ಪುಟ:ನಡೆದದ್ದೇ ದಾರಿ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪

ನಡೆದದ್ದೇ ದಾರಿ

.

ಕಟ್ಟಿಕೊಂಡ ಹೆಂಡತಿ ತನಗೆ ಪೂರಾ ವಿಧೇಯಳಾಗಿರಬೇಕೆ೦ದು ಯಾವ
ಪೌರುಷಪ್ರಿಯನಾದ ಗಂಡಸು ಬಯಸುವದಿಲ್ಲ  ? 'ಅವನ'ದೇನೂ ತಪ್ಪಿಲ್ಲ. ಎರಡೂ
ಹೊತ್ತು ಅಡಿಗೆ ಮಾಡಿ ಹಾಕಿ,ರಾತ್ರಿ ಅವನೊಟ್ಟಿಗೆ ಮಲಗಿ, ಹಗಲು ಅವನೇನು
ಮಾಡಿದರೂ ಸುಮ್ಮನಿದ್ದು, ಸಾಕಿದ ನಾಯಿಯ ಹಾಗೆ ಬರೇ ಗೋಣು ಹಾಕುವ
ಆದರ್ಶ ಹೆ೦ಡತಿ ಬೇಕಾಗಿದ್ದಳು 'ಅವನಿ'ಗೆ. ಯಾರಿಗೆ ಬೇಡ ? ಹೆಂಡಿರ
ಡಿಗ್ರಿ- ಸುಡುಗಾಡು ತೆಗೆದುಕೊ೦ಡು ಏನು ಮಣ್ಣು ಮಾಡುವುದು?

ಮೂಲೆಯಲ್ಲಿ ಕುಳಿತ ಆ ಕ್ರಿಶ್ಚನ್ ಹುಡುಗ ಕಿಡಿಕಿಯ ಹೊರಗಡೆ
ನೋಡುತ್ತಿದ್ದಾನೆ, ಕಾರಿಡಾರ್ ನಲ್ಲಿ ಮಾತಾಡುತ್ತ ನಿಂತ ಹುಡುಗಿಯರ ಬೆನ್ನುಗಳ
ಕಡೆ. ಸಣ್ಣ ಹುಡುಗ ,ಹದಿನೇಳು ದಾಟಿರಲಾರದು. ಆದರೂ ನೋಟದಲ್ಲಿ ಮುಳ್ಳಿನ
ಪ್ರಖರತೆಯಿದೆ. ಕ್ಲಾಸಿನ ಕಡೆ ಇವನಿಗೆ ಲಕ್ಷ್ಯವೇ ಇದ್ದಂತಿಲ್ಲ. ಇವನನ್ನೇ ಎದ್ದುನಿಲ್ಲಿಸಿ
ಪ್ರಶ್ನೆ ಕೇಳಬೇಕು -ಕೂಗಿ ನಿಲ್ಲಿಸಿದಾಗ ಹೇಗೆ ಹಲ್ಲು ಕಿರಿಯುತ್ತಾನೆ ಅಯೋಗ್ಯ!
ಕಾಲರ ಹಿಡಿದು ಹೊರಗೆ ನುಗಿಸಿಬಿಡಬೇಕು. ಆದು ಸಾಧ್ಯವಿದ್ದಿದ್ದರೆ....

'Lovely' ವಿಶೇಷಣವನ್ನು ನಿನ್ನ ವಾಕ್ಯದಲ್ಲಿ ಉಪಯೋಗಿಸು ನೋಡೋಣ
ಎಂದರೆ, "Madam, you are lovely" ಎನ್ನುತ್ತಾನೆ ಅವನು, ಇವನ ಮಾತು
ಪ್ರಾಮಾಣಿಕವಾಗಿರಬಹುದೆ? ಅವನ ವಯಸ್ಸಿನ ಎರಡರಷ್ಟು ವಯಸ್ಸಾ ಗಲು
ಬಂದಿತು ನನಗೆ .ನನ್ನನ್ನೇ ವರ್ಣಿಸಹೊರಟಿದ್ದಾನೆ ಮಗ. ನನ್ನ ಮೇಲೊಂದು ಕವಿತೆ
ಬರೆಯುತ್ತಾನೇನೋ ಇನ್ನ ಕಾಲೇಜ ಮಿಸೆಲೆನಿಗೆ !ಇವನ ಮಾತು ಕೇಳಿ ಉಳಿದ
ಮುಠ್ಠಾಳರೆಲ್ಲ ಕ್ಲಾ ಸರೂಮಿನ ಮೇಲಿನ ಛಪ್ಪ ರ ಹಾರಿಹೋಗುವ ಹಾಗೆ
ನಗುತ್ತಿದ್ದಾರಲ್ಲ....

ಒಂದು ಕ್ಷಣ ಅವಳಿಗೆ ಬಹಳ ಸೆಂಟಿಮೆಂಟಲ್ ವಿಚಾರಗಳು ಬಂದವು. ಜಗತ್ತೇ
ತನ್ನನ್ನು ಅವಮಾನಿಸುತ್ತಿದೆ. ಇಡೀ ಜಗತ್ತಿನ ವಿರುದ್ಧ ಬಂಡೇಳಬೇಕು.
ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಜೀವಂತ ಸುಡಬೇಕು . ಕೊನೆಗೆ ತಾನೂ ಅದೇ
ಬೆಂಕಿಯಲ್ಲಿ ಬಿದ್ದು ಬೆಂದು ಹೋಗಬೇಕು....ಹಹ್ಹ ಹ್ಹ.......ಏ ಹುಡುಗಾ ,ನಿನ್ನಂತವರ
ಧೈರ್ಯ ಎಷ್ಟೊಂದು, ಕಿಮ್ಮತ್ತು ಏನೆಂದು ನನಗೆ ಗೊತ್ತಿದೆಯೋ. ಎಂಥ ಗಂಡಸು
ನೀನು! ಬರೇ ನಾನು ನಿನ್ನ ಉತ್ತರ ಕೇಳಿ ಕೆಂಗಣ್ಣು ಮಾಡಿದ್ದಕ್ಕೆ ಪೆದ್ದು ಪೆದ್ದಾಗಿ
ಕೂತುಬಿಟ್ಟಿ.......

ನಿಜವಾದ ಕಷ್ಟ ಪರಿಹಾರಕನೆ೦ದರೆ ಕ್ಲಾಸು ಮುಗಿಯಿತೆಂದು ಗಂಟೆ
ಹೊಡೆಯುವ ಪ್ಯೂನ್ ಒಬ್ಬನೇ. ಗಂಟೆಯ ಸದ್ದು ಸ್ವರ್ಗದ ಬಾಗಿಲೇ ಎನಿಸುತ್ತದೆ.............

"ಹಲೋ ಮಿಸ್ ಶಾಂತಿ ,ಟೀಗೆ ಬರ್ತೀರೇನು?"