ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ/ರಾಧವ್ವ ೨೭೭

ಬಾಯಿಬಿಟ್ಟು ಆಡುವವಳಲ್ಲ, ದೇವರನ್ನು ದೂಷಿಸುವವಳಲ್ಲ. ಯಾರನ್ನೂ ಬೇಡುವವಳಲ್ಲ, ಆ ಬಗೆಯ ಬಾಳಿಗೆ ಎಂದೂ ಬೇಸರಿನುವವಳಲ್ಲ. ನನ್ನ ತಾಯಿಯ ಬಗ್ಗೆ ಆಕೆಗೆ ಅದೆಂತಹದೊ ವಿಶಿಷ್ಟ ವಿಚಿತ್ರ ಭಕ್ತಿ. ಪ್ರತಿಸಲ ನನ್ನ ತಾಯಿ ಹನುಮಾಪುರಕ್ಕೆ ಕಾಲಿಟ್ಟ ಕ್ಷಣದಿಂದ ತಿರುಗಿ ಹೊರಡುವವರೆಗೂ ರಾಧವ್ವ ಆಕೆಯ ಬೆಂಬಿಡದ ಸಂಗಾತಿಯಾಗುತ್ತಿದ್ದಳು. ಮಡಿಯ ಬ್ರಾಹ್ಮಣರು ಊಟಕ್ಕೆ ಕೂಡ್ರುವಾಗ 'ಕೃಷ್ಣಾರ್ಪಣ' ಹೇಳಲು ಮಾತ್ರ ನನ್ನ ತಾಯಿ ಒಬ್ಬರೇ ಉಗ್ರಾಣದೊಳಕ್ಕೆ ಹೊಗುತ್ತಿದ್ದರು. ಉಳಿದ ಸಮಯವೆಲ್ಲಾ ರಾಧವ್ವ ಅವರ ಜತೆಗೇ ಇರುತ್ತಿದ್ದಳು. ನನ್ನ ತಾಯಿ ಅನೇಕ ಸಲ ಹೇಳುತ್ತಿದ್ದ ಹಾಗೆ ಅವರಿಬ್ಬರಿಗೂ ಅದೇನೋ ಪೂರ್ವಜನ್ಮದ ಸಂಬಂಧವೇ ಇದ್ದಿರಬೇಕು. ತೀರ ಚಿಕ್ಕವಳಾಗಿದ್ದ ನನ್ನನ್ನು ಎತ್ತಿಕೊಂಡೆ ರಾಧವ್ವ ನನ್ನ ತಾಯಿಯನ್ನು ಹಿಂಬಾಲಿಸುತ್ತಿದ್ದಳು. ನನ್ನ ತಾಯಿ ಬೀದಿಯಲ್ಲಿ ನಡೆಯುತ್ತಿದ್ದರೆ ಆಕೆ ಮುಂದಾಗಿ ನಡೆದು ದಾರಿಯಲ್ಲಿನ ಸಣ್ಣಪುಟ್ಟ ಕಲ್ಲುಗಳನ್ನು ಎತ್ತಿ ಆಚೆಗೆ ಎಸೆಯುತ್ತಿದ್ದಳು. ಇವರು ಕೂಡ್ರಬೇಕಾದರೆ ನೆಲದ ಧೂಳು ಹೊಡೆದು ಜಮಖಾನೆ ಹಾಸಿ ದಿಂಬು ಇಡುತ್ತಿದ್ದಳು. ಸ್ವಚ್ಚವಾಗಿ ಕೈತೊಳೆದು ಬಂದೇ ಇವರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದಳು. ಮಧ್ಯಾಹ್ನ ಇವರಿಗೆ ಅಲ್ಲೇ ಜೋಂಪು ಹತ್ತಿದರೆ ಬೀಸಣಿಕೆಯಿಂದ ಗಾಳಿ ಬೀಸುತ್ತ ಪಕ್ಕದಲ್ಲೇ ಕೂತಿರುತ್ತಿದ್ದಳು. ಇವರಿರುವಸ್ಟು ದಿನ ತನ್ನ ದಿನನಿತ್ಯದ ಯಾವ ಕೆಲಸವನ್ನು ಮಾಡದೆ,ಮನೆಯ ಕಡೆಗೂ ಹೋಗದೆ,ಇವರೊಂದಿಗೆ ಇದ್ದು ಬಿಡುತ್ತಿದ್ದಳು. ಹೊಲೆಯರಲ್ಲಿ ಅಪರೂಪವಾದ 'ರಾಧವ್ವ' ಅನ್ನುವ ಹೆಸರನ್ನು ಆಕೆಗೆ ಇಡುವಾಗ ಆಕೆಯ ತಾಯಿ-ತಂದೆ ಆ ಬಗ್ಗೆ ಯೊಚಿಸಿದ್ದರೋ ಇಲ್ಲವೋ, ಆದರೆ ರಾಧಾ ಅನ್ನುವ ಹೆಸರೇ ಸೂಚಿಸುವಂತೆ ಆಕೆಯ ವ್ಯಕ್ತಿತ್ವದ ಕಣಕಣವೂ ನಿಷ್ಕಲ್ಮಷ ಪ್ರೇಮಮಯವಾಗಿತ್ತು. ಆಕೆ ಆಗಾಗ ನನ್ನನ್ನು ಎತ್ತಿಕೊಂಡು ತನ್ನ ಹಟ್ಟಿಗೆ ಕರೆದೊಯ್ದು ಕೊಡುವ ನೊರೆ ಹಾಲಿನ ರುಚಿ,ಊರಾಚೆಯ ಆಕೆಯ ಹೊಲದ ಜೋಳದ ಬೆಳಸಿಯ ಸವಿ, ಆಕೆಯ ಮನೆಯ ಒಳಭಾದಿಂದ ಬರುತ್ತಿದ್ದ ಬಳ್ಳೊಳ್ಳಿ-ಕೆಂಪುಮೆಣಸಿನಕಾಯಿ ಚಟ್ನಿಯ ಕಂಪು-ಇವೆಲ್ಲ ಆಗ ನಾನು ಬಹಳ ಪ್ರೀತಿಸುತ್ತಿದ್ದ ವಿಷಯಗಳು. ಹನುಮಾಪುರ ಅಂದರೆ ಹನುಮಂತದೆವರು. ಅಂದರೆ ನೊರೆಹಾಲು-ಕೆನೆಮೊಸರು.ಅಂದರೆ ರಾಧವ್ವ.ಆಂದರೆ ಕೊನೆಮೊದಲಿಲ್ಲದ ತುಂಬಿಹರಿಯುವ ಕೃಷ್ಣೆಯ ಪ್ರವಾಹದಂತಹ ಪ್ರೀತಿ. ಅಂತಲೇ ನನ್ನ ಭಾವನೆಯಾಗಿತ್ತು ಆಗ. ಅಂತೆಯೇ ಪರೀಕ್ಷೆಗಳು ಮುಗಿದು ಬೇಸಿಗೆಯ ರಜ ಬರುತ್ತಲೇ ನಾವೆಲ್ಲ ಹುಡುಗರು ಉತ್ಸಾಹದಿಂದ ತಾಯಿ-ತಂದೆಯೊಂದಿಗೆ ಹನುಮಾಪುರಕ್ಕೆ ಹೊಗುತ್ತಿದ್ದೆವು. 'ನಮ್ಮ ಹಡೆದವ್ವ ಬಂದಳ್ರೆಪೊ' ಅಂತ ಕೂಗಿಕೊಂಡು ಧಾವಿಸಿ ಬರುವ ರಾಧವ್ವನನ್ನು ಕಂಡು