ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬಿಡುಗಡೆ/ಮರೀಚಿಕೆ ೩೧೫
ತಲೆಯೊರಗಿಸಿ ನಿದ್ರಿಸಿ ಬಿಟ್ಟಿದ್ದೇನೆ- ಅಂತ. ಎರಡು ತಾಸೋ ನಾಲ್ಕು ತಾಸೋ. ತಟ್ಟನೆ ಫ್ರೆಂಚ್ ಕತೆ ನೆನಪಾಯಿತು. ತನ್ನ ಕತೆ ಅದಕ್ಕಿಂತ ಸುಂದರವಾಗಿ ಸಾಗಿದೆ ಅನ್ನಿಸಿತು. "ಮಿನಿ, ಏಳ್ತೀರೇನು? ಪುಣೆ ಬಂತು." -ಆತ ಕಲ್ಲುಗೊಮ್ಮಟನ ಹಾಗೆ ಆಲುಗಾಡದೆ ಕುಳಿತೇ ಮಾತನಾಡಿದ. ಆಕೆ ಹಗುರಾಗಿ ಎದ್ದು ಬೆಚ್ಚಿ ಬಿದ್ದ ಹಾಗೆ ಅಂದಳು: "Oh sorry, ನಿಮಗೆಷ್ಟು ತ್ರಾಸ ಕೊಟ್ನೆಲ್ಲ, ನೀವು ಮೊದಲs ಎಬ್ಬಿಸಬಾರದ್ದಾಗಿತ್ತs?" "ನನಗೇನೂ ತ್ರಾಸಾಗಿಲ್ಲ. ಅಂದರೆ ನಾ ಒರಟು ಮನುಷ್ಯ- ನಿಮ್ಮ ಕುತ್ತಿಗೆ ನೋವಾಗಿರಬಹುದು-" -ಊಹ್ಙೂ, indecent ಅನ್ನುವಂಥದರ ನೆರಳೂ ಇರಲಿಲ್ಲ, ಆತನ ಮಾತಿನಲ್ಲಿ... ಎಷ್ಟು ದಿನದಿಂದ ಕಾಯುತ್ತಿದ್ದೆ ತಾನು ಇಂಥ ಒಂದು ಹಿಂದು-ಮುಂದಿಲ್ಲದ, ಆದರೆ ಸ್ವಯಂಪುರಿಪೂರ್ಣವಾದ, ಕಡೆ ತನಕ ನೆನಪುಳಿಯುವ, ಏನಾದರೂ ತನ್ನ ಜೀವನದಲ್ಲಿ ಘಟಿಸೀತು ಅಂತ...ಎಷ್ಟು ಕಾಯಬೇಕಾಯಿತು ಇದಕ್ಕಾಗಿ...ಆದರೆ ಹಾಗೆ ನೋಡಿದರೆ ಇನ್ನೂ ಏನೂ ಆಗಿಯೇ ಇಲ್ಲ. ಈವರೆಗೆ ಆದದ್ದೆಲ್ಲ ತಲೆಬಾಲವಿಲ್ಲದ್ದು. ಇನ್ನೂ ಪೂರ್ಣವಾಗಬೇಕು ಇದು- ಯಾರಿಗೆ ಗೊತ್ತು, ಆ ಫ್ರೆಂಚ್ ಕತೆಯ ಕೊನೆಯ ಹಾಗೆ- "ನಾನು Waiting For Godot ಓದುತ್ತಿದ್ದೆ ನೀವು ಮಲಗಿಕೊಂಡಾಗ." "`ಉ?" ಆಕೆ ಬಹಳ ಸರಳವಾಗಿ ಅನ್ನುವಂತೆ ಅಂದಳು: "ನಾನು ಎಚ್ಚರಾಗ್ಲಿ ಅಂತ ಕಾಯ್ಕೋತ?" ಆತ ನಕ್ಕು, ನಂತರ ಗಂಭೀರವಾಗಿ ಅಂದ: "ನಾವು ಏನೇನೋ ಅಗ್ಲಿ ಅಂತ ಕಾಯ್ತಿರತೀವಿ. ಆದರ ಎಲ್ಲಾ ಎಲ್ಲೆ ಆಗತಾವ ಜೀವನದಾಗ?" "ಯಾಕಾಗೊದಿಲ್ಲ ಪ್ರಯತ್ನ ಮಾಡಿದರ?" "ಆದೂ ಖರೇನs" -ಆತ ಆಕೆಯ ಕಡೆ ನೋಡಿದ. ಆತನ ದೃಷ್ಟಿ ಖಂಡಿತ ಅರ್ಥಪೂರ್ಣವಾಗಿದೆ- ಅನ್ನಿಸಿತು ಆಕೆಗೆ. ಆತ ತನಗೆ ಏನೋ ಹೇಳಬಯಸಿದಂತಿದೆ. ಹೇಗೆ ಹೇಳಲಿ ಅಂತ ಗೊಂದಲದಲ್ಲಿರುವಂತಿದೆ. ಪುಣೆಯಲ್ಲಿ ಇಳಿದ ಮೇಲೆ ಹೇಳೋಣವೇ ಅಂತ ವಿಚಾರಿಸುತ್ತಿರುವಂತಿದೆ. ಏನು ಹೇಳುವುದು ಅಂತ ಪ್ಲ್ಯಾನ್ ಮಾದುತ್ತಿರುವಂತಿದೆ- ಸಂಜೆ ಇಷ್ಟು ಹೊತ್ತಿಗೆ ಇಂಥಲ್ಲಿ ಬಾ ಅಂತ? -ಖರೇನೇ ಎಷ್ಟು ಸುಂದರವಾಗಿ ಮುಂದುವರೆಯುತ್ತಿದೆಯಲ್ಲಿ ತನ್ನ ಕತೆ...