________________
ಬಿಡುಗಡೆ } ಬಿಡುಗಡೆ ಅದೆಷ್ಟೋ ಪಾಲು ಕಹಿಯಾದದ್ದು , ಅಸಹ್ಯವಾದದ್ದು, ಕ್ರೂರವಾದದ್ದು. ಸರೋಜಾಗೆ ಬಾಯಾರಿದಂತೆನಿಸಿತು. ಒಂದು ಕಪ್ಪು ಬಿಸಿ ಚಹಾ ಬೇಕೆನಿಸಿತು. ತಾನಾಗಿ ಹೇಗೆ ಯಾರಿಗೆ ಕೇಳುವುದು ? ಗಂಡನ ಹೆಣ ಇನ್ನೂ ಪಡಸಾಲೆಯಲ್ಲಿ ಇದೆ. ಅವನ ಸುತ್ತಲೂ ಯಾರು ಯಾರೋ ಕೂತು ಅಳುತ್ತಿದ್ದಾರೆ. ಎಷ್ಟು ರಾಗಬದ್ಧವಾಗಿ ಅಳುತ್ತಿದ್ದಾರೆ. ನ್ಯಾಯವಾಗಿ ತಾನೂ ಈಗ ಅಳಬೇಕಾದ ಸಮಯ- ಎಲ್ಲರಿಗಿಂತ ಹೆಚ್ಚಿನ ದುಃಖ ತನಗೇ ಆಗಬೇಕಲ್ಲ ? ಆದರೆ ನ್ಯಾಯ ಅನ್ನುವುದು ಈ ದೇಶದಲ್ಲಿ, ಈ ಸಮಾಜದಲ್ಲಿ, ಅದೂ ಹೆಂಗಸಿನ ಪಾಲಿಗೆ ಇದೆಯೆ ? – ಅನೇಕ ವೇದಿಕೆಗಳ ಮೇಲಿಂದ ಭಾಷಣ ಮಾಡುತ್ತ ಸರೋಜಾ ಈ ಪ್ರಶ್ನೆ ಕೇಳಿದ್ದಾಳೆ, ಉತ್ತರ ಗೊತ್ತಿದ್ದೂ..... ಅರೆತೆರೆದ ಬಾಗಿಲ ಸಂದಿಯಿಂದ ಆಕೆಗೆ ಹೊರಗೆ ಮಲಗಿಸಿದ ಆತನ ಹೆಣ ಕಾಣುತ್ತಿದೆ. ಸ್ನಾನ ಮಾಡಿಸಿದ್ದಾರೆ. ಮೂಗಿನಲ್ಲಿ ಹತ್ತಿ ತುರುಕಿದ್ದಾರೆ. ಉದ್ದಕ್ಕೂ ಮಲಗಿದ್ದಾನೆ, ಈಗ ಎದ್ದು ಬರುತ್ತಾನೇನೋ ಅನ್ನಿಸುವಂತೆ, ಎದ್ದು ಬಂದು ಮತ್ತೆ ಕರ್ಕಶವಾದ ದನಿಯಲ್ಲಿ ಕೂಗಾಡುತ್ತಾನೇನೋ ಅನ್ನಿಸುವಂತೆ....
“ಏ ಸರೋಜಾ ಇಲ್ಲೆ ಬಾ....ಏನು, ಕರೆದ ಕೂಡಲೇ ಬರಿಕ್ಕೆ ಆಗೂದಿಲ್ಲ ನಿನಗ ? ಗ್ಯಾಸ್ ಮ್ಯಾಲ ಹಾಲು ಇಟ್ಟಿದ್ರೇನಾತು ? ನಾ ಬಾ ಅಂದ ಕೂಡ್ಡೆ ಗ್ಯಾಸ್ ಬಂದ್ ಮಾಡಿ ಬರಬೇಕು ತಿಳೀತು ?....ಪಗಾರ ಬಂತಲ್ಲ ನಿನ್ನೆ ? ಪಗಾರ ಬಂದ ಕೂಡ್ಡೆ ರೊಕ್ಕಾ ತಂದು ನನ್ನ ಕೈಯಾಗ ಕೊಡು ಅಂತ ಹೇಳಿಲ್ಲ... ನಿನಗ ?...ಹೌದು, ನಾ ಕುಡೀತೀನಿ, ಜೂಜು ಆಡ್ತೀನಿ, ಬೇಕಾದ್ದು ಮಾಡ್ತೀನಿ, ನೀ ಯಾರು ಕೇಳಾಕಿ ? ನನ್ನ ವ್ಯವಹಾರದಾಗ ನೀ ಕೈಹಾಕಬ್ಯಾಡ. ರೊಕ್ಕಾ ತಂದು ನನ್ನ ಕೈಯಾಗಿಟ್ಟು ಬಾಯಿ ಮುಚಿಗೊಂಡು ಸುಮ್ಮಿ ರು." “ಅಲ್ಲ ಸರೋಜಿ, ನೀ ಬ್ಯಾಂಕಿನ್ಯಾಗ ಆಫೀಸರ್ ಇದ್ದೀ ಖರೆ, ಆದರರ್ಥ ನಿನಗ ಬೇಕಾದವರ ಜೋಡಿ ಖಿಖಿಖಿ ಮಾಡಿಕೋತ ಚಕ್ಕಂದ ಆಡ್ಡಕ್ಕೆ ಲೈಸೆನ್ಸ್ ಅದ ಅಂತ ಅಲ್ಲ.... ಅಂವಾ ನಿನ್ನ ಕೊಲೀಗ್ ಇರಬಹುದು. ಕೊಲೀಗ್ ಇದ್ದರ ಕೆಲಸದ ಪೂರ್ತೆ ಎಷ್ಟೋ ಅಷ್ಟು ಮಾತಾಡೋಕು, ನಗೂದು-ಹಲ್ಲು ಕಿರಿಯೂದು ಯಾಕ ?....ನಾನು ತಪ್ಪು ಮಾಡಿದೆ. ಡಬಲ್ ಡಿಗ್ರಿ ತಗೊಂಡು ನೌಕರಿ ಮಾಡೋ ಹೆಂಗಸಿಗೆ ಕೊಬ್ಬು ಜಾಸ್ತಿ. ನಿನ್ನಂಥಾಕಿನ್ನ ನಾ ಲಗ್ಯಾನ ಮಾಡಿಕೋಬಾರದಿತ್ತು. ನಾ ಗಂಡ ಜೀವಂತ ಇದ್ದಾಗನs ಬ್ಯಾರೆ ಗಂಡಸರ ಜೋಡಿ ನಕ್ಕೋತ ಮಾತಾಡುವಾಕಿ ಲಗ್ನದಕಿಂತಾ