ಪುಟ:ನಡೆದದ್ದೇ ದಾರಿ.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಿಡುಗಡೆ/ತಾರಾ ಮ್ಯಾಡಮ್ ಮತ್ತು ತತ್ವಗಳು

೨೯೫

ಕಾರ್ಯರೂಪಕ್ಕೆ ಬಂದಾವು ಅನಸ್ತದ. ನಿಮ್ಮ ಗಾಯಡನ್ಸ್ ದೊಳಗ ನನ್ನ ತತ್ವನಿಷ್ಠ
ಸರ್ವ್ಹಿಸ್ ಗೆ ರೆಕಗ್ನಿಷನ್ ಸಿಕ್ಕು ನಾನು ಇನ್ನೂ ಹೆಚ್ಚು ಕೆಲಸಾ ಮಾಡಬಹುದು, ನಮ್ಮ
ಸೆಕ್ಶನ್ನು ಇಡೀ ರಾಜ್ಯದೊಳಗೇ ಅತ್ಯುತ್ತಮ ಸೆಕ್ಶನ್ ಅಂತ ಮನ್ನಣೆ ಪಡೀಬಹುದು,
ಅನಸ್ತದ" -ಅಷ್ಟಂದು ದಣಿವಾರಿಸಿಕೊಳ್ಳಲೆಂಬಂತೆ ಆಕೆ ಸುಮ್ಮನಾದಳು.
ಆತ ಆಶ್ವಾಸನೆಯ ದನಿಯಲ್ಲಿ ಎರಡು ಮಾತು ಹೇಳಿದರು, "ಇಲ್ಲಿಯ ಆಡಳಿತ
ಹದಗೆಟ್ಟು ಹೋಗಿದ್ದು ಅದನ್ನ ಸರಿಪಡಿಸಲಿಕ್ಕೆ ಅಂತಲೇ ಮೇಲಧಿಕಾರಿಗಳು ನನ್ನನ್ನು
ಇಲ್ಲಿ ಕಳಿಸಿದ್ದು. ಇದು ಸಮಾಜ ಕಲ್ಯಾಣ ಇಲಾಖೆ. ಮಹಿಳೆಯರಿಗೆ-ಮಕ್ಕಳಿಗೆ
ಸಂಬಂಧಿಸಿದ ಹಾಗೆ ಅನೇಕ ಯೋಜನೆಗಳನ್ನು ನಾವು ಯಶಸ್ವಿಯಾಗಿ ಪೂರೈಸಬೇಕು.
ನಿಮಗೆ ಈ ಲೈನಿನೊಳಗೆ ಅನುಭವ ಇದೆ. ತತ್ವಗಳ ಬಗ್ಗೆ ನೀವು ಹೇಳಿದ್ದು ನನಗೆ
ಮೆಚ್ಚಿಕೆಯಾಗಿದೆ. ನಾನು ನಿಮಗೆ ಪೂರಾ ಸ್ವಾತಂತ್ರ್ಯ ಕೊಡುವೆ. ಸಿನ್ಸಿಯರ್ಲೀ ಕೆಲಸ
ಮಾಡ್ರಿ. ಪ್ರಗತಿ ಸಾಧಿಸಿ ತೋರಿಸಿರಿ. ಎಲ್ಲಾ ಸಹಾಯ ನೀಡುವೆ. ನಿಮ್ಮಂಥ ತತ್ವನಿಷ್ಠ
ಮಹಿಳೆಯರೇ ಈ ಇಲಾಖೆಗೆ ಬೇಕು. ಕೆಟ್ಟು ಹೋದದ್ದನ್ನು ಸರಿಪಡಿಸಲು ಏನೇನು
ಬೇಕೋ ಎಲ್ಲ ಮಾಡ್ರಿ. ನಿಮ್ಮ ಹಿಂದೆ ನಾನಿದ್ದೇನೆ."
"ಥ್ಯಾಂಕ್ಯೂ ಸರ್, ಥ್ಯಾಂಕ್ಯೂ" -ತಾರಾಳ ದನಿಯಲ್ಲಿ ಕೃತಜ್ಞತೆಯ
ಭಾವವಿತ್ತು.
ಬಾಸ್‍ನ ಚೇಂಬರಿನಿಂದ ಅರ್ಧ ಗಂಟೆಯ ನಂತರ ಹೊರಬಿದ್ದಾಗ ಆಕೆ ಇನ್ನೂ
ಐದು ವರ್ಷ ಚಿಕ್ಕವಳಾದಂತೆ ಬಳುಕುತ್ತ ನಡೆಯತೊಡಗಿದಳು. ಬಾಸ್‍ನ
ಬೆಂಬಲವಿರುವಾಗ ಇನ್ಯಾರ ಹೆದರಿಕೆ? ತನ್ನ ತತ್ವನಿಷ್ಠೆ ಕಾರ್ಯಾಚರಣೆಯನ್ನು
ಪ್ರಾರಂಭಿಸಿಯೇ ಬಿಡೋಣವೆಂದುಕೊಳ್ಳುತ್ತ ಹುರುಪಿನಿಂದ ಆಕೆ ದೃಢ ಹೆಜ್ಜೆ
ಹಾಕಿದಳು. ಮೂಲೆಯ ಟೇಬಲಿನಿಂದ ಬಂದ 'ಅಂತೂ ತಾರಾ ಮ್ಯಾಡಮ್ ಹೊಸ
ಮಿಕವನ್ನ ಬಲೆಗೆ ಹಾಕ್ಕೊಂಡ್ಹಾಂಗ ಕಾಣಸ್ತದ'ಎಂಬ ಪಿಸುಧ್ವನಿ ಆ ಹುಮ್ಮಸ್ಸಿನಲ್ಲಿ
ಆಕೆಗೆ ಕೇಳಿಸಲೇ ಇಲ್ಲ.

ನಂತರದ ದಿನಗಳಲ್ಲಿ ಆ ಆಫೀಸಿನಲ್ಲಿ ಪ್ರತಿದಿನ ಒಂದು ವ್ಯವಸ್ಥಿತ
ಕಾರ್ಯಕ್ರಮ ನಿಯಮಿತವಾಗಿ ನಡೆಯತೊಡಗಿತು. ಅದೇನೆಂದರೆ ಆಫೀಸು
ಸುರುವಾಗುವ ಅರ್ಧ ಗಂಟೆ ಮೊದಲೇ ತಾರಾ ಮ್ಯಾಡಮ್ ನಿರ್ದೇಶಕರ ಚೇಂಬರು
ಸೇರುತ್ತಿದ್ದಳು. ಸುಮಾರು ಒಂದು ತಾಸಿನ ನಂತರ ಆಕೆ ಅಲ್ಲಿಂದ ಹೊರಬಿದ್ದು ತನ್ನ
ಚೇಂಬರಿಗೆ ಹೋದ ಕೆಲವೇ ನಿಮಿಷಗಳಲ್ಲಿ ಯಾರಾದರೊಬ್ಬರಿಗೆ, ವಿಶೇಷವಾಗಿ
ಹೆಣ್ಣುಮಕ್ಕಳಿಗೇ, ನಿರ್ದೇಶಕರಿಂದ ಬುಲಾವ್ ಬರುತ್ತಿತ್ತು. ಮುಂದೆ ಅರ್ಧ