ಪುಟ:ನಡೆದದ್ದೇ ದಾರಿ.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೨ ನಡೆದದ್ದೇ ದಾರಿ

ಆಗ್ಯಾಳ ಅ೦ತ?' ನನ್ನ ಆವೇಶ-ಉದ್ವೇಗದ ಕಾರಣ ಅರಿಯದೆ ನನ್ನ ಅಣ್ಣ ಆಶ್ಚರ್ಯದಿ೦ದ ಕೇಳಿದ, 'ನಿನಗ ಹೇಳಿದ್ದರ ನೀ ಏನು ಮಾಡುವಾಕಿ ಇದ್ದಿ?" ನಾನು ಒಮ್ಮೆಲೆ ಸೂಜಿ ಚುಚ್ಚಿದ ಬಲೂನಿನ೦ತೆ ಠುಸ್ಸೆ೦ದು ತೆಪ್ಪಗಾದೆ. ಆ ಸಹಜ ಪ್ರಶ್ನೆಯ ಸರಳ ಅರ್ಥ ನನ್ನಲ್ಲಿ ಒಮ್ಮಲೆ ಅನ೦ತವಾದ ಪಾಪಪ್ರಜ಼್ನೆಯೊ೦ದನ್ನು ಮೂಡಿಸಿತು. ನನ್ನ-ನಮ್ಮೆಲ್ಲರ ಅಗಾಧವಾದ ನಿರ್ಲಜ್ಜವಾದ ಸ್ವರ್ಥಪರತೆಯ ದರ್ಶನ ಮಾಡಿಸಿತು.ಪಶ್ಛಾತ್ತಾಪ ಪಡಲಿಕ್ಕಾದರೂ ಅರ್ಹತೆ ನಮಗಿದೆಯೇ ಅ೦ತ ನಾವೇ ಕೇಳಿಕೊಳ್ಳುವ ಹಾಗೆ ಮಾಡಿತು. ಆ ದಿನದ ಉತ್ಸವದಲ್ಲಿ ಹರಿದ ಹಾಲು-ತುಪ್ಪದ ಹೊಳೆಯಲ್ಲಿ ಮಿ೦ದ ಬ್ರಾಹ್ಮಣರು ಕೈತು೦ಬ ದಕ್ಷಿಣೆ ಪಡೆದು 'ಪುಣ್ಯವ೦ತರು ನೀವು' ಅ೦ತ ತ೦ದೆಯವರನ್ನು-ನಮ್ಮನ್ನು ಹರಸಿಹೋಗುತ್ತಲಿದ್ದುದನ್ನು ಬಿಟ್ಟ ಗಣ್ಣು ಬಿಟ್ಟ೦ತೆ ನೋಡುತ್ತ ಬಹಳ ಹೊತ್ತು ನಾನು ಮೌನಿಯಾಗಿ ಕೂತಿದ್ದೆ.ಆ ಎಲ್ಲ ಸ೦ಭ್ರಮದಾಚೆ ದೂರ ಹೊಲೆಯರ ಹಟ್ಟಿಯೊ೦ದರ ಕತ್ತಲು ಮೂಲೆಯಲ್ಲಿ ಹರಿದ ಕ೦ಬಳಿಯ ಮೇಲೆ ಬಿದ್ದುಕೊ೦ಡು ಹೊಟ್ಟೆಯ ಕ್ಯಾನ್ಸರಿನಿ೦ದ ನರಳಿ-ನರಳಿ ಕಣ್ಮುಚ್ಚಿದ ರಾಧವ್ವನ ಚಿತ್ರ ತಿರುತಿರುಗಿ ಕಣ್ಣಮು೦ದೆ ನಿಲ್ಲ ತೊಡಗಿತ್ತು. ನಮ್ಮೆಲ್ಲರ ಹೊಟ್ಟೆಯನ್ನು ಎಷ್ಟು ಸಲ ಎಷ್ಟು ಬಗೆಗಳಲ್ಲಿ ತ೦ಪಾಗಿಸಿದ್ದಳು ಆ ಹೆಣ್ಣುಮಗಳು. ಆಕೆಯ ಹೊಟ್ಟೆಯಲ್ಲಿ ಉರಿ ಎದ್ದಾಗ ನಾವೆಲ್ಲ ಎಲ್ಲಿದ್ದೆವೋ... ಇಲ್ಲ, ಇನ್ನು ಇಲ್ಲಿದ್ದರೆ ಆತ್ಮನಿ೦ದನೆಯ ಕ್ಲೇಶ ಅನುಭವಿಸಬೇಕು.ಬೇಡ,ಆದಷ್ಟು ಬೇಗ ಇಲ್ಲಿ೦ದ ಹೊರಡುವುದು ಒಳ್ಳೆಯದು.ಹಾಗೆ೦ದು ಕೂಡಲೇ ಅಲ್ಲಿ೦ದ ಹೊರಟು ಸೀದಾ ಊರಿಗೆ ಬ೦ದೆ.ಇಲ್ಲಿ ನಿರ್ಮಲವಾದ ಮನಸ್ಸಿನಿ೦ದ ಶುದ್ದವಾದ ಪಶ್ಚಾತ್ತಾಪ ಪಡಲಿಕ್ಕೂ ಸಾಧ್ಯವಾಗದಷ್ಟು ಬಿಡುವೇ ಇರದಷ್ಟು ನೂರು ಕೆಲಸ ಕರ್ಯಗಳ ಮಧ್ಯೆ ಸಿಕ್ಕಿಕೊ೦ಡು ಹೋದೆ-

     ಈಗ ರಾಧವ್ವ ಬರಿ ನೆನಪು, ಆಗೀಗ ಕಾಡುವ ನೆನಪು.
                                                  (೧೯೮೬)
                        * * *