ಪುಟ:ನಡೆದದ್ದೇ ದಾರಿ.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೩ ನಡೆದದ್ದೇ ದಾರಿ

ನಾನೂ ಮನುಷ್ಯನಲ್ಲವೇ?" "ಹೌದೆ? ಹಾಗಾದರೆ ನನ್ನ ಹತ್ತಿರ ಇರಬೇಡ . ತಿರುಗಿ ದಿಲ್ಲಿಗೇ ವರ್ಗ ಮಾಡಿಸಿಕೋ. ಹೇಗೂ ನಿನ್ನ ತಾಯಿಯ ಕೊನೆಗಾಲದಲ್ಲಿ ಹತ್ತಿರ ಇದ್ದಂತಾಗುತ್ತದೆ. ನನ್ನ ಚಿಂತೆ ನಿನಗೆ ಬೇಡ."

"ಎಷ್ಟು ಸುಲಭವಾಗಿ ಹೇಳುತ್ತೀಯಲ್ಲ! ನನ್ನ ಸಲುವಾಗಿ ನಿನಗೆ ಏನೂ ಅನ್ನಿಸುವುದೇ ಇಲ್ಲವೇ?.....ಹಾಗಿದ್ದರೆ ಸರಿ.ನಿನ್ನ ತಲೆಯಲ್ಲಿ ಹೊಕ್ಕಿರುವ ಈ ಮಗುವಿನ ಹುಚ್ಚು ನನಗೆ ವಿಪರೀತವಾಗಿ ಕಾಣುತ್ತದೆ. ಲಗ್ನವಾಗಿದೆ ತಾಯಿಯಾಗಬೇಕೆನ್ನುವ ನಿನ್ನ ನಿರ್ಧಾರಕ್ಕೆ ಏನನ್ನ ಬೇಕೋ ತಿಳಿಯದು. ನನಗೆ ಮಾತ್ರ ಇದು ಅತಿಯಾಯಿತು. ನಾನೂ ನಿಜವಾಗಿಯೂ ಹೊರಟುಹೋದರೆ ನನ್ನನ್ನು ದೂಷಿಸಬೇಡ." "ಖಂಡಿತ ಇಲ್ಲ" ಆಕೆ ಪ್ರಾಮಾಣಿಕವಾಗಿಯೇ ಹೇಳಿದಳು. ನಿಜ ಹೇಳಬೇಕೆಂದರೆ ಆತನ ನಡತೆಯ ಸರಿ ತಪ್ಪುಗಳ ಬಗ್ಗೆ ವಿಚಾರಿಸುವ ವ್ಯವದಾನವೇ ಆಕೆಗೆ ಉಳಿದಿರಲಿಲ್ಲ. ಆಕೆಯ ಮನಸ್ಸನ್ನೆಲ್ಲಾ ಆವರಿಸಿದ್ದ ವಿಚಾರವೇ ಬೇರೆಯಾಗಿತ್ತು. ಆ ವಿಚಾರದಿಂದ ಆಕೆಗೊಂದು ಬಗೆಯ ಅಮಲೇರಿದಂತಾಯಿತ್ತು.

   ಹಾಗೆ ಆತ ಹೊರತು ಹೋಗಿದ್ದ.   
                                                    * * *

ಆತ ಹೊರಟುಹೋದ ಮೊದಲಲ್ಲಿ ಆಕೆಗೆ ನಿಜವಾಗಿಯೂ ಆತನ ಅನುಪಸ್ಥಿತಿ ಭಾರವೆನಿಸುತ್ತಿತ್ತು. ಊಟ ಮಾಡುವಾಗ, ಆಫೀಸಿಗೆ ಹೊರಡುವಾಗ, ತಿರುಗಾಡಲು ಹೊರಟಾಗ, ಮಲಗುವಾಗಲಂತೂ ಸರಿಯೆ, ತುಂಬ ಬೇಸರವೆನಿಸುತ್ತಿತ್ತು. ಆದರೆ ದಿನಗಳೆದ ಹಾಗೆ ಈ ಎಲ್ಲ ಚಿಲ್ಲರೆ ಚಿಂತೆಗಳನ್ನು ಮರೆಸಿಬಿಡುವಂತಹ ಅಪೂರ್ವ ಅನುಭೂತಿಯೊಂದು ಅವಳಲ್ಲಿ ಉತ್ಪನ್ನವಾಗತೊಡಗಿತು. ಪೂರ್ಣವಾಗಿ ತನ್ನದೇ ಆದ ಜೀವವೊಂದು ಹೊಟ್ಟೆಯಲ್ಲಿ ಮೈದಳೆಯುತ್ತಿರುವಾಗ, ಅದು ಮಿಸುಕಾಡುತ್ತಿರುವಾಗ, ಇದೆಂತಹ ಆಶ್ಚರ್ಯಕಾರಕ ಸಂವೇದನೆ! ಇಷ್ಟು ವರ್ಷ ತಾನು ಒಬ್ಬಳೇ ಇದ್ದೆ; ಹೌದು, ಆತ ಜೊತೆಗೇ ಇದ್ದಾಗಲೂ ತಾನು ಒಬ್ಬಳೇ ಇದ್ದೆ. ಆದರೆ ಈಗ ಹಾಗಲ್ಲ. ತನ್ನೊಂದಿಗೆ ನಿಜವಾದ ಅರ್ಥದಲ್ಲಿ ತನ್ನದೇ ಆದ ಮನುಷ್ಯ ಜೀವವೊಂದಿದೆ. ನಾಳೆ ಅದು ಹುಟ್ಟಿದಾಗ ತನ್ನನ್ನೇ ಪೂರ್ಣವಾಗಿ ಅವಲಂಬಿಸುತ್ತದೆ. ' ಅಮ್ಮಾ , ಅಂತ ನನ್ನನ್ನು ಕರೆಯುತ್ತದೆ. ಓಡಿಬಂದು ಕೊರಳಿಗೆ ನೇತು ಬೀಳುತ್ತದೆ. ನಿಷ್ಕಲ್ಮಷ ಮನಸ್ಸಿನಿಂದ, ಪ್ರತಿಫಲಾಪೇಕ್ಷೆಯಿಲ್ಲದೆ, ಪರಿಪೂರ್ಣ ಸಮರ್ಪಣಾಭಾವದಿಂದ ತನ್ನನ್ನು ಪ್ರೀತಿಸುತ್ತದೆ...ಪ್ರೀತಿಸುತ್ತದೆ!!