ಪುಟ:ನಡೆದದ್ದೇ ದಾರಿ.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ನಡೆದದ್ದೇ ದಾರಿ

ಪ್ರೀತಿಸಿದರೆ ಸಾಕು, ತನಗೇನು ತನ್ನದೇ ಹಣವಿಲ್ಲವೇ ಖರ್ಚು ಮಾಡಲು, ಅನ್ನಿಸಿತು. ತಾನೇನು ಉಳಿದ ಹೆಂಗಸರಂತೆ ಆರ್ಥಿಕವಾಗಿ ಗಂಡನನ್ನು ಅವಲಂಬಿಸಬೇಕಾಗಿಲ್ಲ. ತನಗೆ ಏನು ಬೇಕಾದರೂ ತನ್ನ ಹಣದಿಂದ ಕೊಳ್ಳಬಹುದು. ಗಂಡನ ಹಣ ತನಗೆ ಬೇಡ. ಆತನ ಪ್ರೀತಯೊಂದು ತನ್ನ ಪಾಲಿಗಿದ್ದರೆ ಸಾಕು, ಅನ್ನಿಸಿತು. ತುಂಬುಮನಸ್ಸಿನಿಂದ ಆಕೆ ಗಂಡನ ಪ್ರೀತಿಗೆ ಮನತೆರೆದು ಸ್ಪಂದಿಸಿದಳು.

    ಆದರೆ ಎಷ್ಟೋ ಸಲ ಮತ್ತೆ ಆಸೆಯಾಗುತಿತ್ತು. ಗಂಡ ತನಗಾಗಿ ಏನಾದರು ತರಬೇಕು. ತಾನದನ್ನು ಪಡೆದು ಕಣ್ಣರಳಿಸಿದ್ದು ನೋಡಿ ಆತನ ಕಣ್ಣು ಅರಳಬೇಕು. ಹೀಗೆ ಎಲ್ಲ ಸಾಧಾರಣ ಹೆಂಗಸಿಗಿರುವ ಆಸೆ. ಆದರೆ ಬಾಯಿಬಿಟ್ಟು ಕೇಳುವ ಮಟ್ಟಕ್ಕೆ ಇಳಿಯಲಾರಳು. ಆಸೆಯನ್ನೂ ಹತ್ತಿಕ್ಕಲಾರಳು. ಹಾಗೊಮ್ಮೆ ಆವರ ಲಗ್ನದ ಮೊದಲನೆಯ ವಾರ್ಷಿಕೋತ್ಸವ ಬಂದಾಗ ತುಂಬ ಸಡಗರ ಪಟ್ಟು ಮಧ್ಯಾನ ಅರ್ಧರಜೆ ಹಾಕಿ ಆತನಿಗಿಂತ ಮೊದಲೇ ಮನೆಗೆ ಬಂದು ಸಿಹಿ ತಯಾರಿಸಿ, ಮನೆ ಸಿಂಗರಿಸಿ, ಆಭರಣ ತೊಟ್ಟು, ಹೊಸ ಸೀರೆಯುಟ್ಟು ಸಿಂಗಾರವಾಗಿ ಕಾತರದಿಂದ ಆತನಿಗಾಗಿ ಕಾಯ್ದಳು. ಆತ ತನಗಾಗಿ ಏನಾದರೂ ತರಬಹುದು ಅಂದುಕೊಂಡಳು. ಆತ ಏನೂ ತರದಿದ್ದಾಗ, ಗಮನಿಸದಿದ್ದಾಗ ಸಹಜವಾಗಿಯೇ ನೊಂದುಕೊಂಡಳು. ಕೊನೆಗೆ ಸೋತು 'ಇವತ್ತು ನಮ್ಮ ಲಗ್ನದ  ಆನಿವ್ಹರ್ಸರಿ ಅಲ್ಲವೇನ್ರಿ ?' ಅಂತ ಜ್ಞಾಪಿಸಿದಳು. 'ಹೌದಲ್ಲ, ಮರೆತೇ ಬಿಟ್ಟಿದ್ದೆ. ನಿನಗೆ ನನ್ನ ಸ್ವಭಾವ ಗೊತ್ತಲ್ಲ ಲಕ್ಷ್ಮಿ. ನಾನು ತಾರೀಖುಗಳಿಗೆ ಮಹತ್ವ ಕೊಡುವುದಿಲ್ಲ.' ಅಂದ ಸುರೇಶ, ಹೌದು ಅವಳಿಗೆ ಗೊತ್ತಿತ್ತು. ಆದರೆ ಅವಳಲ್ಲಿನ್ನೂ ಆಸೆ ಉಸಿರಾಡುತ್ತಿತ್ತು. 'ಮಾರ್ಕೆಟ್ ಕಡೆ ಹೋಗಿ ಬರೋಣವೇ ?' ಅಂದಳು. ಆತ ಸ್ಕೂಟರ್ ಸುರು ಮಾಡಿದ. ಆಕೆ ಇಚ್ಛಿಸಿದಂತೆ ದೇವಾಲಯಕ್ಕೆ ಕರೆದುಕೊಂಡು ಹೋದ. ಕಾಯಿಪಲ್ಲೆ, ಹಣ್ಣುಹಂಪಲು ಇತ್ಯಾದಿ ಕೊಂಡರು. ಇನ್ನೂ ಸ್ಪಷ್ಟವಾಗಲೆತ್ನಿಸುತ್ತ ಕೊನೆಯ ಪ್ರಯತ್ನವೆಂದು ಲಕ್ಷ್ಮಿ ಅಂದಳು. 'ಆ ಶೋಕೇಸ್‍ನೊಳಗಿರೋ ಸೀರೆ ಬ್ಯೂಟಿಫುಲ್‍ ಅದ ಅಲ್ರಿ'. ಆದರೆ ಆತನ ಬರಡು 'ಹ್ಞೂ' ಕೇಳಿ ಆಕೆಯ ಉತ್ಸಾಹ ಜರ್ರನೆ ಇಳಿದುಹೋಯಿತು. ಮುಂದೆ ಆಕೆ ಮಾತಾಡಲಿಲ್ಲ. ಹೌದು, ಸುರೇಶನ ಸ್ವಭಾವವೇ ಹಾಗೆ. ಇಂಥ ತಾರೀಖು ನೆನಪಿಡುವುದು, ಉಡುಗೊರೆ ತರುವುದು, ಶುಭಾಶಯ ಹೇಳುವುದು ಇತ್ಯಾದಿಯೆಲ್ಲ ಆತನ ಮಟ್ಟಿಗೆ ತೀರಾ ಔಪಚಾರಿಕ, ಚೈಲ್ಡಿಶ್‍. ತಾನು ಅರ್ಥಮಾಡಿಕೊಳ್ಳಬೇಕು. ಜಗಳವಾಡಲು, ಕಾಡಿ ಬೇಡಲು ತಾನೇನು ಅಶಿಕ್ಷಿತ ಅನಾಗರಿಕ ಹೆಂಗಸೆ ? ಆ ರಾತ್ರಿ 'ನಮ್ಮ ಪಾಲಿಗೆ ಪ್ರತಿ ರಾತ್ರಿಯೂ ಮೊದಲ ರಾತ್ರಿನೇ ಅಲ್ಲವೇ ಲಕ್ಷ್ಮಿ ?' ಅಂತ ಆತ ಬಳಿಗೆಳೆದುಕೊಂಡಾಗ ಆಕೆಯೂ ತಾರೀಖು-ಉಡುಗೊರೆ ಇತ್ಯಾದಿಗಳನ್ನು ಮರೆತುಬಿಟ್ಟಿಳು.