ಹಲವಾರು ಸಲ ಆಕೆ ಗಂಡನೊಂದಿಗೆ ಜಗಳವಾಡಿದಳು.ತನ್ನ ಹಕ್ಕು,ಆತನ ಕರ್ತವ್ಯ ಇತ್ಯಾದಿ ಬಗ್ಗೆ ಸೂತ್ರಗಳನ್ನು ಪಠಿಸಿದಳು.ಆತ ಆಕೆಯನ್ನು ಸೊಕ್ಕಿನ ಹೆಣ್ಣೆಂದು ಜರೆದ.ಇಬ್ಬರು ಬೇಜಾರುಪಟ್ಟರು. ಅದೆಲ್ಲ ಏನೇ ಆದರೂ ಲಕ್ಷ್ಮಿ ಹೆರಿಗೆಗಾಗಿ ತವರಿಗೆ ಹೋಗುವ ಹದಿನೈದು ದಿನ ಮೊದಲಿನಿಂದ ಹಗಲು ರಾತ್ರಿ ಅವನಿಗೆ ದುಂಬಾಲು ಬಿದ್ದಳು-'ನನಗ್ಯಾಕೋ ಹೆದರಿಕೆ.ಹೆರಿಗೆಯ ಡೇಟ್ ಕೊಟ್ಟಿದ್ದಾರಲ್ಲ ಡಾಕ್ಟರು,ಆ ಸುಮಾರಿಗೆ ೧೦-೧೨ ದಿನ ರಜೆ ತಗೊಂಡು ನೀವು ಬರ್ರಿ,ನೀವು ಹತ್ತಿರ ಇದ್ದರೇನೇ ನನಗೆ ಧಿರ್ಯ.ನಾನೆಂದು ನಿಮಗೆ ಏನು ಕೇಳಿಲ್ಲ.ಇದೊಂದಕ್ಕೆ ಇಲ್ಲ ಅನ್ನಬಾರದು.ಪ್ಲೀಸ್ ಬರಲಿಕ್ಕೇ ಬೇಕು.ಪ್ಲೀಸ್.'ಆತ ಹ್ಞೂ ಅಂದ....
***
ಲಕ್ಷ್ಮಿ ಹುಬ್ಬಳ್ಳಿಗೆ ಹೆರಿಗೆಗೆಂದು ಬಂದಾಗ ಅವಳ ತಾಯಿಯಷ್ಟೇ ಸಂಭ್ರಮಪಟ್ಟವರು ಇಮಾಂಬಿ,ಹಮೀದಬಾನು.ತಾನೇ ಮುಂದಾಗಿ ಹಮಿದಾಬಾನು ಲಕ್ಷ್ಮಿಯ ಹುಟ್ಟಲಿರುವ ಮಗುವಿಗೆ ಎಣ್ಣೆನೀರು ಹಾಕುವ ಕೆಲಸ ಮುಂಗಡವಾಗಿ ವಹಿಸಿಕೊಂಡಳು.'ಏನಂತಾನೆ ಗೌಸಸಾಹೇಬ'ಅಂತ ಲಕ್ಷ್ಮಿ ನಗುತ್ತ ಕೇಳಿದಾಗ ಮಾತ್ರ ಅಜ್ಜಿ-ಮೊಮ್ಮಗಳಿಬ್ಬರ ಮುಖಗಳು ಬಾಡಿದವು.ಎರೆಡು ತಿಂಗಳ ಹಿಂದೆ ಹಮಿದಾಬಾನುವಿನ ಕೊನೆಯ ಇಬ್ಬರು ಮಕ್ಕಳಿಗೆ ಸಿರಿಯಸ್ ಟೈಫಾಯಿಡ್ ಜ್ವರ ಬಂದಿತ್ತು.ಅದೇ ಸಮಯದಲ್ಲಿ ವಾರ್ಷಿಕ ಭೇಟಿಗೆ ಬಂದಿದ್ದ ಗೌಸಸಾಹೇಬ ಮಕ್ಕಳ ಗಂಭೀರ ಸ್ಥಿತಿಯನ್ನೂ ಕಡೆಗಣಿಸಿ,ಎಂಟೇ ದಿನ ಊರಲಿದ್ದು ತನ್ನ ವಾರ್ಷಿಕ ಕಾರ್ಯಕ್ರಮ ಮುಗಿಸಿ ತಿರುಗಿ ಹೋಗಿ ಬಿಟ್ಟಿದ್ದ.ಮುಂದೆ ಎಂಟು ದಿನಗಳಲ್ಲಿ ಎರೆಡೂ ಮಕ್ಕಳು ತೀರಿ ಹೋಗಿದ್ದವು.'ವೂ ಆದಮೀ ನಹೀ ಸೈತಾನ್ ಹೈ,-ಅಂತ ಇಮಾಂಬೀ ಶಪಿಸುತ್ತಿದಾಗ,'ಇನ್ನಾದರೂ ಬುದ್ಧಿ ಕಲಿ ಹಮೀದಾ.ಇನೊಮ್ಮೆ ಬಂದರೆ ಕುತ್ತಿಗೀ ಹಿಡಿದು ಅತ್ಲಾಗ ನೂಕಿ ಒದ್ದು ಕಳಿಸಿಬಿಡುಆ ಮಗನ್ನ'ಅಂತ ಲಕ್ಷ್ಮಿ ಸಿಟ್ಟು ಮಾಡುತ್ತಿದ್ದಾಗ,ಹಮೀದಾಬಾನುವಿನ ಕಣ್ಣುಗಳು ಮೌನವಾಗಿ ತುಂಬಿಕೊಂಡವು.
ಲಕ್ಷ್ಮಿಗೆ ಮಾತು ಕೊಟ್ಟಿದ್ದಂತೆ ಆಕೆಯ ಗಂಡ ಹೆರಿಗೆಯ ಸಮಯದಲ್ಲಿ ಬರಲಿಲ್ಲ.'ಅವರಿಗೆ ಎಷ್ಟು ಕೆಲಸವೋ ಏನೋ ನಾವೆಲ್ಲಾ ಇದ್ದೇವಲ್ಲ,'ಅಂದರು,ಲಕ್ಷ್ಮಿಯ ತಾಯಿ,ತಂದೆ,ತಮ್ಮ.ಆದರೂ ಲಕ್ಷ್ಮಿಗೆ ಗಂಡನ ಅಲಕ್ಷ್ಯದಿಂದ ಹೇಳತೀರದ ಬೇಸರವಾಯಿತು.ಗಂಡುಮಗು ಹುಟ್ಟಿದ ಸಂತೋಷದಲ್ಲಿ ಬೇಸರ ಸಾಕಷ್ಟು ಮರೆತೂ ಹೋಯಿತು.ಮುಂದೆ ತಿಂಗಳ ನಂತರ ಆತ ಬಂದಾಗ ಹೆರಿಗೆಯ ಹೊತ್ತಿನಲ್ಲಿ