ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹಸಿವು/ತಿರುಗಿ ಹೋದಳು
ಹೆಣ್ಣು ಹೆತ್ತು ಬಾಣಂತಿಜ್ವರ ಬಂದು ಕಣ್ಣು ಮುಚ್ಛಿಬಿಟ್ಟಳು. ಈಕೆಯಲ್ಲದೆ ಇನ್ನೂ ಇಬ್ಬರು ಹೆಂಡಿರು-ನಾಲ್ಕಾರು ಮಕ್ಕಳಿದ್ದ ಆ ಅಳಿಯನ ಮನೆಯಲ್ಲಿ ಅದೇ ಹುಟ್ಟಿದ ಕೂಸನ್ನು ಬಿಡಲಾಗದೆ ಇಮಾಮ್ ಬೀ ಆ ಮಗುವನ್ನು ಕರೆತಂದು ತಾನೇ ಜೋಪಾನ ಮಾಡಿದಳು. ಹೀಗೆ ಉಳಿದು ಬೆಳೆದ ಅವಳ ಮೊಮ್ಮಗಳು ಹಮೀದಾಬಾನು ತುಂಬ ಚಂದದ ಹುಡುಗಿ. ಹಬ್ಬ ಹರಿದಿನಗಳಲ್ಲಿ ಅಜ್ಜಿಯೊಡನೆ ಆಕೆ ಮನೆಗೆ ಬಂದಾಗ ಲಕ್ಷ್ಮಿ ಕೌತುಕದಿಂದ ಆಕೆಯನ್ನು ನೋಡುತ್ತಿದ್ದಳು. ಹಮೀದಾಬಾನುವಿನ ಬಿಲ್ಲಿನಂತಹ ಹುಬ್ಬುಗಳು , ಅಗಲವಾದ ಕಪ್ಪು ಕಣ್ಣುಗಳು, ನೇರವಾದ ಮೂಗು, ಸುಂದರ ಮೈಕಟ್ಟು, ಗೌರವರ್ಣ- ಎಲ್ಲವೂ ಸೇರಿ ಲಕ್ಷ್ಮಿಗೆ ಆಕೆ ಇತಿಹಾಸ ಪುಸ್ತಕದಲ್ಲಿನ ಚಿತ್ತೂರು ಪದ್ಮಿನಿಯ ಹಾಗೆ ಕಾಣುತ್ತಿದ್ದಳು. ಈ ಮುದ್ದು ಮೊಮ್ಮಗಳ ಬಾಳನ್ನು ಹಸನಾಗಿಸುವುದೊಂದೇ ಈಗ ಮುದುಕಿ ಇಮಾಮ್ಬ ಬೀಗೆ ಉಳಿದಿರುವ ಗುರಿ, ಆಸೆ.
ಹಲವಾರು ಸಲ ಆಕೆ ಅಮ್ಮನಲ್ಲಿ ಹೇಳಿದ್ದನ್ನು ಲಕ್ಷ್ಮಿ ಕೇಳಿದ್ದಳು.'ನೋಡಾಕ ಪಸಂದ ಖೂಬಸೂರತ ಅದಾಳು ನನ್ನ ಬೆಟೀ. ಸಾಲೀ ಕಲಿತ ಛಲೂ ಹುಡುಗನ್ನ ನೋಡಿ ಲಗ್ನಾ ಮಾಡ್ರಿ ಅಮ್ಮಾ, ಒಬ್ಬ ಹೆಣ್ತೀನ್ನ ನೆಚ್ಚಿಕೊಂಡು ಇರುವಂಟಥಾ ಹುಡುಗನ್ನ ನೋಡ್ರಿ ಅಮ್ಮಾ, ಸಾಹೆಬ್ರಿಗೆ ಹೇಳ್ರಿ, ನಿಮ್ಮ ಕಾಲು ಮುಗೀತನು'. ಈ ವಿಷಯದಲ್ಲಿ ಸಹಾಯ ಮಾಡುವೆನೆಂದು ಲಕ್ಷ್ಮಿಯ ಅಮ್ಮನೂ ಮಾತು ಕೊಟ್ಟಿದ್ದರು. ಆದರೆ ಹಮೀದಾಬಾನುವಿನ ದೈವ ಬೇರೆಯೇ ಇತ್ತು. ಒಂದು ಸಲ ಇಮಾಮ್ ಬೀಯ ತಮ್ಮನ ಮನೆಯಲ್ಲಿ ಆತನ ಮೊಮ್ಮಕ್ಕಳ ಮದುವೆಯಿತ್ತೆಂದು ಹಮೀದಬಾನು ಹದಿನೈದು ದಿನ ಮುಂಚೆಯೇ ಬೆಳಗಾವಿಗೆ ಹೋದಳು. ಮದುವೆಯ ಹೊತ್ತಿಗೆ ಹೋದರಯಿತೆಂದು ಇಮಾಮ್ ಬೀ ಹಿಂದೆ ಉಳಿದಳು. ಆದರೆ ಆ ಮದುವೆಗೆ ಇನ್ನೂ ಎರಡುದಿನ ಇರುವಾಗ ಇಮಾಮ್ ಬೀ ಒಗೆಯುವ ಕಲ್ಲಿನ ಹತ್ತಿರ ಬಿದ್ದು ಎಡಗಾಲಿನ ಮೂಳೆ ಮುರಿದು ಹೋಯಿತು. ಆ ದಿನಗಳಲ್ಲಿ ಆಕೆಗೆ ವಯಸ್ಸಾಗಿದ್ದರಿಂದ ಲಕ್ಷ್ಮಿಯ ಮನೆಕೆಲಸಕ್ಕೆ ಬೇರೊಬ್ಬಳು ಬರುತ್ತಿದ್ದರು. ಆದರೂ ಇಮಾಮ್ ಬೀಯ ಕಾಲು ಮುರಿದ ಸುದ್ದಿ ಕೇಳಿ ಲಕ್ಷ್ಮಿ ಅಪ್ಪ ಅವಳ ಮನೆಗೆ ಹೋಗಿ ಅವಳನ್ನು ದವಾಖಾನೆಗೆ ಕರೆದೊಯ್ದು ಪ್ಲಾಸ್ಟರು ಹಾಕಿಸಿ, ಅವಳ ಔಷಧೋಪಚಾರದ ಖರ್ಚೆಲ್ಲ ನೋಡಿಕೊಂಡರು . ಗಟ್ಟಿ ಜೀವವಾಗಿದ್ದ ಮುದುಕಿ ತಿಂಗಳೊಪ್ಪತ್ತಿನಲ್ಲಿ ಚೇತರಿಸಿಕೊಂಡು ಕುಂಟುತ್ತ ಓಡಿಯಾಡುವಂತಾದಳು. ಎಂದೂ ಮೊಮ್ಮಗಳನ್ನು ಅಷ್ಟು ದಿನ ಅಗಲಿರಲಾರದ ಇಮಾಮ್ ಬೀ ತನಗೆ ತುಸು ನೆಟ್ಟಗಾದೊಡನೆ ಮೊದಲು ಮೊಮ್ಮಗಳನ್ನು ಕರೆತರಲು ಬೆಳಗಾವಿಗೆ ಓಡಿದಳು.ಹೋಗುವಾಗ ಆಕೆ ಅಮ್ಮನಿಂದ ಬಸ್ಸು ಚಾರ್ಜಿಗಾಗಿ ಹಣ ಪಡೆದದ್ದೂ ಲಕ್ಷ್ಮಿಗೆ ನೆನಪಿದೆ. ಎರಡು ದಿನಗಳ ನಂತರ