲ್ಲ ನಂದು. ನಾ ಬಂದs ಬರ್ತೀನಿ.