ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕವಲು / ಹನುಮಾಪುರದಲ್ಲಿ ಹನುಮಜಯಂತಿ ೧೬೯
ಗದ್ದಲ ಒಮ್ಮೆಲೇ ಜೋರಾಯಿತು. 'ಇಲ್ಲ, ಶಕ್ಯ ಇಲ್ಲ, ನಾವೇ ಮೊದಲ', ಅದ್ಯಾಕಾದೀತು? ಇಷ್ಟ ದಿನಾ ಅವರದ್ದಾತು, ಇನ್ನ ನಾವು ಮೊದ್ಲ ಒಡೆಯಾವ್ರು, 'ಶಿವಶಿವಾ', 'ಹರಿಹರೀ'-ಗಳ ಮದ್ಯೆ ಯಾರ ಮಾತು ಯಾರಿಗೂ ಕೇಳಿಸದಂತಾಯಿತು.
೨ ಮಧ್ಯಾಹ್ನ ಹನ್ನೆರೆಡುವರೆ. ದೇವರ ತೇರು ಸಾಲಂಕೃತವಾಗಿ ತುತ್ತುರಿ-ಶಹನಾಯಿಗಳೊಂದಿಗೆ ಊರಿನ ಎಲ್ಲ ಜನರ ನಡುವಿನಿಂದ ಹಾಯ್ದು ಗಂಭೀರವಾಗಿ ಗುಡಿಯ ಮುಂದೆ ಬಂದು ನಿಂತಿತು. ಏನಾಗುವುದೋ ಎಂದು ಎಲ್ಲರ ಎದೆಗಳಲ್ಲಿ ಧಡಧಡಿಕೆ. ಹೆಂಗಸರಿಗಂತೂ ವಿಪರೀತ ಕುತೂಹಲ. ಹನ್ನೆರೆಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದ, ತೊಂಬತ್ತು ದಾಟಿದ ರಂಗಜ್ಜಿ ಸಹಾ ಕುತೂಹಲ ತಾಳದೆ ಮೊಮ್ಮಗಳ ಸಹಾಯದಿಂದ ಬಾಗಿಲಿಗೆ ಬಂದು ಕೂತಿದೆ. ಎಂದು ಮಂದಿಯಲ್ಲಿ ಬಂದು ಮುಖತೋರದ, ಹದಿನೆಂಟರಲ್ಲೇ ಬೋಳಮ್ಮನಾಗಿ ಕೂತ ಸುಶೀಲ, ವೇದಮೂರ್ತಿ ಶ್ರೀನಿವಾಸಾಚಾರ್ಯಾರ ಕಿರಿಮಗಳು, ಇಂದು ಹೊರಬಂದು ಅಶ್ವತ್ಥಕಟ್ಟೆಯ ಮರೆಗೆ ನಿಂತು ನೆರೆದವರನ್ನು ನೋಡುತಿದ್ದಾಳೆ. ಸದಾ ಲಿಂಗಪೂಜೆಯಲ್ಲಿ ಹೊತ್ತುಗಳೆಯುವ ರಾಮಗೌಡರ ಹೆಂಡತಿ ಹಿರಿಯ ಗೌಡಶಾನಿ ತನ್ನ ಮಡಿ ಮರೆತು ಹೊಲತಿ ಕಾಳಿಯ ಪಕ್ಕದಲ್ಲೇ ನಿಂತಿದ್ದಾಳೆ.ತೇರಿನ ಎದುರಿಗೆ ಎಡಗಡೆ ರಾಮಗೌಡ, ಅವರ ಹಿಂದೆ ಅವರ ಮಕ್ಕಳು,ಉಳಿದ ಲಿಂಗಾಯತರು, ಒಕ್ಕಲಿಗರು, ಬಲಗಡೆ ಗೋಪಾಲಚಾರ್ಯರು ಹಾಗು ಉಳಿದ ಬ್ರಾಹ್ಮಣವೃಂದ. 'ಪಟ್ಟಣಕ್ಕೆ ಹೋಗಿ ಛಲೋ ರಾಜಕೀಯ ಕಲ್ತು ಬಂದಾನ ವೀರಭದ್ರ, ಮೂರು ಹೊತ್ತು ಬಡದಾಡಿ ಸಾಯುತಿದ್ದ ಈ ಒಕ್ಕಳಿಗ್ಯಾರ ಜೋಡೀ. ಈಗ ನಮನ್ನ ಮೆಟ್ಟಿ ಹಾಕಲಿಕೆ ಹ್ಯಾಂಗ ಇವರನ್ನೆಲ್ಲ ಕೂಡಿಸಿಕೊಂಡಾನ ನೋಡ್ರಿ.' -ಕೇಶವಾಚಾರಿ ತಡೆಯದೇ ಅಂದ. ವೀರಭದ್ರನ ಉತ್ತರ ಬಾಣದಂತೆ ಹಾರಿ ಬಂತು, 'ಈ ರಾಜಕೀಯಾ ಕಲ್ಯಾಕ ಎಲ್ಯು ಹೋಗಬೇಕಾಗಿಲ್ಲ. ಇವೆಲ್ಲಾ ಇದ್ಯಾ ಕಳಿಸಾಕ ಅದೀರೇಲಾ ನೀವು ಹಾರೂರ ಮಂದಿ.' ಕೇಶವಾಚಾರಿ ಏನೋ ಅನ್ನಬೇಕು, ಆದ್ರೆ ಅಷ್ಟರಲ್ಲಿ ಉತ್ಸವ ಮೂರ್ತಿಯನ್ನು ಕೆಳಗಿಳಿಸಲಾಯಿತು.ಹ್ಞ, ಗೌಡ್ರಮುಂದಾಗ್ರಿ,','ಆಚಾರ, ನಡೆರಿ ಮುಂದ'-ಗಳ ಮದ್ಯೆ ಕೈಯಲ್ಲಿ ಕಾಯಿ ಹಿಡಿದ ರಾಮಗೌಡರು ಗೋಪಾಲಚಾರ್ಯರ ಕಡೆ ನೋಡಿದರು. ಒಮ್ಮೆಲೇ ಅವರಿಗೆ ಬಹಳ ವರ್ಷಗಳ ಹಿಂದೆ ತಾವಿಬ್ಬರು ಹುಡುಗರಾಗಿದ್ದಾಗ, ಒಮ್ಮೆ ಕೆರೆಯ ದಂಡೆಯ ಮಾವಿನ ತೋಪಿನಲ್ಲಿ ಹೀಚುಗಾಯೊಂದನ್ನು ಗುಬ್ಬಿ ಎಂಜಲು ಮಾಡಿ ತಿಂದದ್ದು ನೆನಪಾಯಿತು.