________________
೧೬೦ ನಡೆದದ್ದೇ ದಾರಿ “ನಾಯೇನು ತಯಾರಾಗೀಣ ? ಬರೇ ಒಂದ ಸಾದಾ ನೂಲಿನ ಸೀರಿ ಉಟೀನಿ. ನಿನ್ನಾಂಗ ಕರೀ ಕನ್ನಡಕ, ಲಿಪ್ ಸ್ಟಿಕ್ಕು, ದೊಡ್ಡ ವ್ಯಾನಿಟಿ ಬ್ಯಾಗು- ಏನೂ ಇಲ್ಲ.....ನನಗೂ ಹೊತ್ತಾತು. ನಾ ಇನ್ನ ಬರಲ್ಯಾ ? ಬಾಯ್ - " ಸಂಜೆ : ಖಾಲಿ ರೂಮು ತನ್ನನ್ನೇ ತಿನ್ನುವಂತೆ ಅನಿಸುತ್ತಿದೆ ಗಿರಿಜಾಗೆ, ಆಕೆ ಎದ್ದು ಕನ್ನಡಿಯ ಮುಂದೆ ನಿಂತಳು. ಉದುರಿಹೋಗುತ್ತಿರುವ ಕರಿಬಿಳಿ ಕೂದಲು : ಮುಖದ ತುಂಬ ವಿವಿಧ ಆಕಾರದ ಕಲೆಗಳು ; ಬೇಡವಾದಲ್ಲಿ ತುಂಬಿ ಬೇಕಾದಲ್ಲಿ ಬಡವಾಗಿದ್ದ ದೇಹ ; ಅವಳಿಗೆ ಬೇಸರ ಅನಿಸಿತು. ಶಾಂತಾಳ ಟ್ರಿಮ್ ಫಿಗರ್ ನೆನಪಾಗಿ ಇನ್ನೂ ಬೇಸರ ಅನಿಸಿತು. ಶಾಂತಳನ್ನು 'ಬ್ರಿಲಿಯಂಟ್' ಎಂದು ಹೊಗಳಿದ ಅವಳ ಪ್ರೊಫೆಸರರ ಮೇಲೆ ವಿಪರೀತ ಸಿಟ್ಟು ಬಂತು. ಎಷ್ಟು ಹುಡುಗರು ಅವಳ ಹಿಂದಿಂದೆ – ಎಂದು ನೆನಪಾಗಿ ಇನ್ನೂ ಸಿಟ್ಟು ಬಂತು. -ತನಗೆ ನಲವತ್ತು ಸಮೀಪಿಸುತ್ತಿದೆಯೆಂದು ಸಾರಿ ಹೇಳುವ ಕನ್ನಡಿಯಿಂದ ದೂರವಾಗಿ ಆಕೆ ಬಾಥ್ರೂಮಿಗೆ ಹೋಗಿ ಮುಖಕ್ಕೆ - ಮೈಗೆ ಬಡಬಡ ತಣ್ಣೀರು ಹುಯ್ದು ಕೊಂಡಳು. ಥಣ್ಣಗೆ ಅನ್ನಿಸಿತು. ತಣ್ಣಗಿನ ನೀರಿನಿಂದ ಒಳಗಿನ ಬೆಂಕಿಯಾದರೂ ಕರಗೀತೆಂದು ಇನ್ನಷ್ಟು ನೀರು ಹುಯ್ದು ಕೊಂಡಳು. ಬೆಂಕಿ. ಎಂತಹ ಬೆಂಕಿ ಇದು ! ತಾನು ಪುಸ್ತಕ ಓದುವಾಗ, ಕಾಲೇಜಿನಲ್ಲಿ ಕಲಿಸುವಾಗ, ಲೈಬ್ರೆರಿಯಲ್ಲಿ reference ಗಾಗಿ ಹುಡುಕಾಡುವಾಗ- ಸದಾ ಸುಡುವ ಬೆಂಕಿ, ರೇಖಾ ತನ್ನ ಗೆಳೆಯರ ಸುದ್ದಿ ಹೇಳುವಾಗ, ಶಾಂತಾಳ ಹಿಂದೆ ನಾಯಿಗಳ ಹಾಗೆ ಬೆನ್ನಟ್ಟುವ ಗಂಡಸರ ಗುಂಪು ನೋಡುವಾಗ, ಜೋಶಿಯ ಕೂಡ ಮಾತಾಡುವಾಗ, ಕೆಳಗಿನ ಮನೆಯ ಕಿಡಿಕಿಯಿಂದ ಅಣ್ಣ ಅತ್ತಿಗೆಯರ ಜೊಡುನಂಚ ಕದ್ದು ನೋಡುವಾಗ- ಭುಗಿಲೆನ್ನುವ ಬೆಂಕಿ. ಇದರಿಂದ ತನಗೆ ಬಿಡುಗಡೆಯೇ ಇಲ್ಲವೆ ? ಓ, ಇಂದು ಸಂಜೆ ಎರಡು ಮಹತ್ವದ ಕೆಲಸ : ಡಾಕ್ಟರರನ್ನು ಕಾಣುವುದು ಮತ್ತು ಭಡಕಲಗಲ್ಲಿಯ ರಾಮಭಟ್ಟನನ್ನು ಕಾಣುವುದು..... ಹತ್ತು ವರ್ಷದ ಹಿಂದೆ ಹೇಳಿದ್ದರು ತನ್ನ ತಂದೆಯ ಹಳೆಯ ಪರಿಚಯದ ಆ ಡಾಕ್ಟರು- “ಚಿಂತೀ ಮಾಡಬ್ಯಾಡ ಗಿರಿಜಾ, ಟೀಬೀ ಈಗೇನೂ ನೆಟ್ಟಗಾಗದ ಜಡ್ಡಲ್ಲ. Regularly ಔಷಧ ತಗೋ, ಇಂಜೆಕ್ಕನ್ ತಗೋ. ತಾನು ಗುಣಾ ಆಗತದ...." ಅಂದಿನಿಂದ ಅವರ ಪ್ರೀಟ್‌ಮೆಂಟ್ ನಡೆದೇ ಇದೆ. ತನಗೆ ಗುಣವಾಗುತ್ತಲೇ ಇದೆ. ಯಾಕೋ, ಈಗೀಗ ಯಾರನ್ನು ನೋಡಿದರೂ ಅವರಿಗೆ ಟೀವೀ ಆಗಿರಬೇಕು