ಪುಟ:ನಡೆದದ್ದೇ ದಾರಿ.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೨ ನಡೆದದ್ದೇ ದಾರಿ

     ಹೇಳುತ್ತಿದ್ದಂತೆ ಆತನ ಇನ್ನೊಂದು ಕೈಯ ಕಡೆ ಗಮನ ಹೋಗಿ ಒಮ್ಮೆಲೆ
     ಕಿರಿಚುವ ಧ್ವನಿಯಲ್ಲಿ ಕೇಳಿದಳು- "ಏನದು ? ಏನ ತಗೊಂಡೀ ? ತೋರಿಸು.'
          "ಹಿಂಗ್ಯಾಕ ಚೀರತಿ ಶಾಂತಿ ? ನಾ ಬಂದಾಗ ನೀ ಒಳಗಿದ್ದಿ ಅಂತ ನಿನ್ನ ಕರೀಲಿಲ್ಲ.
     ಊರಿಂದ ಅಕ್ಕ ಬಂದಳ.ಓದ್ಲಿಕ್ಕೆ ಏನರೆ ಕನ್ನಡ ಕಾದಂಬರಿ ಕೊಡು ಆಂದಳು. ನೀ
     ಇಟ್ಟಿರ್ತೀಯಲಾ ಅಂಥವೆಲ್ಲಾ ಕಚಡಾ.ಅದಕ್ಕ ನಿನ್ನ ಕಪಾಟಿನ್ಯಾಗಿನಿಂದ ತಗೊಂಡ್ರಾತು
     ಅಂತ ಬಂದೆ. ಹಂಗ   ನಿನ್ನ ಆರುತಿಂಗಳ  ಪರೀಕ್ಷಾದ್ದು ಸಾಯನ್ಸ್ ಪೇಪರು ಸಿಕ್ತು.
     ನೋಡಿಕೋತ ಕೂತೆ.ಅಷ್ಟರಾಗ ನೀ ನನ್ನ ಕಟಿಗೀ ತಗೊಡು ಹೊಡೀಲಿಕ್ಕೇ ಬಂದಿ."
          "ಕೊಡೂ ನನ್ನ ಪೇಪರು- ಕೊಡು,ಕೊಡು,ಕೊಡು " -ಶಾಂತಿಯ ದನಿಯಲ್ಲಿ
     ಅಳು ಇಣುಕಿತು.
          ಅವಳ ಕೈಬಿಟ್ಟು ಪೇಪರನ್ನು ಕೊಟ್ಟು ಒಂದು ಗಳಿಗೆ ಅವಳನ್ನೇ ನೋಡಿ ಶಂಕರ
     ಅಂದ," ಶಾಂತಿ, ನೀ ಇಷ್ಟ ಹುಶಾರ ಇದ್ದೀ ಅಂತ ನನಗ ಗೊತ್ತ   ಇದ್ದಿದ್ದಿಲ್ಲ ನೋಡು.
     ಎಷ್ಟ ಛೆಂದ ಬರದೀಯ ಪೇಪರು. ಅದಕ್ಕ ನಿನಗ ನೂರಕ್ಕ ತೊಂಬತ್ತೆರಡು ಮಾರ್ಕ್ಸ್
     ಕೊಟ್ಟಾರ ನಿಮ್ಮ ಮಾಸ್ತರು. ನಾ ಅಗಿದ್ರ ನೂರಕ್ಕ ನೂರು ಕೊಡ್ತಿದ್ದೆ."
           ಗಡಿಬಿಡಿಯಿಂದ ಕಪಾಟಿನ ಬಾಗಿಲು ಭದ್ರಪಡಿಸುತ್ತ ಆಕೆ ಅಂದಳು,
     "ಹೋಗ್ಹೂಗು, ನಿನ್ನ ಮಾರ್ಕ್ಸ್ ಯಾರಿಗೆ ಬೇಕು ? ನಿಂದು ನನಗ ಏನೂ ಬ್ಯಾಡ."
          "ಬ್ಯಾಡ ? ಅದರ ಶಾಂತೀ, ನಾ ನಿಂದು ಏನಾರೆ ಕೇಳಿದ್ರ ? ಕೊಡ್ತೀಯೇನು ?"
          "ಏನರೆ ಅಂದ್ರ ? ಏನು ? " - ಅವಳಿಗೆ ಅಚ್ಚರಿ. ಇವನಿಗೂ ತನ್ನ ಸ್ಪ್ಯಾಂಪುಗಳ,
      ನವಿಲುಗರಿಗಳ ಸಂಗ್ರಹದ ಮೇಲೆ ಕಣ್ಣೋ ಏನೋ,
         "ಏನರೆ  ಅಂದ್ರ ಏನೋ.ಕೊಡ್ತೀ ಇಲ್ಲೋ ಹೇಳು ಮೊದಲು" - ಆತನ
      ಕಣ್ಣುಗಳಲ್ಲಿ  ತುಂಟ ನಗು.
         " ನೀ ಕೇಳಲಾ ಮೊದಲು" - ಹಟದಿಂದ ಅಂದಳು ಆಕೆ.ಮೊದಲೇ ಹ್ಞೂ ಅಂದು
      ಆಮೇಲೆ ಪೇಚಾಡುವ ಪೆದ್ದಿ ತಾನಾಗಬಾರದಲ್ಲ.
         " ಕೇಳ್ತೀನಿ.ಆದರೆ ಈಗಲ್ಲ. ನಾ ದಿಲ್ಲೀಗೆ ಹೋದಮ್ಯಾಲ ಪತ್ರಾ ಬರೀತೀನಿ.
      ಪತ್ರದಾಗ ಕೇಳ್ತೀನಿ. ಕೊಡ್ತೀಯೋ ಇಲ್ಲೋ ನೋಡೋಣ."
         "ನೀ ಊರಿಗೆ ಹೋಗ್ತೀಯಾ ? ಸೂಟಿ ಮುಗೀತೇನು ನಿಂದು ? " - ಆಕೆಗೆ
      ಬೇಸರ. ಸಂಜೆ ಇನ್ನು ಯಾರೊಂದಿಗೆ ಬ್ಯಾಡ್ಮಿಂಟನ್ ಆಡುವುದು ? 
          "ಮುಗೀತದ ಇನ್ನೊಂದ ಎರಡದಿನಕ್ಕೆ. ನಾ ನಾಳೇ ಹೋಗ್ಬೇಕು. ನಾ ಹೇಳಿದ್ದು
      ಮರೀಬ್ಯಾಡ ಹ್ಞಾ ಮತ್ತೆ. ನಾ ಪತ್ರಾ ಬರೀಲಿ ಹೌದಲ್ಲೋ ನಿನಗ ? '
           "ಛಿ, ಗಂಡು  ಹುಡುಗ್ರು ಪತ್ರಾ ಬರದರ ಸೇರೂದಿಲ್ಲ ನನಗ್."