ಪುಟ:ನಡೆದದ್ದೇ ದಾರಿ.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಲವೆ ಜೀವನ


     ಕಳೆದ ಕೆಲ ದಿನಗಳಿಂದ ಆತನಿಗೆ ಬಹಳ ಬೇಸರವಾಗಿತ್ತು. ಅದಕ್ಕೆ ಕಾರಣವಿಲ್ಲದಿರಲಿಲ್ಲ. ಆತ ಒಬ್ಬ ನೇರ ನಡೆನುಡಿಯ, ಪ್ರಾಮಾಣಿಕನಾದ, ಕಷ್ಟಸಹಿಷ್ಣುವಾದ ಕೆಲಸಗಾರನೆಂದು ತನ್ನ ಬ್ಯಾಂಕಿನಲ್ಲಿ ಹೆಸರು ಪಡೆದಿದ್ದ. 'ಸತೀಶ ಕುಲಕರ್ಣಿಯ ಕೆಲಸ ಅಂದರೆ ತಿರಿಗಿ ನೋಡುವುದೇ ಬೇಡ' ಅಂತ ಹೆಡ್ ಆಫೀಸಿನವರೆಗೂ ಆತನ ಖ್ಯಾತಿಯಿತ್ತು. ಡಿಗ್ರಿ ಪಡೆದ ನಂತರ ಕ್ಲಾರ್ಕ್ ಎಂದೇ ಆತ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದರೂ, ನಂತರ ಶೀಘ್ರವೇ ಹಲವಾರು ಬ್ಯಾಂಕ್ ಪರೀಕ್ಷೆಗಳನ್ನು ಪಾಸು ಮಾಡಿ ಮನಸ್ಸುಗೊಟ್ಟು ಕೆಲಸ ಮಾಡಿದ್ದರಿಂದ ಆತನಿಗೆ ಪ್ರಮೋಶನ್ ಬರುವುದಿತ್ತು ಇಷ್ಟರಲ್ಲೇ. ಬಂಧು-ಬಳಗ ಯಾರೂ ಇಲ್ಲದ ಆತ ಹಸನ್ಮುಖಿಯಾದ, ತುಂಬು ಜೀವನೋತ್ಸಾಹವುಳ್ಳ, ಆಕರ್ಷಕ ವ್ಯಕ್ತಿತ್ವದ ತರುಣನಾಗಿದ್ದ. ಎಲ್ಲಾ ಸರಿಯಾಗೇ ನಡೆದಿತ್ತು. ಆಗಲೇ ಆತನಿಗೆ ಬೇಸರವಾಗುವಂತಹ ಆ ಘಟನೆ ನಡೆದಿದ್ದು.
       ಆತನ ಬ್ಯಾಂಕಿನಲ್ಲಿ ಸಹೋದ್ಯೋಗಿ ಕ್ಲಾರ್ಕ್ ಒಬ್ಬಳಿದ್ದಳು ಕುಸುಮಾ ಪಾಟೀಲ ಎಂದು. ಅವಳೇನೂ ಡಿಗ್ರಿ ಪಡೆದಿರಲಿಲ್ಲ. ಅವಳ ತಂದೆ ಅದೇ ಬ್ಯಾಂಕಿನ ಉದ್ಯೋಗಿಯಾಗಿದ್ದು ಅಕಾಲಮರಣಕ್ಕೀಡಾಗಿದ್ದರಿಂದ ಅನುಕಂಪದ ಆಧಾರದ ಮೇಲೆ ಅವಳಿಗೆ ಅಲ್ಲಿ ಕ್ಲಾರ್ಕ್ ಕೆಲಸ ಸಿಕ್ಕಿತ್ತು. ತೆಳ್ಳಗಿನ ಶರೀರದ, ಆತ್ಮವಿಶ್ವಾಸದ ಅಭಾವವುಳ್ಳ, ಅನಾಕರ್ಷಕ ಹುಡುಗಿ. ಆಕೆಗೆ ಸತೀಶ ಕುಲಕರ್ಣಿಯ ಮೇಲೆ ವಿಪರೀತ ಮೋಹವುಂಟಾಯಿತು. ಆದರೆ ಸ್ತ್ರೀ ಸಹಜ ಸಂಕೋಚದಿಂದ ಬಾಯಿಬಿಟ್ಟು ಹೇಳಲಾಗದೆ, ಹೇಳದೆ ಇರಲೂ ಆಗದೆ, ಬಹಳ ಒದ್ದಾಡಿ ಕೊನೆಗೊಂದು ದಿನ ಒಂದು ಕಾಗದ ಟೈಪ್ ಮಾಡಿ ಲೆಡ್ಜರುಗಳ ಜೊತೆ ಅವನ ಟೇಬಲ್ ಮೇಲಿರಿಸಿದಳು. "ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ, ಕುಸುಮಾ" -ಎಂದಷ್ಟೆ

ಒಕ್ಕಣೆ. ಸತೀಶ್ ಕುಲಕರ್ಣಿ ಅದನ್ನೋದಿ ಆಕೆಯ ಕಡೆ ನೋಡಿದ. ಬೆವರೊರೆಸಿಕೊಳ್ಳುತ್ತ ತಲೆತಗ್ಗಿಸಿ ಕೂತಿದ್ದಳು. ಪಾಪ ಅನ್ನಿಸಿತು. ಆದರೆ ಆತ ಪ್ರತಿಕ್ರಿಯೆ ತೋರಲಿಲ್ಲ. ಎರಡು ದಿನಗಳ ನಂತರ ಮತ್ತೆ "ನಿಮ್ಮನ್ನು ಬಹಳ-ಬಹಳ ಪ್ರೀತಿಸುತ್ತೇನೆ", ಮತ್ತೆರೆಡು ದಿನಗಳ ನಂತರ "ನಿಮ್ಮನ್ನು ನಾನು ಬಹಳ-ಬಹಳ-ಬಹಳ ಪ್ರೀತಿಸುತ್ತೇನೆ", ಎಂದು ಹೀಗೆ 'ಬಹಳ'ದ ಸಂಖ್ಯೆ