ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಬಿಡುಗಡೆ / ಒಲವೆ ಜೀವನ
೨೯೧

ಪ್ರಕರಣಕ್ಕೆ ತೆರೆ ಎಳೆದುಬಿಡೋಣ ಎಂದಾತ ನಿರ್ಧರಿಸಿಬಿಟ್ಟ. ನಂತರವೇ
ಕುದಿಯುತ್ತಲಿದ್ದ ಆತನ ಒಳಮನಸ್ಸು ಹತೋಟಿಗೆ ಬಂದದ್ದು. ಆ ನಿರ್ಧಾರದ ನಂತರ
ಶನಿವಾರದ ವರೆಗಿನ ದಿನಗಳನ್ನು ಆತ ಒಂದು ಬಗೆಯ ಶೂನ್ಯ ಮನಸ್ಥಿತಿಯಲ್ಲಿ ಕಳೆದ.

* * *


ಶನಿವಾರ ಮಧ್ಯಾಹ್ನ ಎಂದಿಗಿಂತ ತುಸು ಮುಂಚೆಯೇ ಸತೀಶ ಶೋಭಾಳ
ತೋಟದ ಮನೆಗೆ ಹೋದಾಗ ಮನೆಯಲ್ಲಿ ಯಾರೂ ಇರಲಿಲ್ಲ.ಆಕೆಯ ತಂದೆ ಪೇಟೆಗೆ
ಹೋಗಿದ್ದಿರಬಹುದು. ಶೋಭಾ ತೋಟದಲ್ಲಿ ಏನೋ ಕೆಲಸ
ಮಾಡುತ್ತಿದ್ದಿರಬಹುದು. ಆಕೆಯನ್ನು ಕಂಡು ತನ್ನ ನಿರ್ಧಾರ ತಿಳಿಸಿಬಿಟ್ಟು ಬೇಗನೇ
ತಿರುಗಿಹೋಗಿ ಬಿಡೋಣವೆಂದುಕೊಂಡು ಆತ ತೋಟದ ಕಡೆ ನಡೆದ.
ಗಿಡಗಳಿಗೆ ನೀರುಣಿಸಿ ಬರುತ್ತಿದ್ದಳೆಂದು ಕಂಡಿತು- ಶೋಭಾಳ ಸೀರೆ
ಒದ್ದೆಯಾಗಿತ್ತು. ಕೂದಲು ಕೆದರಿತ್ತು. ಕೈಗೆ ಮಣ್ಣು ಅಂಟಿತ್ತು. ಆತನನ್ನು ಕಂಡೊಡನೆ
ಅವಳ ಕಣ್ಣುಗಳು ಹೊಳೆದವು : "ಸತೀಶ, ಯಾವಾಗ ಬಂದಿರಿ ? ಇದೇನು ಈ ದಿನ
ಬೇಗನೆ ಬಂದಿರಲ್ಲ ?"
"ಹೌದು", ಆತ ದೃಢವಾಗಿ ಅಂದ, "ಈ ದಿನ ನಾನು ಬೇಗನೆ ತಿರುಗಿ{
ಹೋಗಬೇಕು, ಈಗಲೇ."
"ಅಂದರೆ ? ಈಗಲೇ ಅಂದರೆ ?" -ಆಕೆಯ ಕಣ್ಣುಗಳ ಬೆಳಕಿನಲ್ಲಿ ಒಮ್ಮೆಲೆ
ನೋವಿನ ಸೆಳಕು ಮಿಂಚಿತು.
"ಈಗಲೇ ಅಂದರೆ ಈಗಲೇ. ನಾನು ಹೋಗುತ್ತಿದ್ದೇನೆ. ಮತ್ತೆ ಇಲ್ಲಿಗೆ
ಬರುವುದಿಲ್ಲ."
"ಅಂದರೆ ? ನಿಮ್ಮ ಉತ್ತರ 'ಇಲ್ಲ, ಆಗುವುದಿಲ್ಲ' ಎಂದೆ ?" ಗಾಯಗೊಂಡ
ಹರಿಣಿಯ ಹಾಗೆ ಕಂಡಳು ಶೋಭಾ.
"ಇಲ್ಲ, ಆಗುವುದಿಲ್ಲ " ಅಂದ ಸತೀಶ.
"ನೀವು ಹಾಗೆ ಹೇಳಲು ಕಾರಣವೇನೆಂದು ಊಹಿಸಬಲ್ಲೆ. ಆದರೂ ಸತೀಶ-"
ಆಕೆಯನ್ನು ಮಧ್ಯದಲ್ಲೇ ತಡೆದ ಆತ, "ಇಲ್ಲ, ಆಗುವುದಿಲ್ಲ. ಈ ಬಗ್ಗೆ ಚರ್ಚೆ
ಬೇಡ." ಅಷ್ಟಂದು ಮುಂದಿನ ದೃಶ್ಯವನ್ನು ಎದುರಿಸುವ ಮನಸ್ಸಿಲ್ಲದೆ ಆತ ನೇರವಾಗಿ
ಗೇಟಿನ ಕಡೆ ನಡೆದ. ಎರಡು ಕ್ಷಣಗಳ ನಂತರ ಹಿಂದಿನಿಂದ ಆಕೆಯ ನೋವು ತುಂಬಿದ
ಧ್ವನಿ ಆತನಿಗೆ ಕೇಳಿಸಿತು: "ನೀನು ಹಾಗೆ ಹೇಳಲು ಕಾರಣವೇನೆಂದು ನನಗೆ ಗೊತ್ತು.
ಆದರೆ ನೀನು ಯಾಕೆ ಮೇಲಿಂದ ಮೇಲೆ ಇಲ್ಲಿಗೆ ಬಂದೆ ? ನನ್ನ ಬಗ್ಗೆ ನಿನಗೆ ಏನೂ
ಅನ್ನಿಸದಿದ್ದರೆ ಯಾಕೆ ಬರುತ್ತಲೇ ಇದ್ದೆ ? ಯಾಕೆ ?... ಯಾಕೆ..."