ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಏನಿಲ್ಲ , ಹಿಂಗೇ ಸ್ವಲ್ಪ ತಲಿ ತಿರುಗಿಧಾಂಗ-" ಅನ್ನುತ್ತ ಆಕೆ ಹಾಸಿಗೆಯಲ್ಲಿ ಕುಸಿದು ಕುಳಿತಳು. "ಹಂಗಾರ ನೀ ಮಲಕೋ, ರಾಧಾಬಾಯೀಗೆ ಹೇಳ್ತೀನಿ ನಿನಗ ಛಲೋ ಒಂದು ಕಪ್ಪು ಬಿಸೀ ಚಹಾ ಮಾಡಿಕೊಡೂ ಅಂತ. ಡಾಕ್ಟರ್ಗೆ ಫೋನ್ ಮಾಡ್ಲೇನು ?" ಕಾಳಜಿಯಿಂದ ಕೇಳಿದ ಪ್ರಕಾಶ. "ಬ್ಯಾಡ ಬ್ಯಾಡ." "ಮಲಕೋ ನೀನು, ಬಸ್ಸಿನ್ಯಾಗ ಬಂದೀಯಲ್ಲ ಅದರ ಪರಿಣಾಮ ನೋಡು ಇದು. ರೆಸ್ಟ್ ತಗೋ. ಐದ ಮಿನಿಟಿನ್ಯಾಗ ಚಹಾ ಬರ್ತದ." ಅನ್ನುತ್ತ ಆತ ಅಡಿಗೆಮನೆ ಕಡೆ ಹೋದ. ಹಿಂದಿನಿಂದ ಎತ್ತರವಾದ ಆ ಆಕೃತಿ ನೋಡುತ್ತಿದ್ದಂತೆ ಒಮ್ಮೆಲೆ ಆಕೆಯ ಕಣ್ಣು ತುಂಬಿ ಬಂದವು. ತಾನು ಬೇಸರಪಟ್ಟುಕೊಂಡಿದ್ದ , ಮೊದ್ದು ಅಂದುಕೊಂಡಿದ್ದ ಈತನಿಗೆ ತನ್ನಲ್ಲಿ ಎಷ್ಟು ಪ್ರೀತಿಯಿದೆ. ಎಂತಹ ಕೆಲಸ ಮಾಡಿದೆ ತಾನು ! ಇನ್ನು ಒಂದೇ ತಾಸು-ನಂತರ ಎಲ್ಲ ಬಯಲಾಗಿ ಬಿಡುತ್ತದೆ. ತನ್ನನ್ನು ಇಷ್ಟು ಪ್ರೀತಿಸುವ ಗಂಡ, ಮಕ್ಕಳು, ಈ ಮನೆ ಎಲ್ಲ ತನ್ನ ಪಾಲಿಗೆ ಇದ್ದೂ ಇಲ್ಲವಾಗುತ್ತದೆ. ನಾಲ್ಕು ಗಂಟೆಗೆ ಫೋನ್ ಎತ್ತುವ ಪ್ರಕಾಶನಿಗೆ ಎಂತಹ ಆಘಾತ ಕಾದಿದೆ... ಆ ಅಪರಿಚಿತ ಎಂಥವನೋ. ಇತ್ತೀಚೆಗೆ ಪುಣೆಯಲ್ಲಿ ಬ್ಲ್ಯಾಕ್ಮೇಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆಯಂತೆ, ತನ್ನ ಹೆಸರು-ವಿಳಾಸ-ಹಸ್ತಾಕ್ಷರ ಸಹಿತ ಅವನ ಕಡೆಗಿದೆ. ಈ ಆಧಾರದ ಮೇಲೆ ಅವನು ಬೇಕಾದದ್ದು ಮಾಡಬಹುದು. ಪ್ರಕಾಶನಿಗೆ ಇದನ್ನೆಲ್ಲ ತೋರಿಸುವ ಬೆದರಿಕೆ ಹಾಕಿ ತನ್ನಿಂದ ಹಣ ದೋಚಬಹುದು. ಅಷ್ಟೇ ಆದರೆ ಅಡ್ಡಿಯಿಲ್ಲ, ಮತ್ತೇನಾದರೊ ಕೇಳಿದರೆ?... ತಾನು ನಿರಾಕರಿಸಿದರೆ ತನ್ನ ಗುಟ್ಟು ಬಯಲು ಮಾಡುತ್ತೇನೆಂದರೆ ? ಈ ಮನೆ-ಸಂಸಾರದೊಂದಿಗಿನ ತನ್ನ ಸಂಬಂಧ ? ಮನೆತನದ ಮರ್ಯಾದೆ ? ಮಕ್ಕಳ ಭವಿಷ್ಯ ? ಅಯ್ಯೋ ದೇವರೆ, ಎಂಥ ಹೊತ್ತು ತಂದಿಟ್ಟೆ.... ಸಾಹಸ ಬೇಕಾಗಿತ್ತಲ್ಲವೆ ತನಗೆ ? ಹಾಲಿನ ಭಾಂಡಿಯ ಜಗತ್ತಿನಿಂದ, ನೀರಸನೆನಿಸುವ ಗಂಡನಿಂದ, ಯಾಂತ್ರಿಕವೆನಿಸುವ ಸಂಸಾರದಿಂದ, ರೋಮ್ಯಾಂಟಿಕ್ ಬಿಡುಗಡೆ ಬೇಕಾಗಿತ್ತಲ್ಲವೆ ? ಆಕೆಗೆ ಒಮ್ಮೆಲೆ ಅಳಬೇಕು ಅನ್ನಿಸಿತು..... ಆತ್ಮಹತ್ಯೆ ?, ಹ್ಞಾ ಯಾಕಾಗಬಾರದು ? ನಾಚಿಕೆಗೆಟ್ಟು ಬಾಳು ಬಾಳುವುದಕ್ಕಿಂತ ಸಾಯುವುದು ಒಳ್ಳೆಯದಲ್ಲವೆ? ಪ್ರಕಾಶ ಎಷ್ಟು ಅಳಬಹುದು ತಾನು ಸತ್ತರೆ ? -ಆ ಕಲ್ಪನೆಯಿಂದ ಆಕೆಗೆ ಬಹಳ ಸಮಾಧಾನವೆನಿಸಿತು. ನಾಲ್ಕಕ್ಕೆ ಫೋನ್ ಮಾಡುವ ಅಪರಿಚಿತನಿಗೂ ಸುದ್ದಿ ತಿಳಿದು ಆತ ಧಾವಿಸಿ ಬರಬಹುದು..... ಆ ಫ್ರೆಂಚ್ ಕತೆಗಿಂತ ಹತ್ತು ಪಾಲು