ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಹಾಗಿದ್ದರೆ ನನ್ನ ಕೂಡ ಬರ್ರಿ.ಹೀಗೆ ಸದ್ದು ಗದ್ದಲ ತುಂಬಿದ ರಸ್ತೆಗಿಂತ ಶಾಂತವಾಗಿರುವ ಸಮುದ್ರತೀರ ಒಳ್ಳೇ ಜಾಗ ನೆನೆಯೋದಕ್ಕೆ.ನಾನು ನಿಮ್ಮ ಕೂಡ ಮಳೆಯಲ್ಲಿ ನೆನೆಯುತ್ತೇನೆ. ಬರುತ್ತೀರಾ ?" -ಒತ್ತಾಯವಿಲ್ಲ.ಆದರೆ ಅನುನಯವಿದೆ ಪ್ರಶ್ನೆಯಲ್ಲಿ. ಒಂದು ಕ್ಷಣ ಆಕೆ ಆತನನ್ನು ದಿಟ್ಟಿಸಿದಳು.ಮರುಕ್ಷಣ ಆತನ ಸ್ಕೂಟರ್ ನೇರಿ ಹಿಂದಿನ ಸೀಟಿನಲ್ಲಿ ಕುಳಿತಳು. ಹಲವಾರು ಸಂದರ್ಭದಲ್ಲಿ ಹಲವಾರು ಗಂಡಸರು ಈ ಹಿಂದೆಯೂ ಆಕೆಯನ್ನು ಕೇಳಿದಿದ್ದು.'ಬರುತ್ತೀರಾ?' ಎಂದು -ಆಕೆ ಆಫೀಸಿಗೆ ಹೊಸದಾಗಿ ಕ್ಲಾರ್ಕ್ ಆಗಿ ಸೇರಿದ್ದಾಗ;ನಂತರ ಹಲವಾರು ಪರೀಕ್ಷೆಗಳನ್ನು ಪಾಸುಮಾಡಿ ಆಕೆ ಆಫೀಸರ್ ಆದಾಗ,ಜೊತೆಯಲ್ಲಿ ಕೆಲಸ ಮಾಡುವವರು,ಮೇಲಿನವರು,ಬಂದು ಹೋಗುವವರು;ಆಫೀಸಿನಲ್ಲಿ, ದಾರಿಯಲ್ಲಿ,ಪಾರ್ಟಿಗಳಲ್ಲಿ;ಆಕೆಗೆ ಎಂದೂ ಯಾರೊಂದಿಗೂ ಹೋಗಬೇಕು ಅನ್ನಿಸಿರಲೇ ಇಲ್ಲ.ವಿಶಾಲ ಮುಂಬಯಿಯಲ್ಲಿ ಆಕೆ ಎಲ್ಲ ರೀತಿಯಿಂದಲೂ ಒಂಟಿಯಾಗಿಯೇ ಈ ಎಲ್ಲ ವರ್ಷ ಕಳೆದಿದ್ದಳು. ಆಗ ಬಂದಿದ್ದ ಆತ ಆಕೆಯ ಜೀವನದಲ್ಲಿ.ನಂತರ ಈ ಹತ್ತು ವರ್ಷಗಳಲ್ಲಿ ಆಕೆಯೆಂದೂ ಒಂಟಿಯಾಗಿರಲೇ ಇಲ್ಲ.ಆತ ಯಾವಾಗಲೂ ಆಕೆಯ ಜೊತೆಗಿರುತ್ತಿದ್ದ.ರೂಮಿನಲ್ಲಿ, ದಾರಿಯಲ್ಲಿ,ಪೇಟೆಯಲ್ಲಿ, ಸಿನಿಮಾಗಳಲ್ಲಿ ,ಹೋಟೆಲುಗಳಲ್ಲಿ,ಸಮುದ್ರತೀರದಲ್ಲಿ,ಮೀಟಿಂಗುಗಳಲ್ಲಿ,ಆಫೀಸ್ ಟೂರುಗಳಲ್ಲಿ,ಅಲ್ಲಿ-ಇಲ್ಲಿ-ಎಲ್ಲೆಲ್ಲೂ ಆತ-ಆಕೆ ಜೊತೆ- ಜೊತೆಯಾಗಿ ದಿನಗಳನ್ನು ವರ್ಷಗಳನ್ನು ಕಳೆದಿದ್ದರು. ಆತನ ಟ್ರೇನಿಂಗಿನ ಅವಧಿ ಒಂದು ವರ್ಷದ್ದಾಗಿತ್ತು. ನಂತರ ಆಕೆ ಗಾಗಿಯೇ ಆತ ಮುಂಬಯಿಯ ಬ್ರ್ಯಾಂಚ್ ಆಫೀಸಿಗೇ ಕಷ್ಟಪಟ್ಟು ವರ್ಗಮಾಡಿಸಿಕೊಂಡಿದ್ದ.ನಂತರ ಅವರ ಸಹಜೀವನ ಕ್ರಮಬದ್ಧವಾಗಿ ಸಾಗಿಬಂದಿತ್ತು. ಮೊದಮೊದಲು ವರ್ಷಕ್ಕೊಮ್ಮೆಯೋ ಎರಡು ಬಾರಿ ಯೋ ಆತ ತನ್ನ ಬಂಧುಗಳನ್ನು ಕಾಣಲು ದಿಲ್ಲಿಗೆ ನಾಲ್ಕಾರು ದಿನಗಳ ಮಟ್ಟಿಗೆ ಹೋಗಿ ಬರುತ್ತಿದ್ದ.ಆಗ ಆಕೆಯು ತನ್ನೂರಿಗೆ ಹೋಗಿ ಯಥಾ ಪ್ರಕಾರ ಬಂಧು ಬಾಂಧವರಿಂದ ಈ ಬಗೆಯ ಜೀವನಕ್ಕಾಗಿ ಬೈಯಿಸಿಕೊಂಡು ಉಪದೇಶ ಹೇಳಿಸಿಕೊಂಡು ಬೇಸತ್ತು ತಿರುಗಿ ಬರುತ್ತಿದ್ದಳು.ಮುಂದೆ ಹಾಗೆ ಹೋಗುವುದನ್ನು ಇಬ್ಬರೂ ಬಿಟ್ಟು ಬಿಟ್ಟರು ಅದರ ಬದಲು ರಜೆ ಪಡೆದು ವಿಶ್ರಾಂತಿ ಧಾಮಗಳಿಗೆ ವಿಹಾರ ಸ್ಥಳಗಳಿಗೆ ಹೋಗುವ ಪರಿಪಾಠ ಹಾಕಿಕೊಂಡರು.ಪರಸ್ಪರರ ಸಹವಾಸದಲ್ಲಿ ಸಂಪೂರ್ಣ ಸಂತೃಪ್ತಿ-ಸಮಾಧಾನ ಹೊಂದಿದ್ದ ಅವರಿಬ್ಬರಿಗೂ