ಪುಟ:ನಡೆದದ್ದೇ ದಾರಿ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು /ಮುಳ್ಳುಗಳು

೧೩

ಯಾಕೆ ಸುಮ್ಮನೆ ದುಷ್ಟರ ಸಹವಾಸ ಎಂದು ಬಿಟ್ಟಿರಬೇಕು. ತಾನವನ ಗುರು. ಈಗ
ಗುಡ್-ಮಾರ್ನಿಂಗ್ ಹೇಳುವಾಗ ಒಬ್ಬ ಗರ್ಲ್ ಫ್ರೆಂಡಿನೊಂದಿಗೆ ಮಾತಾಡುವಾಗ
ಇರುವಂಥ ಮುಖಭಾವ. ಹಾಳಾಗಿ ಹೋಗಲಿ. ಇವನಿಗೆ ಪ್ರತಿಯಾಗಿ
ಉತ್ತರಿಸಬಾರದು.
ಗಂಟು ಮುಖ ಹಾಕಿ ಹಾಗೇ ಮುಂದೆ ನಡೆದಳು ಶಾಂತಿ.
ಅಲ್ಲಾ, ಅಂದು ಹಾಗೆ 'ಪಿಕ್ಚರಿಗೆ ಬರುವಿರಾ ಮ್ಯಾಡಂ ಪ್ಲೀಜ್ ?' ಎಂದು ಈ
ಶೆಟ್ಟಿ ಕೇಳಿದಾಗ ಬರೇ ಸಿಟ್ಟೇ ಬಂದಿತ್ತೇ ತನಗೆ ? ಏನು ಅಭಿಮಾನವೂ ಅನ್ನಿಸಿತ್ತೋ?
ಸ್ವಲ್ಪ-ಸ್ವಲ್ಪ?
ಛೆ, ಅಂಥ ಗೂಂಡಾ ಕರೆದರೆ ಯಾವ ಹುಡುಗಿಗೆ ಅಭಿಮಾನವೆನ್ನಿಸಲು ಸಾಧ್ಯ.
ತನಗಂತೂ ಅವನ ಕಣ್ಣಿನಲ್ಲಿಯ ಜಾಲೀ ಮುಳ್ಳುಗಳ ಬಗೆಗೆ ಎಂದಿನಿಂದಲೂ ಹೇಸಿಗೆ.
ತನಗೆ ಹೇಗೆ ಅಭಿಮಾನವೆನಿಸುವುದು ಶಕ್ಯವಿದೆ?
ಆದರೂ ಶೆಟ್ಟಿ ಹ್ಯಾಂಡ್ ಸಮ್ ಇದ್ದಾನೆ ... ಸ್ಕೂಟರೂ ಚೆನ್ನಾಗಿದೆ ...
ನೂರಾಐವತ್ತು ಅಜ್ನಾನಿ-ಅವಿವೇಕಿಗಳ ದೊಡ್ಡ ಗುಂಪು ಪಿ. ಯು. ಸಿ.
ಕ್ಲಾಸಿನಲ್ಲಿ. ಇವರಿಗೆ ವ್ಯಾಕರಣ ಕಲಿಸಬೇಕು. ಅಂದರೆ ಭಾಷೆ ಸುಧಾರಿಸುತ್ತದೆ. ತಳಹದಿ
ಭದ್ರವಾಗಿದ್ದರೆ ಮನೆ ಗಟ್ಟಿಮುಟ್ಟಾಗುವುದಿಲ್ಲವೆ. ಹಾಗೆ.
ಏನೋ ಅಪಸ್ವರ.... ತನ್ನ ಜೀವನದ ವ್ಯಾಕರಣಪಾಠ ಸರಿಯಾಗಿ
ಆಗಲಿಲ್ಲವೇನೋ! ಈಗ ಮತ್ತೆ ಮೊದಲಿನಿಂದ ತಾನು ವ್ಯಾಕರಣ ಕಲಿಯಲು
ಸುರುಮಾಡಬೇಕೆ ಹಾಗಾದರೆ ? ಬಿ. ಎ. ಕ್ಲಾಸಿಗೆ ಬಂದು ಅಂಕಲೆಯ ಒಂದನೇ
ಭಾಷಾಂತರ ಓದಿದ ಹಾಗೆ ಆಗುತ್ತದಲ್ಲ!
ಬೋರ್ಡಿನ ಮೇಲೆ ಯಾವನೋ ಪ್ರೇಮವೀರ ದೊಡ್ಡ ಅಕ್ಷರಗಳಲ್ಲಿ I love you ಎಂದು ಬರೆದಿದ್ದಾನೆ. ಬಹುಶಃ ಪಂಜಾಬೀ ಡ್ರೆಸ್ಸಿನ ಆ ಚೆಂದ
ಹುಡುಗಿಯ ಸಲುವಾಗಿ ಇರಬೇಕು. ಮಧ್ಯಾಹ್ನ ಟೀಗೆ ಹೋದಾಗ ದೇಸಾಯಿಗೆ
ಹೇಳಲು ಒಳ್ಳೆ ವಿಷಯ.ರೊಮ್ಯಾಂಟಿಕ್ ಆಗಿ ಗಂಡಸರನ್ನು ಬೈಯಬಹುದು. ಇವರ
ಧೈರ್ಯ ಇಷ್ಟೇ. ಎದುರಿಗೆ ಹೋಗಿ ಬೊಗಳುವ ತಾಕತ್ತಿಲ್ಲ. ತೆರ ಮರೆಯಲ್ಲಿ ನಿಂತು
ವೊವ್ ಅನ್ನುತ್ತಾರೆ. ಮುಂದೆ ಹೋದರೆ ಸ್ತಬ್ಧ. ಜಾಗೃತವಾಗಿ ಉರಿಯುವುದು
ಕಣ್ಣಲ್ಲಿನ ಬೆಂಕಿಯೊಂದೇ. ಥತ್- ಅನ್ನಬಹುದು.... ವಾಹ್, ಇಂದು ನಿಜವಾಗಿಯೂ
ತಮ್ಮ ಮಾತುಕತೆಗೆ ರಂಗೇರುವುದು.
ಬಹುಶಃ ತಾನು ಹೀಗೆಲ್ಲ ರೊಚ್ಚಿನಿಂದ ಮಾತಾಡುತ್ತಿದ್ದುದರಿಂದಲೇ
ಇರಬೇಕು 'ಅವನು' ತನಗೆ ಹೆದರಿದ್ದು. ತನ್ನಿಂದ ದೂರ ಸರಿದಿದ್ದು. ಸಹಜವೆ. ಪಾಪ,