ಏನೇನೂ ಬಂಧನವಿಲ್ಲದ ಈ ಮುಕ್ತ ಜೀವನ ತುಂಬ ಒಗ್ಗಿಬಿಟ್ಟಿತ್ತು. ಅವರಿಬ್ಬರ ಸಂಬಂಧದಲ್ಲಿ ಯಾವುದೇ ರೀತಿಯ ಬೇಡಿಕೆಗಳಿರಲಿಲ್ಲ. ನಿರಾಕರಣೆಯೂ ಇರಲಿಲ್ಲ ; ಅವಶ್ಯಕತೆಯಿರಲಿಲ್ಲ, ಕೊರತೆಯೂ ಇರಲಿಲ್ಲ ; ನಿರೀಕ್ಷೆಯಿರಲಿಲ್ಲ, ನಿರಾಶೆಯೂ ಇರಲಿಲ್ಲ.
ಒಬ್ಬರಿನ್ನೊಬ್ಬರಿಗಾಗಿ ಹೇಳಿ ಮಾಡಿಸಿದ ಜೋಡಿಯಾಗಿದ್ದರು ಆತ-ಆಕೆ.
ಸಹಜವಾಗಿಯೆ ಜನ ಮಾತಾಡಿದರು. ಆದರೆ ಎಷ್ಟು ದಿನ ಮಾತಾಡುತ್ತಾರೆ? ಕೊನೆಗೆ ಸುಮ್ಮನಾಗಿಬಿಟ್ಟರು. ಜನರ ಮಾತುಗಳನ್ನು ಅವರಿಬ್ಬರೂ ಎಂದೂ ತಲೆಯಲ್ಲಿ ಹಾಕಿಕೊಂಡವರಲ್ಲ, ಮನಸ್ಸಿನಲ್ಲಿ ಹಚ್ಚಿಕೊಂಡವರಲ್ಲ.
* * *
ಹೀಗೆ ಹತ್ತು ವರ್ಷಗಳು ಜೊತೆಯಾಗಿ ಚಿಂಯಿಲ್ಲದೆ ಒಂದು ರೀತಿ ಸುಖವಾಗಿ
ಕಳೆದ ನಂತರ ಈಗ ಕೆಲ ದಿನಗಳ ಹಿಂದೆ ಆಕೆಗೆ ಅಸ್ವಾಸ್ಥ್ಯವಾಯಿತು. ಸುಸ್ತು, ಸಂಕಟ. ಹಲವಾರು ಬಾರಿ ಗುರುತಿನ ಲೇಡಿ ಡಾಕ್ಟರರ ಕಡೆ ಆಕೆ ಎಡತಾಕಬೇಕಾಯಿತು. ಆಮೇಲೋಮ್ಮೆ ಡಾಕ್ಟರು ಆಕೆಗೆ ಮೆಲುದನಿಯಲ್ಲಿ ಹೇಳಿದರು,"ನೀವು ಬಸಿರಿ,ಎರಡು ತಿಂಗಳಾಗಿ ಹೋಗಿದೆ."
"ಹೌದೆ?" ಎಂದಷ್ಟೆ ಅಂದ ಆಕೆ ಮುಂದೆ ಮಾತಾಡಲಾರದೆ ಹೋದಳು.
ದಿಗ್ಬ್ರಮೆ, ಆಶ್ಚರ್ಯ, ಒಂದು ತರದ ಭಯ, ಎಲ್ಲಕ್ಕೂ ಮಿಗಿಲಾಗಿ ಏನೋ ಸಂಭ್ರಮ. ಯಾವ ಸಾಮಾನ್ಯ ಭಾವನೆಗಳು ತನ್ನಲ್ಲಿ ಇಲ್ಲವೆಂದು ಈವರೆಗೂ ನಂಬಿದ್ದಳೋ ಅಂಥ ಎಲ್ಲ ವಿವಿಧ ನಮೂನೆಯ ಅನಿಸಿಕೆಗಳು.
ಸಂದರ್ಭದ ಅರಿವಿದ್ದ ಲೇಡಿಡಾಕ್ಟರು "ಮತ್ತೊಮ್ಮೆ ನಿಧಾನವಾಗಿ ಯೋಚಿಸಿ
ಬನ್ನಿರಿ, ನೋಡುವಾ" ಅಂತ ಬೆನ್ನು ತಟ್ಟಿ ಬೀಳ್ಕೊಟ್ಟಿದ್ದರು.
ಆಕೆ ಮನೆಗೆ ಬಂದಳು. ಹತ್ತು ವರ್ಷಗಳ ಜೊತೆಬಾಳ್ವೆಯಲ್ಲಿ ಮೊದಲಸಲ
ಆಕೆಗೆ ತಾನು ಆತ ಮನೆಗೆ ಹಿಂತಿರುಗುವ ದಾರಿ ಕಾಯುತ್ತಿದ್ದುದು ಗಮನಕ್ಕೆ ಬಂದಿತು. ವಿಧಿವತ್ತಾಗಿ ಲಗ್ನವಾದ ಹೆಂಡತಿ ಮೊದಲ ಸಲ ಬಸುರಿಯಾದಾಗ ಅವಳ ಭಾವನೆಗಳೇನಿರಬಹುದು,ನಾಚ್ಚುತ್ತ ಅವಳು ಸುದ್ದಿ ತಿಳಿಸಿದಾಗ ಅವಳ ಗಂಡನ ಪ್ರತಿಕ್ರಿಯೆ ಹೇಗಿರಬಹುದು, ಮುಂದೆ ಇಬ್ಬರೂ ಸೇರಿ ಹುಟ್ಟಲಿರುವ ಮಗುವಿನ ಬಗೆಗೆ ಏನೇನು ಮಾತಾಡಿಕ್ಕೊಳ್ಳಬಹುದು, ಅಂತ ಕಲ್ಪಿಸಲು ಆಕೆ ವ್ಯರ್ಥ ಹೆಣಗಾಡಿದಳು.ಛಿ, ಇದೇನು ಸೆಂಟಿಮೆಂಟಲ್, ಅಂದುಕೊಂಡು ಎಂದಿನಂತೆ ನಿರ್ಭಾವ ಸ್ಥಿತಿಯಲ್ಲಿರಲು ಪ್ರಯತ್ನಿಸಿದಳು.
ಅಂದು ರಾತ್ರಿ ಆತ ತಡವಾಗಿ ಮನೆಗೆ ಬಂದ. "ದಿಲ್ಲಿಯಿಂದ ಟ್ರಂಕ್ ಕಾಲ್