ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು /ಮುಳ್ಳುಗಳು

ಮುಂದೆ ಸದಾ ಬಾಲ ಅಲ್ಲಾಡಿಸುತ್ತಾ ಬಿದ್ದಿರುವ ಆ ಗಂಡುನಾಯಿಯ ಕಣ್ಣಲ್ಲೂ ಅದೇ.ನಾಯಿಯಾದರೇನು,ಗಂಡಲ್ಲವೆ?

ಸೆರಗು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗದೆ ಹಾಗೆಯೇ ಅವಳು ಬಾಥರೂಮಿಗೆ ಹೋದಳು.ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ದೃಷ್ಟಿಸಿದಳು.ಈ ಮುಳ್ಳು ಚುಚ್ಚಿದಂತೆ ಅನಿಸುವದು ಬರೇ ಭ್ರಮೆಯೇ? ಅದು ನಿಜವೇ ಆಗಿದ್ದರೆ ಮೈಯೆಲ್ಲ ತೂತಾಗಬೇಕಿತ್ತಲ್ಲ!

"...ಗುಡ್ ಮಾರ್ನಿಂಗ್ ಮ್ಯಾಡಂ""-ನಡುವೆಯೇ ಬಂದ ದನಿ ಕೇಳಿ ಶಾಂತಿ ಹೊರಳಿ ನೋಡಿ ಉತ್ತರರೂಪವಾಗಿ ತುಟಿಯಗಳಿಸಿದಳು.ಟೂಥ್ ಬ್ರಶ್ ನಿಂದ ಹಲ್ಲುಜ್ಜಿಕೊಳ್ಳುತ್ತಿದ್ದ, ಬಾಯಲೇಲ್ಲಾ ಹೇಸಿಗೆ ಬರಿಸುವ ಹಾಗೆ ಕಾಲ್ಗೇಟ್ ಬಿಳಿನೊರೆ ತುಂಬಿದ,ಆರೆಬತ್ತಲೆ ನೈಟ್ ಡ್ರೆಸ್ನಲ್ಲಿದ್ದ ಮೇರಿ.ಮುಖ ತೊಳೆದು ರೂಮಿಗೆ ಹಿಂದಿರುಗುತ್ತಿದ್ದಾಗ ಶಾಂತಿಗೆ ಮಜಾ ಅನಿಸಿತು-ಈ ಮೇರಿ ಯಾವಾಗಲೂ ಅರ್ಧ ಮೈ ತೆರೆದುಕೊಂಡೇ ಗಂಡುಹುಡುಗರ ಭುಜಕ್ಕೆ ಭುಜ ತಾಗಿಸುತ್ತ ಕಾಲೇಜಿನಲ್ಲಿ ಅಡ್ಡಾಡುತಾಳೆ,ಇವಳಿಗೆ ಯಾರ ದೃಷ್ಟಿಯ ಮುಳ್ಳಿನ ಅನುಭವವೂ ಆಗಿರಲಾರದೆ? ಪ್ರೊಫೆಸರುಗಳ ರೂಮಿಗೂ ಬಂದು ತಾಸುಗಟ್ಟಲೆ ಒಂದೇ ವಾಕ್ಯದ ಅರ್ಥ ಕೇಳುತ್ತ ಫ್ರೀಯಾಗಿ ಕೂತಿರುತಾಳೆ,ಅದು ಯಾವುದೂ ಒಂದು ದಿವಸವೂ ಅವಳ ಹೃದಯದ ಆಳದ ವರೆಗೆ ಹೋಗಿರಲಾರದೆ? ಹೃದಯವೆಂಬುದಾದರೂ ಅವಳಿಗಿದೆಯೆ?ಆಥವಾ ಈ ಹೃದಯವೆಂಬುದು ಯಾರಿಗೂ ಇಲ್ಲವೇ ಇಲ್ಲವೋ ಏನೋ ಮಣ್ಣೋ!

'ಶಾಂತಿ,ನನ್ನ ಹೃದಯದಲ್ಲಿ ನಿನ್ನ ಮೂರ್ತಿಭದ್ರವಾಗಿ ನೆಲೆಯೂರಿದೆ' ಎಂದು ಅಂದು ಹಿಂದೆಂದೋ ಅಂದಿದ್ದ 'ಅವನು, 'ಮೂರ್ತಿಸಹಿತವಾಗಿ ಹೃದಯವನ್ನು ಕಿತ್ತು ಬಿಸಾಡಿಬಿಟ್ಟ ನಂತರ .ಆ ಅಯೋಗ್ಯನ ಕಣ್ಣಲ್ಲೂ ಮುಳ್ಲಿದ್ದವೇ?

ಸ್ಟೋವಿನ ಮೇಲೆ ಕುಡಿಯುತ್ತಿದ್ದ ಎಸರಿಗೆ ಸಕ್ಕರೆ ಹಾಕುತ್ತಿದ್ದಳು ಶಾಂತಿ. ಒಂದೂ, ಎರಡೂ, ಮೂರು- 'ಅವನ' ನೆನಪನ್ನು ಹೇಗಾದರೂ ಮಾಡಿ ಓಡಿಸಬೇಕು. ಇದು ನೆನೆಯುತ್ತ ಕೂಡುವ ಹೊತ್ತಲ್ಲ.ಕಾಲೇಜಿಗೆ ತಡವಾಗುತ್ತದೆ. ಇಂಥದರ ಬಗೆಗೆಲ್ಲ ತಲೆ ಕೆಡಿಸಿಕೊಳ್ಳಲು ತಾನೇನು ಹದಿನೈದರ ಹುಡುಗಿಯೇ ?-ಅಯ್ಯೋ ,ಎಷ್ಟು ಚಮಚೆ ಸಕ್ಕರೆ ಹಾಕಿದೆ ,ಮರೆತೇ ಹೋಯಿತಲ್ಲಾ !......ಹೋಗಲಿ,ತಾನು ಮಾಡಿದ ಚಹಾ ಕುಡಿದು ಯಾರು ಶಿಫಾರಸು ಕೊಡಬೇಕಾಗಿದೆ? ಸ್ವಲ್ಪ ಹೆಚ್ಚೇನು, ಕಡಿಮೆಯೇನು, ನಡೆಯುತ್ತದೆ.

ಹಿಂದೊಮ್ಮೆ ಹಾಸ್ಟೆಲಿಗೆ ಬಂದು ತಾನು ಮಾಡಿಕೊಟ್ಟ ಚಹಾ ಕುಡಿದಾಗ ಪ್ರೊ.ದೇಸಾಯಿ ಹೇಳಿದ್ದ, 'ಮಿಸ್ ಶಾಂತಿ ,ನಿಮ್ಮ ಚಹಾ ಅಗದೀ ಉತ್ತಮ ಆಗೇದ.