ಪುಟ:ನಡೆದದ್ದೇ ದಾರಿ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೪ ನಡೆದದ್ದೇ ದಾರಿ ಈ ಹೊಸ ಸುಧಾರಣಾ ವಿಧಿಯಿಂದ ಸಮಾಜಕ್ಕೆ ಸಾಕಷ್ಟು ಗ್ರಾಂಟು, ಊರಿನ ಗೌರವಾನ್ವಿತ ನಾಗರಿಕರಿಂದ ಸಹಾಯಧನ ಇತ್ಯಾದಿ ಸಿಗಲಾರಂಭಿಸಿತ್ತು. ಆಗ ಒಂದು ಸಲ ಹೀಗೆಯೇ ಮಂತ್ರಿಗಳೊಬ್ಬರು ಬಂದು, ಅಬಲೆಯರ ಉದ್ಧಾರದ ಬಗ್ಗೆ ಸುದೀರ್ಘ ಭಾಷಣ ಮಾಡಿ, ರಾತ್ರಿ ಅಂಬುಜಮ್ಮನ ಮನೆಯ ಸ್ಪೆಶಲ್ ಅಡಿಗೆಯವನಿಂದ ತಯಾರಾಗಿ ಬಂದ ಭರ್ಜರಿ ಚಿಕನ್ ತಿಂದು ಹೆಣ್ಮಾಸ್ತರ್ ಒದಗಿಸಿದ ವಿದೇಶೀ ವೈಸಿ ಸವಿದು, ಗೂಳಿಯಂತೆ ಗುಟುರು ಹಾಕುತ್ತ ಕೋಣೆ ಸೇರಿದ್ದರು. ಅಂದು ಗೆಸ್ಟ್ ರೂಮಿನ ಡ್ಯೂಟಿಗೆ ಹೋಗಿದ್ದ ಹುಡುಗಿ ಮರುದಿನ ಮುಂಜಾನೆ ಸಮಾಜದ ಕಂಪೌಂಡಿನಲ್ಲಿನ ಹಳೆಯ ಬೇವಿನ ಮರಕ್ಕೆ ನೇಣು ಹಾಕಿಕೊಂಡು ತೂಗು ಬಿದ್ದಿದ್ದಳು. ಆ ವಿಕಾರ ದೃಶ್ಯವನ್ನು ಮುಂಜಾನೆ ಎದ್ದೊಡನೆ ಮೊಟ್ಟ ಮೊದಲು ನೋಡಿದ್ದ ಕೋಮಲಾ ಚಿಟ್ಟನೆ ಚೀರಿ ಮೂರ್ಛ ಹೋಗಿದ್ದಳು. ಪೋಲೀಸರು ಬಂದಿದ್ದರು. ಮಂತ್ರಿಗಳನ್ನು ಕಂಡು ಸೆಲ್ಯೂಟ್ ಹೊಡೆದರು. ಮಂತ್ರಿಗಳ ಸಮಕ್ಷಮ ವಿಚಾರಣೆ ನಡೆದು ಆಶ್ರಮದ ಬಡ ಮಾಲಿಯನ್ನು ಆರೆಸ್ಟ್ ಮಾಡಿ ಎಳಕೊಂಡು ಹೋದರು. ಮಾನ್ಯ ಮಂತ್ರಿಗಳು ಅಂಬುಜಮ್ಮನ ಕಾರಿನಲ್ಲಿ ಆರಾಮಾಗಿ ಏರೋಡೈಮಿಗೆ ಹೋದರು. ಮುಂದೆ ಯಾರೂ ಆ ಹುಡುಗಿಯ ಬಗೆಗೆ ಚಕಾರ ಎತ್ತಲಿಲ್ಲ. ಆದರೆ ಯಾಕೊ ಕೋಮಲಾಗೆ ಅದನ್ನು ಮರೆಯುವುದು ಸಾಧ್ಯವಾಗಿರಲಿಲ್ಲ. ಇಂದು 'ಗೆಸ್ಟ್ ರೂಮ್ ಡ್ಯೂಟಿ' ಅಂದೊಡನೆ ಧುತ್ತೆಂದು ಅವಳೆದುರು ಆ ಘಟನೆ ಬಂದು ನಿಂತಿತು. ಅಂತೆಯೇ ಆಕೆ ಕಂಗಾಲಾಗಿದ್ದಳು.

ಸಂಜೆಯ ಸಭೆಗೆ ಮುಖ್ಯ ಅತಿಥಿಗಳಾಗಿ ಬಂದವರು ರಾಜ್ಯ ಸಮಾಜ ಕಲ್ಯಾಣ ಶಾಖೆಯ ಮುಖ್ಯ ಅಧಿಕಾರಿಯೊಬ್ಬರು, ಶುದ್ದ ಖಾದಿಧಾರಿ, ಚೆಲುವಾದ ನಗು ಮುಖ. ವಯಸ್ಸಿನ್ನೂ ಚಿಕ್ಕದು. ಅವರ ಭಾಷಣವಂತೂ ಎಲ್ಲರ ಮನ ತಟ್ಟಿತು. ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮನುವಿನ ಕಾಲದಿಂದಲೂ ಆಗುತ್ತಿರುವ ಅನ್ಯಾಯ, ಸ್ವತಂತ್ರ ಭಾರತದಲ್ಲಿ ಮಹಿಳೆಯರಿಗಿರುವ ವಿಶೇಷ ಸೌಲಭ್ಯಗಳು, ಇವುಗಳ ಲಾಭವನ್ನು ಅವರು ಪಡೆಯಬೇಕಾದ ಬಗೆ, ಅನ್ಯಾಯ-ಅತ್ಯಾಚಾರಗಳನ್ನು ಎದುರಿಸಲು ಬೇಕಾದ ಧೈರ್ಯ, ಕುರಿತು ಅವರು ಉತ್ಸಾಹದಿಂದ ಮಾತಾಡಿದರು. ಹೆಣ್ಣು ಎಂದಿಗೂ ಅನಾಥೆಯಲ್ಲ. ಆಕೆ ಮಾತೆ, ಶಕ್ತಿಸ್ವರೂಪಿಣಿ, ಸ್ಫೂರ್ತಿದಾಯಿನಿ ಅಂದರು. ಕುಸಿದು ಹೋಗುತ್ತಿರುವ ನಮ್ಮ ದೇಶದ ನೈತಿಕ ಬಲ ಮಹಿಳೆಯರಿಂದಲೇ ಉಳಿಯಬೇಕು ಅಂದರು. ರಾಜಾರಾಮಮೋಹನರಾಯ-ಸಾವರಕರ-ಕರ್ವೆಯವರ ಹಾಗೆ ಮಹಿಳಾ ಉದ್ದಾರವನ್ನೇ ತಾನೂ ಜೀವನದ ಗುರಿಯಾಗಿಟ್ಟು ಕೊಂಡಿರುವೆನೆಂದು