________________
ಬಿಡುಗಡೆ ಮರೀಚಿಕೆ ೩೧೧ ಮತ್ತೆ ಏಳುವುದು, ಮತ್ತೆ ಛೇ, ಇದೇ ಜೀವನವೇ ? ಮೊನ್ನೆ ಓದಿದ ಒಂದು ಫ್ರೆಂಚ್ ಕತೆ : ಪ್ಯಾರಿಸಿನಲ್ಲಿಯ ಚರ್ಚೆಂದರಲ್ಲಿ ಆಕಸ್ಮಾತ್ ಭೆಟ್ಟಿಯಾಗುತ್ತಾರೆ ಒಬ್ಬ ಐರಿಶ್ ಹೆಂಗಸು, ಒಬ್ಬ ಫ್ರೆಂಚ್ ಯುವಕ. ಚರ್ಚ್‌ನಲ್ಲಿ ಒಟ್ಟಾಗಿ ಪ್ರಾರನೆ ಸಲ್ಲಿಸಿದ ನಂತರ ಹೊರಬಂದು ಇಬ್ಬರೂ ಹೋಟೆಲ್‌ಗೆ ಹೋಗುತ್ತಾರೆ ; ಅಲ್ಲಿಂದ ಮುಂದೆ ಒಂದು ಸಿನಿಮಾಕ್ಕೆ ; ಸಂಜೆ ಒಂದು ಸಭೆಗೆ ; ರಾತ್ರಿ ಒಂದು ರೆಸ್ಟ್ ಹೌಸಿಗೆ. ಸರಿ, ಮುಂಜಾನೆ ಅವಳು ಪ್ಲೇನ್ ಹತ್ತಿ ತಿರುಗಿ ತನ್ನ ದೇಶಕ್ಕೆ ಹೋಗುತ್ತಾಳೆ. ಅವಳಿಗೆ ಬಾಯ್ ಬಾಯ್ ಹೇಳಿ ಆತ ತನ್ನ ಆಫೀಸಿಗೆ ಹೋಗುತ್ತಾನೆ. ಇಬ್ಬರಿಗೂ ಜೀವನ ಹೆಚ್ಚು ಸುಂದರವಾದಂತೆ ಅನಿಸುತ್ತದೆ. ಕತೆ ಮುಗಿಯಿತು. - ಎಷ್ಟೋ ಸಲ ಮಧ್ಯಾಹ್ನ ಒಬ್ಬಳೇ ಮಲಗಿಕೊಂಡು ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದಾಗ ತನಗೆ ಅನಿಸುವುದು - ಒಮ್ಮೆ ಹೋಗಬೇಕು ರೆಕ್ಕೆ ಬಿಚ್ಚಿಕೊಂಡು, ಈ ಎಲ್ಲ ಗೋಡೆ ದಾಟಿ ಆಚೆ ಕಡೆ ಏನಿದೆಯೆಂದು ನೋಡಬೇಕು. ಒಂದು ಸಲವಾದರೂ ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ ಅಂತ ವಿಚಾರಿಸದೆ ಮನಸ್ಸಿಗೆ ಬಂದದ್ದು ಮಾಡಬೇಕು. ಸಿಕ್ಕಿತು ತನಗೂ ಒಂದು ಫೇರೀಲ್ಯಾಂಡ್, ಆದೀತು ಕುದುರೆಯೊಂದಿಗಿನ ರಾಜಕುಮಾರನ ಭಟ್ಟಿ – ಆದರೆ ಛ, ಇದರರ್ಥ ಬೇರೆಯೇ ಆಗುತ್ತದೆ ; ಹೀಗಲ್ಲ ತನಗನಿಸುವುದು, ಖಂಡಿತ ಹೀಗಲ್ಲ. ತನಗನಿಸುವುದು ಒಟ್ಟು ಹೀಗೆ : ಏನಾದರೂ ಇಲ್ಲಿಯ ತನಕ ಆಗದೇ ಇದ್ದದ್ದು ಆಗಬೇಕು- ಈ ಎಲ್ಲ ಬೇಸರ ಹೋಗಿಸಿಬಿಡುವಂಥಾದ್ದು ಏನಾದರೂ... ಬಹಳ ಸಲ ವಿಚಾರ ಮಾಡಿದ್ದಳು ಆ ಕತೆ ಓದಿದ ನಂತರ, ರಾತ್ರಿ ಕೊನೆಗೆ ಅವರು ರೆಸ್ಟ್ ಹೌಸಿಗೆ ಹೋಗದೇ ಹಾಗೇ ಒಬ್ಬರನ್ನೊಬ್ಬರು ಬೀಳ್ಕೊಂಡಿದ್ದರೂ ಜೀವನ ಹೆಚ್ಚು ಸುಂದರ ಅನಿಸುತ್ತಿತ್ತೇ ಆವರಿಗೆ ? - ಬಹಳ ಹೊತ್ತಿನ ನಂತರ ಆಕೆ ನಿರ್ಧಾರ ಮಾಡಿದ್ದಳು- ಹೌದು, ಖಂಡಿತ ಅನಿಸುತ್ತಿತ್ತು. - ಹೀಗೆ ಜೀವನ ಸುಂದರವಾಗುವ ಅವಕಾಶ ಹುಡುಕಿಕೊಂಡೇ ತಾನು ಮೂರು ದಿನಗಳ ಹಿಂದೆ ಪುಣೆ ಬಿಟ್ಟದ್ದು. ಈಗ ವಿಚಾರ ಮಾಡಿ ನೋಡಿದರೆ ಮೂರ್ಖತನ ಅನಿಸುತ್ತದೆ. ಇಂಥ ಅವಕಾಶಗಳೇನು ಕೊಲ್ಲಾಪುರದ ಅಕ್ಕನ ಮನೆಯಲ್ಲಿ ಬಿದ್ದಿರುತ್ತವೆಯೆ ? ತಾನು ತಪ್ಪು ಮಾಡಿದೆ, ಇಲ್ಲಿಗೆ ಬಂದು, ದೂರ ಹೀಗೇ ಎಲ್ಲಾದರೂ ಹೋಗಬೇಕಿತ್ತು, ದೂರ- ಈ ಹಾಲಿನ ಭಾಂಡಿಯ ಹಾಗೂ ಅದರ ಮುಚ್ಚಳದ ಜಗತ್ತಿನಿಂದ ದೂರ...