ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಿಡುಗಡೆ / ಒಲವೆ ಜೀವನ ೨೮೭

ಹೋಗೋಣ. " ಮರುಮಾತಾಡದೆ ಸತೀಶ ವ್ಯಾನ್ ಹತ್ತಿ ಆಕೆಯ ಬಲಗಡೆ ಕೂತ.

ಆಕೆಯಿಂದ ಹಿತವಾದ ವಾಸನೆ ಬರುತ್ತಿತ್ತು. ಆಕೆಯ ಬಲಭಾಗದ ಮುಖ, ಕೊರಳು,

ಕೈ, ಸೀರೆ ನೋಡುತ್ತ ಮೌನವಾಗಿ ಪ್ರಶಂಸಿಸುತ್ತ ಆತ ಸುಮ್ಮನೆ ಕೂತ. ಕೆಲ ಸಮಯದ

ನಂತರ ವ್ಯಾನು ಆಕೆಯ ಬ್ಯಾಂಕಿನವರೆಗೆ ಹೋಗಿ ಆಕೆಯ ಸಹೋದ್ಯೋಗಿಯನ್ನಿಳಿಸಿ

ಆಕೆಯ ಮನೆಯವರೆಗೂ ಹೋಗಿ ನಿಂತಾಗ ಆಕೆ ನಕ್ಕು ಸತೀಶನ ಕಡೆ ನೋಡಿ, "ಇದೇ

ನಮ್ಮ ಮನೆ. ಇಳೀರಿ." ಅಂದಳು. ಬೇರಾವುದೋ ಲೋಕದಲ್ಲಿದ್ದಂತಿದ್ದ ಸತೀಶ

ಭ್ರಮಾಧೀನನಾಗಿದ್ದಂತೆಯೇ ಕೆಳಗಿಳಿದ. ಆಕೆ ಆಚೆಬದಿಯಿಂದ ಆಗಲೇ ಕೆಳಗಿಳಿದು

ಅವನತ್ತ ನೋಡುತ್ತಾ ನಗುತ್ತ ನಿಂತಿದ್ದಳು. ಇಬ್ಬರ ನಡುವೆ ಇದ್ದ ವ್ಯಾನು

ಕ್ಷಣಾರ್ಧದಲ್ಲಿ ಧೂಳು ಹಾರಿಸುತ್ತಾ ಮರೆಯಾಯಿತು. ದೊಡ್ಡ ಬೇಲಿಯುಳ್ಳ

ಹಲವಾರು ತೆಂಗಿನ ಮರಗಳುಳ್ಳ, ಸುಂದರವಾದ ತೋಟದ ಮಧ್ಯೆ ಇದ್ದ ಹಂಚಿನ

ಮನೆ. ಸುಮಾರು ಅರ್ಧ ಫರ್ಲಾಂಗಿನಾಚೆ ನದಿ. ಸುತ್ತೆಲ್ಲ ತೋಟದ ಮನೆಗಳು. ಕೆಂಪು

ಮಣ್ಣಿನ ರಸ್ತೆ. ರಸ್ತೆಗುಂಟ ಎತ್ತರದ ಗಿಡಗಳು. ಶಾಂತ-ಸುಂದರ ವಾತಾವರಣ.

ನಿಂತಲ್ಲಿಂದಲೇ "ಹೇಗಿದೆ?" ಅಂತ ಆಕೆ ಕೇಳಿದಾಗ "ಬಹಳ ಸುಂದರವಾಗಿದೆ"

ಎಂದುತ್ತರಿಸಿದ ಸತೀಶ ಆಕೆಗೆ ಎದುರಾಗಿ ಬಂದವನು ಒಮ್ಮೆಲೇ ಚೇಳು

ಕುಟುಕಿದಂತಾಗಿ ನಿಂತಲ್ಲೇ ನಿಂತುಬಿಟ್ಟ. ಆತ ನೋಡುತ್ತಿರುವುದೇನು?

ಕಟ್ಟುಮಸ್ತಾಗಿದ್ದ ಗಂಭೀರ ಗಮನೆಯಾದ ಹೊಳೆವ ಕಣ್ಣುಗಳ ಆ ಹುಡುಗಿಗೆ ಎಡಗೈ

ಇರಲ್ಲಿಲ್ಲ. ಮೊಳಕೈಯಿಂದ ಕೆಳಗೆ ಪೂರ್ತಿ ಇರಲೇ ಇಲ್ಲ. ಯಾವಾಗಲೂ

ಸೆರಗಿನೊಳಗಡೆ ಮರೆಯಾಗುತ್ತಿದ್ದ ಆ ಊನವನ್ನು ಆತ ಎಂದೂ ಗಮನಿಸಿರಲೇ

ಇಲ್ಲ.

ಬಳಕುತ್ತ ಮುನ್ನಡೆದ ಆಕೆ ಗೇಟು ತೆರೆದು "ಬರ್ರಿ ಸತೀಶ" ಅಂತ

ಆಹ್ವಾನಿಸಿದಾಗಲೇ ಆತನಿಗೆ ಎಚ್ಚರವಾದದ್ದು. ಒಂದು ಭ್ರಮೆಯಿಂದ ಹೊರಬಂದು

ಮತ್ತೊಂದು ಭ್ರಮೆಯಲ್ಲಿ ಸಿಕ್ಕಿಕೊಂಡ ಹಾಗೆ ಚಡಪಡಿಸುತ್ತ ಆತ ಆಕೆಯನ್ನು

ಹಿಂಬಾಲಿಸಿದ. ಆಕೆಯ ಪ್ರೀತಿಯ ಜೂಲುನಾಯಿ, ಏಕಾಂಗಿಯಾಗಿ ಆಕೆಯ ದಾರಿ

ಕಾಯುತ್ತ ನಿಂತಿದ್ದ ವೃದ್ಧ ತಂದೆ, ಅಡಿಗೆಯ ಮುದುಕಿ, ತೋಟದ ಹಣ್ಣುಗಳು, ಚಹಾ-

ತಿಂಡಿ -ಇವೆಲ್ಲಾ ಯಾವುದೋ ಕನಸಿನ ಲೋಕದಲ್ಲಿ ಕಂಡ ವಿಚಿತ್ರಗಳಾಗಿ ತೋರಿ

ಸತೀಶ ತುಂಬ ಮಾನಸಿಕ ಅಸ್ವಸ್ಥತೆಯನ್ನನುಭವಿಸಿದ. "ನೀವು ಬಂದದ್ದು ಬಹಳ

ಸಂತೋಷ. ನಮ್ಮ ಶೋಭಾ ತಾಯಿಯಲ್ಲದೇ ಒಡಹುಟ್ಟಿದವರಿಲ್ಲದೇ ಬೆಳೆದ

ಹುಡುಗಿ. ಅವಳಿಗೆ ಗೆಳತಿಯರೂ ಯಾರೂ ಇಲ್ಲ. ಇತ್ತೀಚೆ ನಿಮ್ಮ ಬಗ್ಗೆ ಹೇಳಿದ್ದಳು.

ನೀವು ಆಗಾಗ ಬರುತ್ತ ಇರ್ರಿ" -ಅಂದರು ಆಕೆಯ ತಂದೆ.

"ಹ್ಞೂ" ಅಂದ ಸತೀಶ ಯಾಂತ್ರಿಕವಾಗಿ. ಆದರೆ ಇನ್ನೆಂದೂ ಈ ಕಡೆ ತಲೆ