ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪
ನಡೆದದ್ದೇ ದಾರಿ

ಬಿಟ್ಟೀ ಅಂತ ಕಾಣಸ್ತದ. ಬರೇ ತಿರಗೂದs ಬೇಕಾಗಿತ್ತಂದ್ರ ಕಾಲೇಜ ಬಿಟ್ಟಬಿಡು.
ನಿಮ್ಮಪ್ಪನ ರೊಕ್ಕಾ ಯಾಕ ಸುಮ್ನ ಹಾಳ ಮಾಡತೀ ?"
ಸರೋಜಿನಿಯ ಮುಖದ ಕೆಂಪು ಕ್ರಮೇಣ ಬೆಳ್ಳಗಾಗತೊಡಗಿದೆ. ತನಗೇಕೆ
ಅದರಿಂದ ಹುರುಪು ಏರುತ್ತಿದೆಯೋ !
"ಆ ನಿನ್ನ ಗೆಳೆಯಾಗೇನ ಉದ್ಯೋಗಿಲ್ಲೇನು ? ಬರೇ ನಿನ್ನ ಜೋಡಿ
ಅಡ್ಡಾಡಿದರ ಪರೀಕ್ಷಾ ಹ್ಯಾಂಗ ಪಾಸಾಗತಾನಂತ ? ನಾಳೆ ಅವ್ಞೇನು ಬೂಟ್ ಪಾಲಿಶ್
ಮಾಡಿ ಹೊಟ್ಟೀ ತುಂಬಿಕೋತಾನಂತೇನು ?"
ಸರೋಜಿನಿಯ ಕಣ್ಣು ತುಂಬಿ ಬರತೊಡಗಿವೆ. ಇವಳು ಅತ್ತಾದರೂ ಅಳಲಿ.
ಅಂದರೆ ಸಾಯಂಕಾಲದಿಂದಲೂ ವಿಪರೀತವಾದ ಎದೆನೋವು ಸ್ವಲ್ಪವಾದರೂ
ಕಡಿಮೆಯಾದೀತು. ರಾತ್ರಿ ಸುಖನಿದ್ರೆ ಬಂದೀತು.
"ಹೋಗ್ಹೋಗು, ಅಭ್ಯಾಸ ಮಾಡು. ನಿನ್ನಂಥಾ ಒಂದಿಬ್ರು ಹುಡಿಗ್ಯಾರು ಕೂಡಿ
ಹಾಸ್ಟೆಲಿನ ಹೆಸರು ಕೆಡಿಸಿಡ್ತೀರಿ."
ಓಡುತ್ತಲೇ ಹೋದಳು ಆಕೆ. ಹಿಂದಿನಿಂದ ಆಕೆಯ ಬಳುಕುವ ದೇಹ, ಆ ಸಣ್ಣ
ನಡು-ನೋಡಿದಾಗ ಮತ್ತೆ ಸಿಟ್ಟು ಬರುತ್ತಿದೆ ತನಗೆ.
ಬರಬರುತ್ತ ತಾನು ದಪ್ಪಗಾಗುತ್ತಿದ್ದೇನೆ. ಎಷ್ಟು ಊಟ ಕಡಿಮೆ
ಮಾಡಿದರೂ, ಹಾಲು ಕುಡಿಯುವುದು ಬಿಟ್ಟರೂ ಇತ್ತೀಚೆ ಯಾಕೋ ಮೈ
ಸ್ಥೂಲವಾಗತೊಡಗಿದೆ. ಮೊನ್ನೆ ಕಾಲೇಜಿನಲ್ಲಿ ಕ್ಯಾಂಟೀನಿನ ಹತ್ತಿರ ನಿಂತಿದ್ದ ಒಬ್ಬ
ಹುಡುಗ ತಾನಲ್ಲಿ ಹಾಯ್ದು ಬರುವಾಗ ಪಿಸುಧ್ವನಿಯಲ್ಲಿ 'ಟುನ್ ಟುನ್' ಎಂದದ್ದು
ತನಗೆ ಕೇಳಿಸದಂತೆ ನಟಿಸಿದರೂ ಕೇಳಿಸಿದ್ದು ಸುಳ್ಳೆ ? ಹುಡುಗರ ಮಾತಿಗೆ ಲಕ್ಷ
ಕೊಡಬಾರದು ನಿಜ. ಆದರೂ ಇನ್ನು ತೂಕ ಕಡಿಮೆ ಮಾಡಿಕೊಳ್ಳಲು ಸೀರಿಯಸ್ಸಾಗಿ
ಪ್ರಯತ್ನ ಮಾಡಬೇಕು. ಈ ಸರೋಜಿನಿಯ ಸಣ್ಣ ನಡು ನೆನಪಾದರೆ ಈಗ ಮತ್ತೆ
ವಿನಾಕಾರಣ ಸಿಟ್ಟು ಬರುತ್ತದೆ. ಅವಳು ಹಾಳಾಗಿ ಹೋಗಲಿ ; ತಾನದನ್ನು
ಮರೆಯಬೇಕು. ಅವಳ ನಡುವನ್ನು, ಆ ಕೆಂಪುಗುಲಾಬಿಯನ್ನು, ಅವಳ ಎತ್ತರ
(ಹ್ಯಾಂಡ್ ಸಮ್ ?) ಗೆಳೆಯನನ್ನು, ಆತ ಬರೆಯುವ ಪ್ರೇಮಪತ್ರಗಳನ್ನು ಈಗ
ಮರೆಯಲೇಬೇಕು. ಇಲ್ಲವಾದರೆ ನಾಳೆ ಆ ಸ್ಕೂಲಿಗೆ ಅತಿಥಿಯಾಗಿ ಹೋಗಿ
ಮಾಡಲಿರುವ ಭಾಷಣದ ಬಗ್ಗೆ ವಿಚಾರಗಳೇ ಬರುವುದಿಲ್ಲ.
ನಾಳೆ ಹುಡುಗಿಯರ ಹೈಸ್ಕೂಲಿನ ವಾರ್ಷಿಕ ಸ್ನೇಹಸಮ್ಮೇಳನದ ಅತಿಥಿ ತಾನು ;
ನಾಡದು ಮಹಿಳಾಮಂಡಳದಲ್ಲಿನ ಸಂಗೀತ ಕಾರ್ಯಕ್ರಮದ ಸನ್ಮಾನ್ಯ ಅತಿಥಿ.
ಏನೆಂದು ಭಾಷಣ ಮಾಡುವುದು ನಾಳೆ ? ಹುಡುಗಿಯರ, ಅಂದರೆ ಸ್ತ್ರೀಯರ